- ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಪ್ರತಿಭಾ ಅಕಾಡೆಮಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಪಂಚದ ಯಾವ ಮೂಲೆಯಲ್ಲಿಯೂ ಗುರುತಿಸಿಕೊಳ್ಳಲು ಅವಕಾಶಗಳಿವೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು.

ಭಾನುವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಪ್ರತಿಭಾ ಅಕಾಡೆಮಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮ ಜಿಲ್ಲೆಗೆ ಹೆಮ್ಮೆಯಾಗಿದ್ದಾರೆ. ರಾಜ್ಯದ ಸಚಿವ ಸತೀಶ್ ಜಾರಕಿ ಹೊಳಿ ನೇತೃತ್ವದಲ್ಲಿ ರಾಜ್ಯಾದ್ಯಂತ ಎಲ್ಲಾ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಡಾ. ಅಂಬೇಡ್ಕರ್ ಆಶಯದಂತೆ ಪ್ರತಿಯೊಬ್ಬರು ಶಿಕ್ಷಣ ಕಲಿಯಬೇಕು. ದೇಶದ ಕಟ್ಟ ಕಡೆಯ ಗ್ರಾಮದ ಮಕ್ಕಳು ಸಹ ಶಿಕ್ಷಣದಿಂದ ವಂಚಿತರಾಗಬಾರದು. ಭವಿಷ್ಯದ ಪ್ರಜೆಯಾದ ಮಕ್ಕಳು ಆತ್ಮವಿಶ್ವಾಸ ಬೆಳೆಸಿ ಕೊಳ್ಳಬೇಕು. ನಕಾರ ಚಿಂತನೆಗಿಂತ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಯಿಂದ ದೇಶದ 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತೊಂದರೆಯಾಯಿತು. ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಗಳಿಗೆ ಬಸ್‌ ಪಾಸು ನೀಡಲಿದೆ ಎಂದರು.

ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶಪಾಲ ಡಾ.ಕೆ.ಉಮೇಶ್ ಉಪನ್ಯಾಸ ನೀಡಿ, ಡಾ.ಅಂಬೇಡ್ಕರ್ ನೀಡಿದ ಮೀಸಲಾತಿ ಉದ್ಯೋಗವಲ್ಲ. ಅದೊಂದು ಅವಕಾಶ ಇದನ್ನು ಹಿಂದುಳಿದ ವರ್ಗದವರು ಬಳಸಿ ಕೊಂಡು ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ಮುಂದೆ ಬರಬೇಕು. ಶಾಲೆ ಒಳಗಿನ ಶಿಕ್ಷಣಕ್ಕಿಂತ ಪಠ್ಯೇತರ ಚಟುವಟಿಕೆ ಗಳಾದ ಎನ್.ಎಸ್.ಎಸ್. ರೋವರ್ ಮುಂತಾದ ಸ್ವಯಂ ಸಂಸ್ಥೆಗಳ ಮೂಲಕ ಮೌಲ್ಯಯುತ ಶಿಕ್ಷಣ ಪಡೆಯಬೇಕು. ಡಾ.ಅಂಬೇಡ್ಕರ್ ಉನ್ನತ ಶಿಕ್ಷಣ ಪಡೆದು ಸಂವಿಧಾನ ರಚಿಸದೆ ಇದ್ದರೆ ಅವರು ಸಾಮಾನ್ಯ ಮನುಷ್ಯರಾಗಿ ಉಳಿಯುತ್ತಿದ್ದರು. ಭಾರತ ವಿಶ್ವ ಜ್ಞಾನಿಯೊಬ್ಬರನ್ನು ಕಳೆದುಕೊಳ್ಳಬೇಕಾಗಿತ್ತು ಎಂದರು.


ಮಾನವ ಬಂಧುತ್ವ ವೇದಿಕೆ ವಿಭಾಗ ಸಂಚಾಲಕ ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 2 ವರ್ಷದ ಹಿಂದಿನಿಂದ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಪ್ರಾರಂಭವಾಗಿದೆ. ಪ್ರತಿ ತಾಲೂಕಿನ ಎಸ್.ಎಸ್.ಎಲ್.ಸಿ 5 ವಿದ್ಯಾರ್ಥಿಗಳು ಹಾಗೂ ಪಿ.ಯು.ಸಿ.ಯ 5 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಈ ಹಿಂದೆ ಶಿಕ್ಷಣದಿಂದ ಜ್ಞಾನ ಸಿಗುತ್ತಿತ್ತು.ನಂತರ ಬದಲಾಗಿ ಉದ್ಯೋಗಕ್ಕಾಗಿ ಶಿಕ್ಷಣ ಎಂಬಂತಾಯಿತು .ಈಗ ಶಿಕ್ಷಣ ವ್ಯಾಪಾರಿಕರಣವಾಗುತ್ತಿದೆ. ಹಣ ನೀಡಿ ಪ್ರಶ್ನೆ ಪತ್ರಿಕೆ ಕೊಳ್ಳಬಹುದು. ಶಿಕ್ಷಣ ಹಾಗೂ ರಾಜಕಾರಣ ಒಟ್ಟಾಗಿದೆ. ಉತ್ತರ ಪ್ರದೇಶದಲ್ಲಿ 80 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಿದೆ. 1 ಕೋಟಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಹಿಂದ ಚಿಂತಕ ಬಿ.ಎಸ್.ಸುಬ್ರಮಣ್ಯ ಮಾತನಾಡಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹುಟ್ಟು ಹಾಕಿದ ಮಾನವ ಬಂಧುತ್ವ ಸಂಸ್ಥೆ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಸಲಾಗುತ್ತದೆ. ಇಂದು ಜಿಲ್ಲೆಯ 9 ತಾಲೂಕುಗಳ 82 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದ್ದೇವೆ. ಡಾ.ಅಂಬೇಡ್ಕರ್ ಘೋಷಣೆಯಂತೆ ಶಿಕ್ಷಣ, ಸಂಘಟನೆ, ಹೋರಾಟ ಮೈಗೂಡಿಸಿಕೊಂಡು ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಹೊಡೆಯಾಲದ ನಾಟೀ ವೈದ್ಯ ಡಾ. ಎಚ್.ಸಿ.ಈಶ್ವರ ನಾಯಕ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ತಾಲೂಕಿನಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಅತಿಥಿಗಳು ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು .ಶಿಕ್ಷಕ ಹಿರೇನಲ್ಲೂರು ಶ್ರೀನಿವಾಸ್ ಸಂವಿಧಾನ ಪೀಠಿಕೆ ಬೋಧಿಸಿದರು.

ಅತಿಥಿಗಳಾಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಂ.ನಟರಾಜ,ಮಾನವ ಬಂಧುತ್ವ ವೇದಿಕೆಯ ಕ್ಷೇತ್ರ ಸಂಚಾಲಕ ಎ.ಸಿ.ಶ್ರೀನಿವಾಸ, ತಾ.ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಪಿಸಿಎಆರ್.ಡಿ.ಬ್ಯಾಂಕ್ ಅಧ್ಯಕ್ಷ ಕೆ.ಎಂ.ಸುಂದರೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಸಮಾಜ ಸೇವಕಿ ಜುಬೇದ, ಎಂ.ಶ್ರೀನಿವಾಸ್ ಅಭಿಮಾನಿ ಬಳಗದ ಅಧ್ಯಕ್ಷ ಪ್ರಶಾಂತ ಶೆಟ್ಟಿ,ತಾ.ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ,ಜಿಲ್ಲಾ ಮಾನವ ಬಂಧುತ್ವ ಒಕ್ಕೂಟದ ಸಂಚಾಲಕ ಸಂತೋಷ್, ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ವಿಂದ್ಯಾ,ಡಿಎಸ್ಎಸ್ ಮುಖಂಡ ಡಿ.ರಾಮು, ಸಾಮಾಜಿಕ ಕಾರ್ಯಕರ್ತ ಮಂಜುನಾಥ್ , ವಾಲ್ಮೀಕಿ ಶ್ರೀನಿವಾಸ್ , ಕೆ.ಎಸ್.ರಾಜಕುಮಾರ್ ಮತ್ತಿತರರು ಇದ್ದರು.