ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಮಾಜಿ ಸೈನಿಕರಿಗೆ ನಿವೇಶನ ಸೌಲಭ್ಯ ಮಂಜೂರು ಮಾಡಿಕೊಡುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಭರವಸೆ ನೀಡಿದ್ದಾರೆ.
- ಹೊನ್ನಾಳಿಯಲ್ಲಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ವಾರ್ಷಿಕ ಸಭೆ, ಪ್ರತಿಭಾ ಪುರಸ್ಕಾರ
- - -
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಮಾಜಿ ಸೈನಿಕರಿಗೆ ನಿವೇಶನ ಸೌಲಭ್ಯ ಮಂಜೂರು ಮಾಡಿಕೊಡುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಭರವಸೆ ನೀಡಿದರು.
ಭಾನುವಾರ ಅವಳಿ ತಾಲೂಕಿನ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದ ಸಂಘದ 2026-27ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ಮತ್ತು ಹಾಲಿ, ಮಾಜಿ ಸೈನಿಕರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸೈನಿಕರ ಸೇವೆ ಅಪರಿಮಿತವಾಗಿದೆ. ದೇಶದ ಜನತೆ ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡುತ್ತಾರೆ ಎಂದರೆ ಇದಕ್ಕೆ ಪ್ರಮುಖ ಕಾರಣ ನಮ್ಮ ಹೆಮ್ಮೆಯ ಸೈನಿಕರು. ಗಡಿಯಲ್ಲಿ ಅಹೋರಾತ್ರಿ ದೇಶದ ರಕ್ಷಣೆಗಾಗಿ ತಮ್ಮ ಕುಟುಂಬವನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ. ಇದು ಅತ್ಯಂತ ಪವಿತ್ರವಾದ ಸೇವೆಯಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ರೈತ ಮತ್ತು ಸೈನಿಕ ಈ ದೇಶದ ಎರಡು ಕಣ್ಣುಗಳಿದ್ದಂತೆ. ಜೈ ಜವಾನ್, ಜೈ ಕಿಸಾನ್ ಎಂದು ದೇಶದ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಂದೇ ಹೇಳಿದ್ದಾರೆ. ಆ ಮೂಲಕ ರೈತ ಮತ್ತು ಸೈನಿಕರ ಮಹತ್ವದ ಬಗ್ಗೆ ತಿಳಿಸಿದ್ದಾರೆ ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸಂಚಾಲಕಿ ಜ್ಯೋತಿ ಅಕ್ಕ ಅವರು ಕೂಡ ಸೈನಿಕರ ಅಮೋಘ ಮತ್ತು ಅನನ್ಯ ಸೇವೆಗಳ ಕುರಿತು ಮಾತನಾಡಿದರು. ಸಂಸ್ಥಾಪಕ ಅಧ್ಯಕ್ಷ ಹಾಗೂ ಹಾಲಿ ಗೌರವಾಧ್ಯಕ್ಷ ಎಂ.ವಾಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಗಂಗಾಧರ್ ಸ್ವಾಗತಿಸಿ, ನಿರ್ದೇಶಕರಾದ ದಿಡಗೂರು ಹನುಮಂತಪ್ಪ ನಿರೂಪಿಸಿದರು.
ಸಂಘದ ಖಜಾಂಚಿ ವೀರೇಶ್ ಕಳೆದ ವರ್ಷದ ಲೆಕ್ಕಪತ್ರ ಮಂಡಿಸಿದರು. ಅಧ್ಯಕ್ಷರಾದ ಪರಮೇಶ್ವರಪ್ಪ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಸೈನಿಕರ ವಿಭಾಗದ ಕರ್ನಾಟಕ ಸರ್ಕಾರ ಮಹಿಳಾ ರಾಜ್ಯಾಧ್ಯಕ್ಷೆ ಸ್ವರೂಪ ರಾಣಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಾಲಿ, ಮಾಜಿ ಸೈನಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಸಂಘದ ಹಿರಿಯ ಸದಸ್ಯರು ಹಾಗೂ ಇತ್ತೀಚೆಗೆ ನಿವೃತ್ತಿಯಾದ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ರೈತ ಮುಖಂಡರು, ಸೈನಿಕರ ಕುಟುಂಬ ವರ್ಗದವರು, ಮಾಜಿ ಸೈನಿಕರು ಭಾಗವಹಿಸಿದ್ದರು. ನಿರ್ದೇಶಕ ಸಿದ್ದೇಶ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.