ಕನ್ನಡಪ್ರಭ ವಾರ್ತೆ ಮಂಡ್ಯ
ಹೇಮಾವತಿ ಜಲಾಶಯ ಯೋಜನೆಯ ನಾಲಾ ನಿರ್ಮಾಣದ ಉದ್ದೇಶಕ್ಕಾಗಿ ಭೂಮಿ ಸ್ವಾನಪಡಿಸಿಕೊಂಡು 20 ವರ್ಷ ಕಳೆದರೂ ವೈಜ್ಞಾನಿಕ ಪರಿಹಾರ ನೀಡದೆ ಮಾಡಿರುವ ತಾರತಮ್ಯ, ವಿಳಂಬ ಖಂಡಿಸಿ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು, ಮಣಿಗನಹಳ್ಳಿ, ಬಳ್ಳೇಕೆರೆ, ಹೊಸಹಳ್ಳಿ ಸೇರಿದಂತೆ ಹಲವಾರು ಗ್ರಾಮದಿಂದ ರೈತರು ವಾಹನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಧಾವಿಸಿ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ 20 ವರ್ಷಗಳ ಹಿಂದೆ ಹೇಮಾವತಿ ನಾಲಾ ನಿರ್ಮಾಣಕ್ಕಾಗಿ ನಮ್ಮ ಜಮೀನುಗಳನ್ನು ಸ್ವಾನಪಡಿಸಿಕೊಂಡಿದ್ದು, ಸ್ವಲ್ಪ ಪ್ರಮಾಣದ ಪರಿಹಾರ ನೀಡಿದ್ದರು. ಹೆಚ್ಚಿನ ಪರಿಹಾರಕ್ಕಾಗಿ ಒತ್ತಾಯಿಸಿ ನಾವು 20 ವರ್ಷಗಳಿಂದಲೂ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದೇವೆ. ನ್ಯಾಯಾಲಯ ಹೆಚ್ಚಿನ ಪರಿಹಾರ ನೀಡುವಂತೆ ಆದೇಶ ನೀಡಿದ್ದರೂ ಸಹ ನೀರಾವರಿ ಇಲಾಖೆ ಅಧಿಕಾರಿಗಳು ಯಾವುದನ್ನೂ ಪರಿಗಣೆನೆಗೆ ತೆಗೆದುಕೊಳ್ಳದೆ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಿಡಿಕಾರಿದರು.
ಸುಮಾರು 8 ರಿಂದ 10 ಬಾರಿ ತಾಲೂಕು ಕಚೇರಿ, ಹೇಮಾವತಿ ನೀರಾವರಿ ಕಚೇರಿ, ಜಿಲ್ಲಾಧಿಕಾರಿ ಕಚೇರಿಗಳ ಬಳಿಯೂ ನಾವು ಪ್ರತಿಭಟನೆ ನಡೆಸಿದ್ದೇವೆ. ಆದರೂ ಪರಿಹಾರ ದೊರಕಿಸಿಕೊಡುವಲ್ಲಿ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗೂ ಸಹ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಿದ ಪ್ರತಿಭಟನಾಕಾರರು, ತಕ್ಷಣ ನ್ಯಾಯಾಲಯದ ಆದೇಶದಂತೆ ಹೆಚ್ಚಿನ ಪರಿಹಾರಕ್ಕೆ ಸಂಬಂಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನೆ ನಂತರವೂ ನಮಗೆ ನ್ಯಾಯಾ ದೊರಕಿಸಿಕೊಡುವ ಪ್ರಯತ್ನ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅರ್ನಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಕೆ.ಆರ್.ಪೇಟೆ ತಾಲೂಕಿನ ವಿವಿಧ ಗ್ರಾಮಗಳ ರೈತ ಮುಖಂಡರಾದ ಆರ್. ಪ್ರಕಾಶ್, ಸಣ್ಣೇಗೌಡ, ಸೋಮೇಗೌಡ, ಲೀಲಾವತಿ, ಮಂಗಳಮ್ಮ, ರವಿ, ನಾಗಯ್ಯ, ಸಿ.ಜೆ. ರಮೇಶ, ಶ್ರೀನಿವಾಸ, ಮಂಜುಳ, ಮಂಜು, ಮರಿಸ್ವಾಮಿ, ರಾಜಮ್ಮ, ನಾಗರಾಜು, ಚಂದ್ರೇಗೌಡ, ಕುಂಟಶಿಂಗ್ರಯ್ಯ, ನಾಗರಾಜೇಗೌಡ, ಚಂದ್ರಶೇಖರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಸಿಎಂ ಸಿದ್ದರಾಮಯ್ಯರ ದಲಿತ ವಿರೋಧಿ ನೀತಿ ಖಂಡಿಸಿ ದಸಂಸ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಮಂಡ್ಯಎಸ್ಸಿ, ಎಸ್ಪಿ, ಟಿಎಸ್ಪಿ ಹಣದಲ್ಲಿ 53 ಸಾವಿರ ಕೋಟಿ ಹಣ ಗ್ಯಾರಂಟಿ ಯೋಜನೆಗೆ ಬಳಸಿಕೊಂಡು 2026ನೇ ಸಾಲಿನ ಬಜೆಟ್‌ನಲ್ಲಿ ವಾಪಸ್ ಕೊಡದೆ ಹಾಗೂ ಎಸ್ಸಿ, ಎಸ್ಪಿ, ಟಿಎಸ್‌ಪಿ ಉಪಕಾಯ್ದೆ 2013ರ ಕಲಂ ಸಿ. ರದ್ದು ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯರ ದಲಿತ ವಿರೋಧಿ ನೀತಿ ಖಂಡಿಸಿ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಅಡುಗೆ ಅನಿಲ ಮತ್ತು ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲಾಗದ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿದರು.ಹೊಲೆಯ/ಮಾದಿಗ ಸಮುದಾಯಗಳಿಗೆ ಉದ್ಯೋಗ ನೇಮಕಾತಿಯಲ್ಲಿ ರೂಪಿಸಿರುವ ರೋಸ್ಟರ್ ಬಿಂದು ಅನುಪಾತ 6:6ರಲ್ಲಿ ಎರಡೂ ಸಮುದಾಯಗಳಿಗೆ ಮೋಸವಾಗದಂತೆ ಒಳ ಮೀಸಲಾತಿಯ ಗೊಂದಲ ಸರಿಪಡಿಸಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಹೊಲೆಯ/ಮಾದಿಗ ಸಮುದಾಯಗಳ ಮಧ್ಯೆ ಎಸ್ಸಿ, ಎಸ್ಟಿ ಒಳ ಮೀಸಲಾತಿ ಗೊಂದಲ ಸೃಷ್ಟಿಸಿ ದ್ವೇಷ ವಿಷಬೀಜ ಬಿತ್ತುತ್ತಿರುವುದನ್ನು ಖಂಡಿಸಿದರು. ಬಾಕಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಈ ಕೂಡಲೇ ಅಂಗೀಕಾರಗೊಂಡಿರುವ ಒಳ ಮೀಸಲಾತಿ 6:6ರಲ್ಲಿ ತುಂಬಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ದಸಂಸ ಸಮಿತಿ ರಾಜ್ಯ ಸಂಚಾಲಕ ಅಂದಾನಿ, ಮುಖಂಡರಾದ ಬಿ.ಎಂ.ಸತ್ಯ, ಟಿ.ಡಿ. ಬಸವರಾಜು, ಎಂ. ಶಿವು, ಡಿ.ಕೆ. ಅಂಕಯ್ಯ, ಮೂರ್ತಿ, ಬಿ. ಶ್ರೀನಿವಾಸ, ಮೆಹಬೂಬ್‌ಖಾನ್, ಎಸ್.ಪಿ.ನಾರಾಯಣಸ್ವಾಮಿ, ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.