ಕನ್ನಡಪ್ರಭ ವಾರ್ತೆ ದಾವಣಗೆರೆ
ಬೀಗ ಹಾಕಿದ್ದ ಮನೆ ಬೀಗ ಮುರಿದು, ಬೀರುವಿನಲ್ಲಿದ್ದ ಬೆಳ್ಳಿ, ಚಿನ್ನಾಭರಣ ಕಳವು ಮಾಡಿದ್ದ ಮೂವರು ಮನೆಗಳ್ಳರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಮಚ್ಚು ಹಾಗೂ 12.28 ಲಕ್ಷ ರು.ಮೌಲ್ಯದ ಸ್ವತ್ತನ್ನು ಬಸವಾಪಟ್ಟಣ ಪೊಲೀಸರು ಜಪ್ತಿ ಮಾಡಿದ್ದಾರೆ.ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎಸ್ಪಿ ಕಚೇರಿ ನಿರೀಕ್ಷಕ ಇಸ್ಮಾಯಿಲ್, ಪಿಎಸ್ಐ ಮಂಜುನಾಥ, ಬಸವಾಪಟ್ಟಣ ಪಿಎಸ್ಐ ಇಮ್ತಿಯಾಜ್, ಇತರ ಸಿಬ್ಬಂದಿ ತಂಡವನ್ನು ಎಸ್ಪಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.
ಏನಿದು ಪ್ರಕರಣ?:ಚನ್ನಗಿರಿ ತಾ.ಚಿರಡೋಣಿ ಗ್ರಾಮದ ವಾಸಿಗಳಾದ ಶಿವಮೂರ್ತಿ ಅಲಿಯಾಸ್ ಮುರುಡ ತೋಳಪ್ಪರ, ರಮೇಶ ಅಲಿಯಾಸ್ ಗಿಡ್ಡ ರಾಮ ಕೋನೆಯಪ್ಪ ಹಾಗೂ ರುದ್ರೇಶ ಬಂಧಿತರು. ಚಿರಡೋಣಿ ಕ್ಯಾಂಪ್ ನ ವಾಸಿ ಹಂಸತಾರಕಂ ನಾರಾಯಣ ಮೂರ್ತಿ ತಮ್ಮ ಕುಟುಂಬ ಸಮೇತ ಏ.27ರಂದು ಕಾರ್ಯ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು, ಬೆಂಗಳೂರಿಗೆ ತೆರಳಿದ್ದರು.
ಚಿರಡೋಣಿ ಕ್ಯಾಂಪ್‌ನ ವಾಸಿ ಹಂಸತಾರಕಂ ಅವರ ಮನೆಯ ಬೀಗ ಒಡೆದು, ಮನೆಗೆ ನುಗ್ಗಿದ್ದ ಕಳ್ಳರು ಬೀರುವಿನಲ್ಲಿದ್ದ ಬೆಳ್ಳಿ, ಚಿನ್ನದ ಆಭರಣ, ನಗದು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ನಂತರ ಆ.14ರ ರಾತ್ರಿ 7.40ರ ವೇಳೆ ಸುಮಲತಾ ಸತ್ಯನಾರಾಯಣ, ಅತ್ತೆ ವೀರಯಮ್ಮ ಚಿರಡೋಣಿ ಕ್ಯಾಂಪ್‌ನ ತಮ್ಮ ಮನೆಯಲ್ಲಿದ್ದಾಗ ಕಪ್ಪು ಬಣ್ಣದ ಬಟ್ಟೆ ಮಾಸ್ಕ್ ಹಾಕಿದ್ದ ಇಬ್ಬರು ಅಪರಿಚಿತರು, ಕೈಯಲ್ಲಿ ಅಡಿಕೆ ಸುಲಿಯುವ ಕತ್ತಿ ಮತ್ತು ಚಾಕು ಹಿಡಿದು, ಮನೆ ಹಿಂಬಾಗಿನಿಂದ ಒಳಗೆ ಪ್ರವೇಶಿಸಿ, ಅತ್ತೆ ವೀರಯಮ್ಮ ಮೇಲೆ ಹಲ್ಲೆ ಮಾಡಿ, ವೃದ್ಧೆ, 2 ಚಿನ್ನದ ಮಾಂಗಲ್ಯ ಸರ ಸುಲಿಗೆ ಮಾಡಿದ್ದರು. ಬಸವಾಪಟ್ಟಣದಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ಪರಮೇಶ್ವರ ಹೆಗಡೆ, ಚನ್ನಗರಿ ಎಎಸ್ಪಿ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು.