ಗದಗ: ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇ ಬರುವುದಿಲ್ಲ, ಇನ್ನು ದೇಶದ ಮಹಿಳೆಯರಿಗೆ ₹1 ಲಕ್ಷ ಕೊಡಲು ಹೇಗೆ ಸಾಧ್ಯ? ಎಂದು ಮಾಜಿ ಸಚಿವ ನರಗುಂದ ಶಾಸಕ ಸಿ.ಸಿ. ಪಾಟೀಲ ಪ್ರಶ್ನಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ₹1 ಲಕ್ಷ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು 272 ಸ್ಥಾನ ಬೇಕು, ದೇಶದಲ್ಲಿ ಕಾಂಗ್ರೆಸ್ ಸ್ಪರ್ಧಿಸಿರುವುದೇ ಕೇವಲ 230 ಸ್ಥಾನಗಳಲ್ಲಿ. ಇನ್ನು ಅದು ಹೇಗೆ ಅಧಿಕಾರಕ್ಕೆ ಬರುತ್ತಾರೆ? ಯೋಜನೆಗಳನ್ನು ಹೇಗೆ ಜಾರಿ ಮಾಡುತ್ತಾರೆ? ಇದೊಂದು ಹಸಿ ಸುಳ್ಳಿನ ಭರವಸೆ ಎಂದರು.ಶಾಸಕರಿಗೇ ಸಂಬಳ ಇಲ್ಲ:
ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಶಾಸಕರ ಸಂಬಳವೂ ಎರಡು ತಿಂಗಳಿಗೊಮ್ಮೆ ಆಗುತ್ತಿವೆ. ನಾವು ಯಾವುದೇ ಯೋಜನೆಗಳು, ಗ್ಯಾರಂಟಿ ವಿರೋಧಿಗಳಲ್ಲ, ಆದರೆ ರಾಜ್ಯದ ಅಭಿವೃದ್ಧಿಯೂ ಆಗಬೇಕಲ್ಲ, ಒಂದರ್ಥದಲ್ಲಿ ನಾವೂ ಕೂಡಾ (ಶಾಸಕರು) ಸರ್ಕಾರದಲ್ಲಿ ಸಂತ್ರಸ್ತರೇ, ಸರ್ಕಾರದ ಖಜಾನೆ ಖಾಲಿಯಾಗಿದೆ, ಕೂಡಲೇ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ ನೋಡೋಣ ಎಂದು ಸವಾಲು ಹಾಕಿದರು.ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಾಗ ₹ 25 ಸಾವಿರ ಕೋಟಿ ಖಜಾನೆಯಲ್ಲಿತ್ತು. ಈಗ ಅದು ಖಾಲಿಯಾಗಿ ₹ 1 ಲಕ್ಷ 85 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಬಸ್ ಫ್ರೀ ಎಂದು ಹೇಳಿದರು. 10 ಬಸ್ ಓಡುವಲ್ಲಿ ಕೇವಲ 4 ಬಸ್ ಓಡುತ್ತಿವೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಸಮಸ್ಯೆಯಾಗಿದೆ. ಬಸ್ ಕೂಡಾ ಹೆಚ್ಚಿಸಿಲ್ಲ, ಕೆಟ್ಟ ಬಸ್ ರಿಪೇರಿ ಮಾಡಲು, ಸಿಬ್ಬಂದಿ ಸಂಬಳಕ್ಕೆ ಸರ್ಕಾರದ ಬಳಿ ಹಣ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೊಮ್ಮಾಯಿ 2 ಲಕ್ಷ ಅಂತರ ಗೆಲುವು: ಕಳೆದ ಒಂದು ತಿಂಗಳಿನಿಂದ ಬಿಸಿಲಿನ ತಾಪದ ನಡುವೆಯೂ ಯಶಸ್ವಿಯಾಗಿ ಪ್ರತಿ ಹಳ್ಳಿಗಳಿಗೆ ತೆರಳಿ ಮತಯಾಚನೆ ಮಾಡಿದ್ದೇವೆ. ಕಾರ್ಯಕರ್ತರು ಬಿಸಿಲಿನ ಮಧ್ಯೆ ನಮಗೆ ಸಹಕರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.ಶಿರಹಟ್ಟಿ ಭಾಗದ ಹಳ್ಳಿಗಳಲ್ಲಿ ಪ್ರಚಾರ ಮಾಡುವ ಸಮಯದಲ್ಲಿ ಮಧ್ಯಾಹ್ನ 3ಕ್ಕೆ ಸುಡು ಬಿಸಿಲಿನ ಮಧ್ಯೆಯೂ 75 ವರ್ಷದ ವೃದ್ಧ ಬಂದು ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಎಂದು ಹೇಳುತ್ತಾರೆ ಎಂದು ಮೋದಿ ಎಷ್ಟೊಂದು ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ಯುವ ಮುಖಂಡ ಅನಿಲ ಮೆಣಸಿನಕಾಯಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ ಹಾಜರಿದ್ದರು.