ಮಂಗಳೂರಲ್ಲಿ ಮಿಯಾವಾಕಿ ಅರಣ್ಯ ತೆರವಿಗೆ ಹೈಕೋರ್ಟ್ ತಡೆ

KannadaprabhaNewsNetwork | Published : Oct 16, 2024 12:38 AM

ಸಾರಾಂಶ

ವಿಚಾರಣೆಗೆ ತೆಗೆದುಕೊಂಡ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟಿಸ್ ಮೊಹಮ್ಮದ್ ನವಾಜ್ ಅವರಿದ್ದ ಪೀಠವು ಅರ್ಜಿಯನ್ನು ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಪದುವಾ ಜಂಕ್ಷನ್ ಬಳಿ ನೆಟ್ಟು ಸಂರಕ್ಷಿಸಲಾಗುತ್ತಿದ್ದ ಮಿಯಾವಾಕಿ ಅರಣ್ಯವನ್ನು ಕಡಿಯದಂತೆ ಹೈಕೋರ್ಟ್ ಆದೇಶಿಸಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಿನ್ನಡೆ ಉಂಟಾಗಿದೆ.ಮಂಗಳೂರಿನ ವನ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಸಿಂಜಿನ್ ಇಂಟರ್‌ನ್ಯಾಷಲ್‌ ಲಿ. ಮತ್ತು ಬಯೋಕೊನ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ನೆಟ್ಟು ಸಂರಕ್ಷಿಸಲಾಗುತ್ತಿದ್ದ 1,000ಕ್ಕಿಂತ ಅಧಿಕ ಗಿಡ - ಮರಗಳಿಂದ ಕೂಡಿದ್ದ ಮಿಯಾವಾಕಿ ಅರಣ್ಯವನ್ನು ರಾಷ್ಟ್ರೀಯ ಹೆದ್ದಾರಿ‌ಯ ವಿಸ್ತರಣೆ ಉದ್ದೇಶಕ್ಕಾಗಿ ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ವಿಚಾರಣೆಗೆ ತೆಗೆದುಕೊಂಡ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟಿಸ್ ಮೊಹಮ್ಮದ್ ನವಾಜ್ ಅವರಿದ್ದ ಪೀಠವು ಅರ್ಜಿಯನ್ನು ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.2022ರಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಸಿ.ಎಸ್.ಆರ್ ಫಂಡಿಂಗ್ ಮೂಲಕ ಮಂಗಳೂರಿನಲ್ಲಿ ಒಂದು ಅರ್ಬನ್ ಫಾರೆಸ್ಟ್/ಮಿಯಾವಾಕಿ ಅರಣ್ಯವನ್ನು ನಿರ್ಮಿಸಿ ಪೋಷಿಸುವಂತೆ ಈ ಸಂಸ್ಥೆಗಳಿಗೆ ಬೇಡಿಕೆ ಇಟ್ಟಿತ್ತು. ಇದಕ್ಕಾಗಿ ಪದುವಾ ಜಂಕ್ಷನ್ ಬಳಿಯ ಸ್ಥಳವನ್ನು ಮಂಜೂರು ಮಾಡಿತ್ತು. ಅದರಂತೆ ಮಂಗಳೂರಿನ ವನ ಚಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿ ಈ ಪ್ರದೇಶದಲ್ಲಿ 1,000ಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುತ್ತಿತ್ತು.

ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅರಣ್ಯ ಬೆಳೆಸಿರುವ ಪ್ರದೇಶ ಪ್ರಾಧಿಕಾರಕ್ಕೆ ಸೇರಿದ್ದು, ಅಲ್ಲಿ ಬೆಳೆಸಿರುವ ಮರಗಳನ್ನು ಕಡಿದು ತೆರವುಗೊಳಿಸುವಂತೆ ಆದೇಶಿಸಿತ್ತು.

ಶರವೇಗದಲ್ಲಿ ಬೆಳೆಯುತ್ತಿರುವ ಮಂಗಳೂರು ನಗರದ ಮಧ್ಯೆ ವನಪ್ರದೇಶ ಒಂದು ಜೀವ ಸಂಜೀವಿನಿಯೇ ಆಗಿದೆ. ಹಲವಾರು ಪ್ರಾಣಿ ಪಕ್ಷಿಗಳ ಸಂಕುಲಗಳಿಗೆ ಇದು ಆಶ್ರಯದಾಮವೇ ಆಗಿತ್ತು.

ವಾದಿಗಳ ಪರವಾಗಿ ಬೆಂಗಳೂರಿನ ಯುವ ವಕೀಲರಾದ ಅಶ್ವಿನ್ ಕುಟಿನ್ಹಾ, ಆರ್.ಪಿ ಡಿಸೋಜಾ ಅಸೋಸಿಯೇಟ್ಸ್ ವಾದ ಮಂಡಿಸಿದ್ದರು.

Share this article