ಮಂಗಳೂರು: ರಾಜ್ಯ ಸರ್ಕಾರದ ಅನುದಾನದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಆರೋಪಿಸುತ್ತಿರುವ ಬಿಜೆಪಿ ಶಾಸಕರು ತಡೆಗೋಡೆಗಳು ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಇದಕ್ಕೆ ಹಣ ಎಲ್ಲಿಂದ ಬಂತು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದ್ದಾರೆ.
ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಮೊದಲ ಹಂತದಲ್ಲಿ 125 ಕೋಟಿ ರು. ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 2ನೇ ಹಂತದಲ್ಲಿ 165 ಕೋಟಿ ರು. ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಇತ್ತೀಚೆಗೆ 10 ಕೋಟಿ ರು.ಗಳ 225 ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಇದೆಲ್ಲ ಅಭಿವೃದ್ಧಿ ಕಾರ್ಯಗಳಲ್ಲವೇ ಎಂದು ಐವನ್ ಡಿಸೋಜ ಪ್ರಶ್ನಿಸಿದರು.ಜೆ.ಆರ್. ಲೋಬೊ (2013–2018) ಹೊರತುಪಡಿಸಿ, ಮಂಗಳೂರು ನಗರ ದಕ್ಷಿಣದಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಬಿಜೆಪಿ ಶಾಸಕರೇ ಇದ್ದಾರೆ. ಅವರ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಏಕೆ ಕೈಗೆತ್ತಿಕೊಳ್ಳಲಿಲ್ಲ? ಆಗಿನ ಬಿಜೆಪಿ ಶಾಸಕರು ಸಮಗ್ರ ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗಾಗಿ ಕೇಂದ್ರ ಮತ್ತು ರಾಜ್ಯದಿಂದ ವಿಶೇಷ ಅನುದಾನ ಪಡೆಯಲು ಏಕೆ ವಿಫಲರಾದರು ಎಂದು ಪ್ರಶ್ನಿಸಿದರು.
ವಿಶೇಷ ಪ್ಯಾಕೇಜ್‌ಗೆ ಮನವಿ: ಮುಖ್ಯಮಂತ್ರಿ ಸಿದ್ದರಾಮಯ್ಯ 6ರಂದು ರಾಜ್ಯ ಬಜೆಟ್ ಮಂಡಿಸಲಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಮಗ್ರ ಒಳಚರಂಡಿ ಕಾಮಗಾರಿಗಳಿಗಾಗಿ ಹಂತ ಹಂತವಾಗಿ 1,250 ಕೋಟಿ ರು. ಘೋಷಿಸುವಂತೆ ಹಾಗೂ ಮಂಗಳೂರು ನಗರಕ್ಕೆ 100 ಕೋಟಿ ರು.ಗಳ ವಿಶೇಷ ಪ್ಯಾಕೇಜ್ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇನೆ ಎಂದ ಅವರು, ದ.ಕ.ದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಮುದ್ರ ತೀರದಲ್ಲಿ ರಿಂಗ್ ರಸ್ತೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಐಟಿ ಪಾರ್ಕ್ ಅಭಿವೃದ್ಧಿಗಾಗಿ ಗುತ್ತಿಗೆ ಅವಧಿಯ ನಿಯಮಗಳಲ್ಲಿ ಸಡಿಲಿಕೆ ಮಾಡಬೇಕಿದೆ. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಅಥವಾ ಸರ್ಕ್ಯೂಟ್ ಬೆಂಚ್ ಸ್ಥಾಪಿಸಲು ಹಣ ಮೀಸಲಿಡುವಂತೆಯೂ ಅವರು ಒತ್ತಾಯಿಸಿದರು.