ಕನ್ನಡಪ್ರಭ ವಾರ್ತೆ ಕೆ.ಆರ್. ನಗರಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಾರಂಗಿ ನಾಲೆಯ ಆಧುನೀಕರಣ ಕಾಮಗಾರಿಗೆ ರಾಜ್ಯ ಸರ್ಕಾರ 108 ಕೋಟಿ ರು. ಮಂಜೂರು ಮಾಡಿದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಸಾಲಿಗ್ರಾಮ ತಾಲೂಕಿನ ಸಕ್ಕರೆ ಗ್ರಾಮದ ಬಳಿ ಇರುವ ಕಾವೇರಿ ನದಿಯ ಚಾಮರಾಜ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಯ ಬಿಡುವ ಕಾರ್ಯಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.ನಾಲೆ ಅಧುನೀಕರಣ ಕಾಮಗಾರಿಗೆ ಜು. 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.ನಾಲೆಗಳಿಗೆ ನೀರು ಹರಿಸಿದ ನಂತರ ಇಲಾಖೆಯ ಅಧಿಕಾರಿಗಳು ಏರಿಗಳ ಮೇಲೆ ಸಂಚರಿಸಿ ರೈತರ ಜತೆ ಮಾತನಾಡಿ, ಅಗತ್ಯವಿರುವೆಡೆ ಹೂಳು ತೆಗೆಸಿ ರೈತರ ಜಮೀನುಗಳಿಗೆ ಆರಂಭದಿಂದ ಅಂತ್ಯದವರೆಗೆ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.ನಾಲೆಗಳ ಹೂಳು ತೆಗೆಯಲು ಸರ್ಕಾರ ಪ್ರಸ್ತುತ ಪ್ರತಿ ಹೆಕ್ಟೇರ್‌ಗೆ 600 ರು. ನೀಡುತ್ತಿದ್ದು, ಅದು ಕಾಮಗಾರಿಗೆ ಸಾಲದಾಗಿದ್ದು, ಈ ವಿಚಾರವನ್ನು ನಾನು ಸರ್ಕಾರದ ಗಮನಕ್ಕೆ ತಂದು ಸಂಬಂಧಿತ ಸಚಿವರ ಜತೆ ಚರ್ಚೆ ಮಾಡಿ ಅಗತ್ಯ ಅನುದಾನ ಕೊಡಿಸುವ ಭರವಸೆ ನೀಡಿದರು.ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಮಾಜಿ ಸದಸ್ಯ ಸಣ್ಣತಮ್ಮೇಗೌಡ, ಪಿಕಾರ್ಡ್ ಬ್ಯಾಂಕಿನ ಮಾಜಿ ಅಧ್ಯಕ್ಷ ಎನ್.ಸಿ. ಪ್ರಸಾದ್, ಹಾಡ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್, ವೀರಶೈವ ಮುಖಂಡ ನಟಬುದ್ಧಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಷ, ಮಾಯಿಗೌಡನಹಳ್ಳಿ ಗ್ರಾಪಂ ಅಧ್ಯಕ್ಷೆ ಶೋಭಾ ಕರಿಯಯ್ಯ, ಉಪಾಧ್ಯಕ್ಷ ದೊಡ್ಡೇಗೌಡ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್, ಎಂ.ಎಸ್. ಮಹದೇವ್, ಕೆ.ಆರ್. ನಗರ ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ರಮೇಶ್, ಕ್ಷೇತ್ರದ ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಶಾಸಕರ ಪತ್ನಿ ಸುನೀತಾ ರವಿಶಂಕರ್, ಪಿಡಿಒ ಬಿ.ಕೆ. ರಾಜೇಶ್, ರೈತ ಮುಖಂಡರಾದ ಶ್ರೀನಿವಾಸ್, ತಿಮ್ಮಪ್ಪ, ನೇತ್ರಾವತಿ, ಜಲ ಸಂಪನ್ಮೂಲ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕುಶಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಯಾಜ್ ಪಾಷ, ಆದರ್ಶ, ರಾಜೇಂದ್ರಕುಮಾರ್, ಸಹಾಯಕ ಎಂಜಿನಿಯರ್ ಕೆ.ಎನ್. ಕಿರಣ್. ಕನ್ನಿಕಾ, ಉದಯ್ ಇದ್ದರು.