ದಾವಣಗೆರೆ: ನರೇಗಾ ಕೂಲಿ ಕಾರ್ಮಿಕರು, ನೌಕರರಿಗೆ ಸಕಾಲದಲ್ಲಿ ವೇತನ ಪಾವತಿಯಾಗದೇ ಇರುವುದರಿಂದ ಸ್ನೇಹಿತರು, ಸಂಬಂಧಿಕರಲ್ಲಿ ಸ್ವಾಭಿಮಾನ ಅಡವಿಟ್ಟು ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಗುರುವಾರ ಶಾಸಕ ಕೆ.ಎಸ್. ಬಸವಂತಪ್ಪ ಆಗ್ರಹಿಸಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೊರ ಸಂಪನ್ಮೂಲ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಕಳೆದ ಆರೇಳು ತಿಂಗಳಿನಿಂದ ವೇತನ ನೀಡಿಲ್ಲ. ಕೂಲಿ ಕಾರ್ಮಿಕರಿಗೂ ಹಣ ಬಿಡುಗಡೆ ಮಾಡಿಲ್ಲ. ಇದನ್ನೇ ನಂಬಿಕೊಂಡು ಜೀವನ ನಡೆಸುವ ಕೂಲಿ ಕಾರ್ಮಿಕರು, ನೌಕರರ ಬದುಕು ಬೀದಿಗೆ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮಾಯಕೊಂಡ ಕ್ಷೇತ್ರದಲ್ಲಿ ಬಡ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಅವಲಂಬಿಸಿದ್ದಾರೆ. ಆರೇಳು ತಿಂಗಳ ಬಾಕಿ ಹಣ ಉಳಿಸಿಕೊಂಡರೆ ಅವರು ಜೀವನ ನಡೆಸುವುದಾದರೂ ಹೇಗೆ? ನಾನು ಹಳ್ಳಿಗಳಿಗೆ ಭೇಟಿ ನೀಡಿದ ಸಂದರ್ಭ ಕೂಲಿ ಹಣ ಬಂದಿಲ್ಲ ಎಂಬ ದೂರುಗಳೇ ಹೆಚ್ಚಾಗಿವೆ. ಇದು ಹೀಗೆಯೇ ಮುಂದುವರಿದರೆ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಮತ್ತೆ ಗುಳೆ ಹೋಗುವ ಪರಿಸ್ಥಿತಿ ಬಂದು ಸರ್ಕಾರದ ಆಶಯಕ್ಕೆ ಹಿನ್ನಡೆಯಾಗುವ ಆತಂಕವಿದೆ ಎಂದಿದ್ದಾರೆ.
ಕೂಲಿ ಹಣ ಕೈ ಸೇರದೇ ಖಾಸಗಿ ಲೇವಾದೇವಿದಾರರಿಂದ ಬಡವರು ಅನಿವಾರ್ಯವಾಗಿ ಸಾಲ ಮಾಡಿ ಕುಟುಂಬ ನಿರ್ವಹಿಸುವಂತಾಗಿದೆ. ದಿನನಿತ್ಯದ ಆಗುಹೋಗುಗಳನ್ನು ನೋಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಇದು ನೌಕರ ವರ್ಗವನ್ನು ತೀವ್ರ ಮುಜುಗರಕ್ಕೆ ತಳ್ಳುತ್ತಿದೆ. ಸಾಲ ಪಡೆದವರ ಎದುರು ತಲೆಯೆತ್ತಿ ನಡೆಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ನೌಕರರ ಬಾಕಿ ವೇತನ, ಕೂಲಿ ಕಾರ್ಮಿಕರ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.- - -
-17ಕೆಡಿವಿಜಿ33: ಕೆ.ಎಸ್.ಬಸವಂತಪ್ಪ