ಬಿಡಿಎ ಮಾದರಿಯಲ್ಲಿ ಮನೆ ನಿರ್ಮಾಣ: ಎಸ್‌ಎಸ್‌ಎಂ

KannadaprabhaNewsNetwork | Published : Oct 16, 2024 12:38 AM

ಸಾರಾಂಶ

ದಾವಣಗೆರೆಯಲ್ಲಿ ನಡೆದ ದೂಡಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಬೆಂಗಳೂರಿನ ಬಿಡಿಎ ಮಾದರಿಯಲ್ಲಿ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ದೂಡಾಗೆ ಸೂಚನೆ ನೀಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.

ನಗರದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ಪ್ರಾಧಿಕಾರದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬಿಡಿಎ ಮನೆಗಳನ್ನು ನಿರ್ಮಾಣ ಮಾಡಿದ್ದು, ಅದೇ ಮಾದರಿಯಲ್ಲಿ ದೂಡಾ ವ್ಯಾಪ್ತಿಯಲ್ಲೂ ಗೃಹಗಳ ನಿರ್ಮಿಸಲು ಹೇಳಿದ್ದೇನೆ ಎಂದರು.

ಅವಳಿ ನಗರದ ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಮನೆಗಳ ನಿರ್ಮಾಣ ಮಾಡಲಾಗುವುದು. ಎರಡೂ ನಗರ ಸೇರಿದಂತೆ ಇಡೀ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಮುಂದಿನ ಪ್ರಕ್ರಿಯೆ ಬಗ್ಗೆಚರ್ಚಿಸಲು ಸಭೆಯಲ್ಲಿ ಕೆಲವು ಸಲಹೆ, ಸೂಚನೆ ನೀಡಿದ್ದೇನೆ ಎಂದು ಸಚಿವ ಮಲ್ಲಿಕಾರ್ಜುನ ಹೇಳಿದರು.

ವಿವಿಧ ಪ್ರದೇಶಗಳ ಆದಾರದಲ್ಲಿ ದರ ನಿಗದಿಪಡಿಸಿ, ಅಭಿವೃದ್ಧಿ ಪ್ರಾಧಿಕಾರದಿಂದ ಹೊಸ ಬಡಾವಣೆಗಳು, ನಿವೇಶನಗಳು, ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ ಚರ್ಚಿಸಲಾಗಿದೆ. ದಾವಣಗೆರೆ ಉತ್ತರ, ದಕ್ಷಿಣ ಭಾಗದಲ್ಲಿ ಹೊಸ ಲೇಔಟ್‌ಗಳ ನಿರ್ಮಾಣವಾಗಿವೆ. ಪಾರದರ್ಶಕವಾಗಿ ಇ-ಸ್ವತ್ತು ನೀಡಬೇಕು. ಈ ಸ್ವತ್ತನ್ನು ಸಹ ಆನ್‌ಲೈನ್ ಮೂಲಕ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆ ಜಿಲ್ಲೆ ಉತ್ತಮವಾಗಿದೆ. 2003 ರಿಂದ 2008ರ ಅವದಿಯಲ್ಲಿ ಆಗಿದ್ದ ಕಾಮಗಾರಿಗಳಿಂದಾಗಿ ದಾವಣಗೆರೆ ಮಹಾ ನಗರ, ಜಿಲ್ಲೆಗೆ ಖ್ಯಾತಿ ಬಂದಿದೆ. ವಿನೋಬ ನಗರ, ಯಲ್ಲಮ್ಮ, ನಗರ, ಜಾಲಿ ನಗರ ಸೇರಿದಂತೆ ಹತ್ತಾರು ಬಡಾವಣೆಗಳಿಂದ ಬಂದಿದ್ದ ಸುಮಾರು ₹40 ಸಾವಿರ ಅರ್ಜಿಗಳನ್ನು ಅಕ್ರಮ ಸಕ್ರಮದಡಿ ಮಾಡಿದ್ದು, ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದರು.

ಸಾವಿರಾರು ರು. ಇದ್ದ ಭೂಮಿಯ ಬೆಲೆ ಇಂದು ಕೋಟಿ ಗಳಿಗೆ ತಲುಪಿದೆ. ನಮ್ಮ ಅವದಿಯಲ್ಲಿ ಆದ ಕೆಲಸ, ಕಾರ್ಯಗಳನ್ನು ಜನರು ಸ್ಮರಿಸುತ್ತಿದ್ದಾರೆ. ಬೆಂಗಳೂರು ಬಿಡಿಎ ಮಾದರಿಯಲ್ಲಿ ಜನರಿಗೆ ಅನುಕೂಲ ಆಗುವಂತೆ ಮನೆಗಳನ್ನು ನಿರ್ಮಿಸಲಾಗುವುದು. ದಾವಣಗೆರೆಯಲ್ಲೊಂದು ನಿವೇಶನ, ಸೂರು ಹೊಂದಬೇಕೆಂಬ ಬಡ, ಮಧ್ಯಮ ವರ್ಗದ ಜನರ ಕನಸು ಸಾಕಾರಕ್ಕೆ ತಾವು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮೇಯರ್ ಕೆ.ಚಮನ್ ಸಾಬ್‌, ಉಪ ಮೇಯರ್ ಶಾಂತಕುಮಾರ ಸೋಗಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ದೂಡಾ ಆಯುಕ್ತ ಹುಲ್ಲಮನೆ ತಿಮ್ಮಪ್ಪ, ಪಾಲಿಕೆ ಆಯುಕ್ತೆ ರೇಣುಕಾ ಇತರರು ಇದ್ದರು.

Share this article