ಕನ್ನಡಪ್ರಭ ವಾರ್ತೆ, ಕಡೂರು
ತಾಲೂಕಿನಲ್ಲಿ 16,431 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಪೋಲಿಯೋ ಮುಕ್ತ ಭಾರತದ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.ಭಾನುವಾರ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್, ಆರೋಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಕಾರ್ಯಕ್ಕೆ ಮಕ್ಕಳಿಗೆ ಲಸಿಕೆ ಹಾಕಿ ಚಾಲನೆ ನೀಡಿ ಮಾತನಾಡಿದರು. ಭಾರತವನ್ನು ಪೋಲಿಯೋ ಮುಕ್ತ ವಾಗಿಸುವ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. 2014ರಲ್ಲಿ ಪೋಲಿಯೋ ಮುಕ್ತ ಭಾರತ ಎಂದು ಘೋಷಿಸಿದರೂ, ಪಶ್ಚಿಮ ಬಂಗಾಳದಲ್ಲಿ 2 ಪ್ರಕರಣ, ಆಫಘಾನಿಸ್ತಾನ, ಪಾಕಿಸ್ತಾನ ದೇಶ ಗಳಲ್ಲಿ ಪೋಲಿಯೋ ಪ್ರಕರಣಗಳು ಹೆಚ್ಚಾದ ಕಾರಣ ರೋಟರಿ ಸಹಯೋಗದಲ್ಲಿ ಲಸಿಕೆ ನೀಡಿಕೆ ಮುಂದುವರಿಯುತ್ತಿದೆ ಎಂದರು.
ಕಡೂರು ತಾಲೂಕಿನಲ್ಲಿ !6,431ಮಕ್ಕಳು, ಪಟ್ಟಣಗಳಲ್ಲಿ 4108, ಗ್ರಾಮಾಂತರದಲ್ಲಿ 12,323 ಮಕ್ಕಳು ಮತ್ತು ಹೊರಗಿ ನಿಂದ ಬಂದ 176 ಮಕ್ಕಳಿಗೆ ಲಸಿಕೆ ಹಾಕಲಿದ್ದು, ಇದಕ್ಕೆ 630 ಸಿಬ್ಬಂದಿ, ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯ ಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಸಹಕಾರವಿದೆ. ತಾಲೂಕಿನ ಮಕ್ಕಳಿಗೆ ಲಸಿಕೆ ನೀಡುವ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ ದತ್ತಾತ್ರಿ ಮಾತನಾಡಿ ಇಂದು ದೇಶಾದ್ಯಂತ ಲಸಿಕೆ ನಡೆಯುತ್ತಿದೆ. ಅದರಂತೆ ಕಡೂರು ತಾಲೂಕಿನಲ್ಲಿ ಹುಟ್ಟಿದ ಮಗುವಿನಿಂದ 5 ವರ್ಷದ ವರೆಗಿನ 16,6431 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 2011ರಲ್ಲಿ ನಮ್ಮ ದೇಶದಲ್ಲಿ 2 ಪ್ರಕರಣ ಪತ್ತೆ ಆಗಿದ್ದು ಚಿಕಿತ್ಸೆ ಮುಂದುವರಿಯಿತು. ವಿಶ್ವ ಆರೋಗ್ಯ ಸಂಸ್ಥೆ ಪೋಲಿಯೋ ಮುಕ್ತ ಭಾರತ ಎಂದು ಘೋಷಿಸಿದೆ. ಆದರೆ ನೆರೆ ರಾಷ್ಟ್ರಗಳಾದ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ 120 ಪ್ರಕರಣ ಪತ್ತೆ ಆದ ಕಾರಣ ಲಸಿಕೆ ನೀಡಿಕೆ ಮುಂದುವರಿಯುತ್ತಿದೆ.
ಕಡೂರಿನಲ್ಲಿ 131 ಬೂತ್ ಗಳನ್ನು ಮಾಡಲಾಗಿದೆ. 28 ಮೊಬೈಲ್ ಟೀಂಗಳನ್ನು ಮಾಡಿ ಮನೆ ಮನೆಗೆ ತೆರಳಿ ಲಸಿಕೆ ಹಾಕು ವುದು 15 ತಂಡಗಳು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸಾರ್ವಜನಿಕ ಸ್ಥಳದಲ್ಲಿ ಕೆಲಸ ಮಾಡಲಿವೆ ಈ ಕಾರ್ಯಕ್ರಮಕ್ಕೆ ಶಾಸಕರು, ರೋಟರಿ ಸಹಕಾರ ನೀಡಿದೆ. ಆರೋಗ್ಯ ಇಲಾಖೆ ಪರವಾಗಿ ಅವರಿಗೆ ಕೃತಜ್ಞತೆ ಅರ್ಪಿಸುತ್ತೇವೆ ಎಂದರು.
ಕಡೂರು ರೋಟರಿ ಕ್ಲಬ್ ಅಧ್ಯಕ್ಷ ರಘುರಾಮ್ ನಮ್ಮ ರಾಷ್ಟ್ರ ಪೋಲಿಯೋ ಮುಕ್ತವಾಗಿದೆ. ನೆರೆ ದೇಶಗಳಲ್ಲಿ ಪೋಲಿಯೋ ಪ್ರಕರಣ ಇರುವ ಕಾರಣದಿಂದ 2029 ರವರೆಗೆ ಲಸಿಕೆ ನೀಡಿಕೆ ಮುಂದುವರಿಯಲಿದೆ ಎಂದರು.
ರೋಟರಿ ಕಾರ್ಯದರ್ಶಿ ವಡೇರಹಳ್ಳಿ ಅಶೋಕ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಚಂದಾ, ಆರೋಗ್ಯಇಲಾಖೆ ಮಮತಾ, ಆಸ್ಪತ್ರೆಯ ಅಧಿಕಾರಿ ಸಿಬ್ಬಂದಿ ಮತ್ತಿತರರು ಇದ್ದರು.28ಕೆಕೆಡಿಯು 1. ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ಕೆ ಶಾಸಕ ಕೆ. ಎಸ್ ಆನಂದ್ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ತಾಲೂಕು ವೈದ್ಯಾಧಿಕಾರಿ ಡಾ. ದತ್ತಾತ್ರಿ ಶ್ರೀನಿವಾಸ್ ಮತ್ತಿತರರು ಇದ್ದರು.