ಕ್ಷೌರಿಕ ವೃತ್ತಿಯನ್ನೇ ಉದ್ದಿಮೆಯಾಗಿಸುವಲ್ಲಿ ಶ್ರಮಿಸಿ: ಶಾಸಕ ಆರಗ ಜ್ಞಾನೇಂದ್ರ ಸಲಹೆ

KannadaprabhaNewsNetwork | Published : Oct 16, 2024 12:38 AM

ಸಾರಾಂಶ

ಕೋಣಂದೂರಿನಲ್ಲಿ ಭಂಡಾರಿ ಸಮಾಜದ ಕುಟುಂಬ ಸೌಹಾರ್ದ ಕಾರ್ಯಕ್ರಮವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿ, ಕ್ಷೌರಿಕರು ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಸಲಹೆಯಿತ್ತರು.

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ಭಂಡಾರಿ ಸಮಾಜದ ಕುಲ ಕಸುಬಾದ ಕ್ಷೌರಿಕ ವೃತ್ತಿಯ ಬಗ್ಗೆ ಸಮಾಜ ಗೌರವ ಭಾವನೆ ಹೊಂದಿದೆ. ವೃತ್ತಿಯಿಂದ ಎಲ್ಲರ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಕ್ಷೌರಿಕರು ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಈ ವೃತ್ತಿಯನ್ನು ಉದ್ದಿಮೆಯಾಗಿ ಪರಿವರ್ತಿಸುವಲ್ಲಿ ಶ್ರಮಿಸಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆಶಯ ವ್ಯಕ್ತಪಡಿಸಿದರು.

ಕೋಣಂದೂರಿನಲ್ಲಿ ಮಂಗಳವಾರ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕು ಭಂಡಾರಿ ಸಮಾಜದ ಸಹಯೋಗದಲ್ಲಿ ನಡೆದ ಬೆಂಗಳೂರು ವಲಯದ ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ ಹಾಗೂ ಕೌಟುಂಬಿಕ ಸ್ನೇಹಕೂಟವನ್ನು ಉದ್ಘಾಟಿಸಿ, ಸಂಖ್ಯೆಯಲ್ಲಿ ಕಡಿಮೆಯಾಗಿದ್ದರೂ ಸಂಘಟನೆಯಿಂದ ಒಂದು ಸ್ವಾಭಿಮಾನಿ ಸಮಾಜವಾಗಿ ಹೊರಹೊಮ್ಮುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಸರ್ಕಾರಿ ಉದ್ಯೋಗ ದುರ್ಬರವಾಗಿರುವ ಈ ಕಾಲಘಟ್ಟದಲ್ಲಿ ಬದಲಾಗುತ್ತಿರುವ ಫ್ಯಾಷನ್ನಿಗೆ ಅನುಗುಣವಾಗಿ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಮತ್ತು ಕ್ಷೌರಿಕ ವೃತ್ತಿ ಉದ್ದಿಮೆಯಾಗಿಯೂ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ಚಿಂತನೆ ನಡೆಸಬೇಕಿದೆ. ಸೆಲೂನ್‍ಗಳಲ್ಲಿ ನಡೆಯುವ ಚರ್ಚೆ ರಾಜಕಾರಣಿಗಳ ಭವಿಷ್ಯವನ್ನೂ ಬದಲಿಸುವಷ್ಟರ ಮಟ್ಟಿಗೆ ಪ್ರಭಾವಿಯಾಗಿದೆ. ಈ ಸಮಾಜದ ಋಣವೂ ನನ್ನ ಮೇಲಿದೆ ಎಂದೂ ಹೇಳಿದರು.

ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕ್ಷೌರಿಕ ವೃತ್ತಿ ಭಂಡಾರಿ ಸಮಾಜದ ಕುಲ ಕಸುಬಾಗಿದ್ದರೂ ಈ ಸಮಾಜದ ಇಂದಿನ ಯುವಕರು ಹಿರಿಯರು ಹಾಕಿದ ಆಲದ ಮರಕ್ಕೆ ನೇಣು ಎಂಬಂತೆ ಇದೇ ಉದ್ಯೋಗಕ್ಕೆ ಮಾತ್ರವೇ ಸೀಮಿತ ರಾಗದೇ ಆಡಳಿತಾತ್ಮಕ ಹುದ್ದೆ ಸೇರಿದಂತೆ ಸಮಾಜದ ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಶಿಕ್ಷಣದ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದೂ ಕರೆ ನೀಡಿದರು.

ಇದೇ ವೇಳೆ ವಿಘ್ನಹರ್ತ ಸಂಸ್ಥೆಯ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣೆ ಹಾಗೂ ಶ್ವರಣ ಯಂತ್ರಗಳ ವಿತರಣೆ ನಡೆಯಿತು.

ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಮಾಜಿ ಸಚಿವ ಹರತಾಳು ಹಾಲಪ್ಪ, ಬೆಂಗಳೂರು ವಲಯದ ಭಂಡಾರಿ ಸಮಾಜದ ಅಧ್ಯಕ್ಷ ಪ್ರಸಾದ್ ಭಂಡಾರಿ ಮುನಿಯಾಲು, ಕಚ್ಚೂರು ನಾಗೇಶ್ವರ ದೇವಸ್ಥಾನದ ಅಧ್ಯಕ್ಷ ಲಕ್ಷ್ಮಣ ಕರಾವಳಿ, ಶಶಿಧರ ಕಾರ್ಕಳ, ಗಿರೀಶ್ ಭಂಡಾರಿ, ಮಂಜುನಾಥ ಭಂಡಾರಿ, ಗೋಪಾಲ ಭಂಡಾರಿ ಹಾಗೂ ಸಿದ್ದೇಶ್ ಭಂಡಾರಿ ಇದ್ದರು.

Share this article