ಕಳೆದ ಎರಡೂವರೆ ವರ್ಷಗಳಲ್ಲಿ 95 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿಕಳೆದ ಎರಡೂವರೆ ವರ್ಷದಲ್ಲಿ 95 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ. 2023ನೇ ಸಾಲಿನಲ್ಲಿ 43,69,507, 2024ನೇ ಸಾಲಿನಲ್ಲಿ 45,72,790 ಹಾಗೂ 2025ನೇ ಸಾಲಿನ ಜೂನ್ ಅಂತ್ಯಕ್ಕೆ 10.50 ಲಕ್ಷ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಅನಿತಾ ಭಾಸ್ಕರ್ ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಪ್ರವಾಸೋದ್ಯಮ ನೀತಿ 2020-26ರಡಿ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟ 778 ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆಯ ಈ ಕೆಳಕಂಡ 23 ಪ್ರವಾಸಿ ತಾಣ ಗುರುತಿಸಿದೆ.
ರಾಜರ ಗದ್ದುಗೆ, ಮಡಿಕೇರಿ ಕೋಟೆ, ನಾಲ್ಕು ನಾಡು ಅರಮನೆ, ಅಬ್ಬಿ ಜಲಪಾತ, ಮಾಂದಲ್ ಪಟ್ಟಿ, ರಾಜಾಸೀಟು, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ಮಲ್ಲಳ್ಳಿ ಜಲಪಾತ, ನಿಶಾನಿಮೊಟ್ಟೆ, ಚೇಲಾವರ ಜಲಪಾತ, ಇರ್ಪು ಜಲಪಾತ, ದುಬಾರೆ, ಚೆಟ್ಟಳ್ಳಿ ಫಾರ್ಮ್ ಹೊನ್ನಮ್ಮನ ಕೆರೆ, ಮಕ್ಕಳಗುಡಿ ಬೆಟ್ಟ, ಚಿಕ್ಕಿಹೊಳೆ, ಕುಂದಬೆಟ್ಟ, ಬರ್ಪುಹೊಳೆ ರ‍್ಯಾಪ್ಟಿಂಗ್, ಜನರಲ್ ತಿಮ್ಮಯ್ಯ ಮ್ಯೂಸಿಯಂ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಪ್ರಮುಖವಾಗಿದೆ ಎಂದು ತಿಳಿಸಿದ್ದಾರೆ. ತಲಕಾವೇರಿ-ಭಾಗಮಂಡಲ ದೇವಾಲಯಗಳನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ಕೈಬಿಟ್ಟು ಧಾರ್ಮಿಕ ಕ್ಷೇತ್ರ ಗಳ ಪಟ್ಟಿಗೆ ಸೇರಿಸುವಂತೆ ಪ್ರವಾಸೋದ್ಯಮ ಇಲಾಖೆಯ ಆಯುಕ್ತರಲ್ಲಿ ಕೋರಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುದಾನದಿಂದ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ 2813.9 ಲಕ್ಷ ರು.ಗಳ ಅನುದಾನದಲ್ಲಿ ಬಂಡವಾಳ ವೆಚ್ಚಗಳಲ್ಲಿ 8 ಹಾಗೂ ಕೆಟಿವಿಜಿಯಲ್ಲಿ 6 ಒಟ್ಟು 14 ವಿವಿಧ ಕಾಮಗಾರಿ ಹಾಗೂ ಮೂಲಸೌಕರ್ಯವನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.ಮಡಿಕೇರಿ ತಾಲೂಕಿನ ಮಾಂದಲ್‌ಪಟ್ಟಿ ಪ್ರದೇಶವು ಅರಣ್ಯ ಇಲಾಖಾ ವ್ಯಾಪ್ತಿಗೆ ಒಳಪಡುವುದರಿಂದ ಈ ಜಾಗದಲ್ಲಿ ಅರಣ್ಯ ಇಲಾಖೆಯಿಂದ ರಸ್ತೆ ದುರಸ್ತಿ ಹಾಗೂ ಇತರೆ ಕಾಮಗಾರಿ ಕಲ್ಪಿಸಿ ಸಹಕಾರ ನೀಡುವಂತೆ ಕೋರಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ. 2025-26 ನೇ ಸಾಲಿನ ಮುಖ್ಯಮಂತ್ರಿಯವರ ಆಯವ್ಯಯ ಘೋಷಣೆಯಂತೆ ಕೊಡಗು ಜಿಲ್ಲೆಯ ಕೊಡವ ಹೆರಿಟೇಜ್ ಕೇಂದ್ರ ಅಭಿವೃದ್ಧಿ ಪಡಿಸುವ ಸಂಬಂಧ ಅಭಿವೃದ್ಧಿಪಡಿಸಬಹುದಾದ ಮೂಲ ಸೌಕರ್ಯಗಳ 5 ಕೋಟಿ ರು. ಅಂದಾಜು ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿದೆ ಹಾಗೂ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕೋರಲಾಗಿದೆ ಎಂದು ವಿವರಿಸಿದ್ದಾರೆ.ಅಬ್ಬೀಜಲಪಾತ ಪ್ರವಾಸಿ ತಾಣದಲ್ಲಿ ದುಸ್ಥಿತಿಯಲ್ಲಿರುವ ವಾಚ್ ಟಾವರ್ ದುರಸ್ತಿ ಹಾಗೂ ಅಪಾಯಕಾರಿ ತೂಗು ಸೇತುವೆಯನ್ನು ತೆರವುಗೊಳಿಸುವ ಬಗ್ಗೆ ಮಡಿಕೇರಿ ನಗರದಲ್ಲಿರುವ ಕೋಟೆಗೆ ಸೌಂಡ್ಸ್ ಆ್ಯಂಡ್ ಲೈಟ್ ಅಳವಡಿಸುವ ಪ್ರಸ್ತಾವನೆ ಬಗ್ಗೆ, ಮಡಿಕೇರಿ ತಾಲೂಕಿನ ಗದ್ದುಗೆ ಪ್ರವಾಸಿ ತಾಣದಲ್ಲಿ ಉದ್ಯಾನವನ್ನು ತೋಟಗಾರಿಕೆ ಇಲಾಖೆಯಿಂದ ಅಭಿವೃದ್ಧಿ ಪಡಿಸಲು 99.45 ಲಕ್ಷ ರು.ಗಳ ಪ್ರಸ್ತಾವನೆ ಸಿದ್ಧಪಡಿಸಿರುವ ಬಗ್ಗೆ, ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳಿಗೆ 2023-24ನೇ ಸಾಲಿನ ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿಯಲ್ಲಿ 1 ಕೋಟಿಗಳ ಅನುದಾನದಲ್ಲಿ ಈ ಅಭಿವೃದ್ಧಿ ಕಾಮಗಾರಿಗಳನ್ನು ಕೆಆರ್‌ಐಡಿಎಲ್ ಸಂಸ್ಥೆಯ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅನಿತಾ ಭಾಸ್ಕರ್ ತಿಳಿಸಿದ್ದಾರೆ............................
‘ಒಂದು ಜಿಲ್ಲೆ ಒಂದು ತಾಣ’ ಅಡಿ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪಿಪಿಪಿ ಮಾದರಿಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಜಿಲ್ಲೆಯ ಮಾಂದಲ್‌ಪಟ್ಟಿ ಪ್ರವಾಸಿ ತಾಣವನ್ನು ಸರ್ಕಾರದಿಂದ ಆಯ್ಕೆ ಮಾಡಲಾಗಿದೆ. ಅದರಂತೆ ಜಂಕ್ಷನ್‌ನಲ್ಲಿ 50 ಲಕ್ಷ ರು. ವೆಚ್ಚದಲ್ಲಿ ಗ್ರಾಮ ಪಂಚಾಯಿತಿಯಿಂದ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು ಗಾಳಿಬೀಡು ಗ್ರಾಮ ಪಂಚಾಯಿತಿ ಒಪ್ಪಿಗೆ ಸೂಚಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.