ದಲಿತ ಸಮುದಾಯದ ಶ್ರೀನಿವಾಸ್ ಪ್ರಸಾದ್ ಸೇವೆ ಶ್ಲಾಘನೀಯ

KannadaprabhaNewsNetwork |  
Published : May 06, 2024, 12:37 AM IST
ಶ್ರೀನಿವಾಸ ಪ್ರಸಾದ್ | Kannada Prabha

ಸಾರಾಂಶ

ರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾಸ್‌ ದಲಿತ ಸಮುದಾಯದ ಹಕ್ಕು ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಿಡಿದೇಳುತ್ತಿದ್ದರು ಎಂದು ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಗೌರವಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾಸ್‌ ದಲಿತ ಸಮುದಾಯದ ಹಕ್ಕು ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಿಡಿದೇಳುತ್ತಿದ್ದರು ಎಂದು ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಗೌರವಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಹೇಳಿದರು.ನಗರದಲ್ಲಿ ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ದಲಿತ ನಾಯಕ ದಿ.ವಿ.ಶ್ರೀನಿವಾಸ್‌ ಪ್ರಸಾದ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಶೋಷಿತರ ಪರ ನೇರ, ನಿಷ್ಠುರ ರಾಜಕಾರಣಿಯಾಗಿದ್ದ ವಿ.ಶ್ರೀನಿವಾಸ್‌ ಪ್ರಸಾದ್ ಅವರ ಸ್ಥಾನವನ್ನು ತುಂಬುವ ರಾಜಕಾರಣಿ ರಾಜ್ಯದಲ್ಲಿ ಬೇರೆ ಯಾರು ಇಲ್ಲ. ಹೋರಾಟದಿಂದಲೇ ರಾಜಕಾರಣಿಯಾದ ವಿ.ಶ್ರೀನಿವಾಸ್ ಪ್ರಸಾದ್ 1992 ರಲ್ಲಿ ನಡೆದ ಬದನವಾಳು ದಲಿತರ ಅತ್ಯಾ ಕಾಂಡದ ವಿರುದ್ಧ ಹೋರಾಟದ ನಾಯಕತ್ವ ವಹಿಸಿಕೊಂಡಿದ್ದರು. ಸಮುದಾಯದ ಪರ ನಿಲ್ಲುವ ಧೈರ್ಯ ತೋರಿದ ಏಕೈಕ ರಾಜಕಾರಣಿ, ಇಂತಹ ಸಮುದಾಯದ ಪ್ರಜ್ಞೆ ಎಲ್ಲ ದಲಿತ ರಾಜಕಾರಣಿಗಳಿಗೆ ಅವಶ್ಯಕ ಎಂದರು.ಬದನವಾಳು ಅತ್ಯಾಕಾಂಡ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ನಂಜನಗೂಡಿನಲ್ಲಿ ಸೇರಿದ್ದರು. ಪ್ರೊ.ರಾಮದಾಸ್, ರಾಜಶೇಖರ್ ಕೋಟಿ, ದೇವನೂರು ಮಹಾದೇವ್ ಸೇರಿದಂತೆ ಜಾತ್ಯಾತೀತವಾಗಿ ಎಲ್ಲ ಸಮುದಾಯದ ಮುಖಂಡರು ಭಾಗಿಯಾಗಿದ್ದರು. ಬದನವಾಳು ಘಟನೆ ವಿರುದ್ಧ ಮೈಸೂರಿನ ಎಲ್ಲ ಜಾತ್ಯಾತೀತ ಮನಸ್ಸುಗಳು ಹೋರಾಡಿದ್ದರ ಫಲವಾಗಿ ಆರೋಪಿಗಳಿಗೆ ಶಿಕ್ಷೆಯಾಯಿತು ಎಂದು ಹೇಳಿದರು.ರಾಜಕಾರಣಿಯಾಗಿ ದಲಿತ ಸಮುದಾಯದ ಪರವಾಗಿ ನಿಲ್ಲುವುದು, ಚುನಾವಣಾ ರಾಜಕಾರಣದಲ್ಲಿ ಸುಲಭವಾದ ವಿಚಾರವಲ್ಲ. ಮೇಲ್ವರ್ಗಗಳ ವಿರುದ್ಧ ಹೋರಾಡುತ್ತಲೇ ದಮನಿತರಿಗಾಗಿ ದುಡಿದ ಧೀಮಂತ ರಾಜಕಾರಣಿಯಾಗಿದ್ದರು. ನಮ್ಮನ್ನು ಅಗಲಿರುವುದು ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದರು.ಹೈಕೋರ್ಟ್ ವಕೀಲ ಎಚ್.ವಿ.ಮಂಜುನಾಥ್ ಮಾತನಾಡಿ, ವಿ.ಶ್ರೀನಿವಾಸ್ ಪ್ರಸಾದ್ ಅವರಿಗೆ ದಕ್ಕಬೇಕಿರುವ ಶ್ರದ್ಧಾಂಜಲಿ ಇದುವರೆಗೂ ಸಿಕ್ಕಿಲ್ಲ. ಹೋರಾಟದಿಂದ ರಾಜಕಾರಣಿಯಾದ ಅವರು ಕೋಮುವಾದಿಗಳೊಂದಿಗೆ ಹೋದರು ಸೈದ್ಧಾಂತಿಕವಾಗಿ ರಾಜೀಯಾಗಲಿಲ್ಲ. ಬಸವಲಿಂಗಪ್ಪ ಅವರ ನಂತರ ಶ್ರೀನಿವಾಸ್ ಪ್ರಸಾದ್ ಅವರು ದಲಿತರ ಹಕ್ಕು, ಸ್ವಾಭಿಮಾನಕ್ಕೆ ದನಿಯಾದವರು. ದಲಿತರ ರಾಜ ಕಾರಣಕ್ಕೆಅವರು ದಾರಿದೀಪವಾಗಿದ್ದರು ಎಂದು ಹೇಳಿದರು.ಬುದ್ಧ, ಬಸವ, ಅಂಬೇಡ್ಕರ್ ಅವರೊಂದಿಗೆ ಕುವೆಂಪು ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಬೇಕು. ಬಸವಣ್ಣ ವಚನ ಕ್ರಾಂತಿಯು ಕಟ್ಟಿದ ಸಮಾಜವನ್ನು ಕುವೆಂಪು ಅಕ್ಷರದಿಂದ ಕಟ್ಟಿದರು. ಕುವೆಂಪು ಅವರನ್ನು ಜಾತಿ ಚೌಕಟ್ಟಿನಿಂದ ಹೊರತರದೇ ಹೋದರೆ ಬಸವಣ್ಣನಂತೆ ಜಾತಿಯ ಸಂಕೋಲೆಯಲ್ಲಿ ಬಂಧಿಯಾಗುತ್ತಾರೆ ಎಂಬ ಎಚ್ಚರವನ್ನು ಪ್ರಗತಿಪರರು ಹೊಂದಬೇಕು ಎಂದರು.ಕುವೆಂಪು ಅವರ ಸಾಹಿತ್ಯವನ್ನು ಓದಿದ್ದರೆ ಇಂದು ಇಂತಹ ಪಾಳೇಗಾರಿಕೆಯ ಸ್ಥಿತಿಯನ್ನು ಸಮುದಾಯ ಹೊಂದುತ್ತಿರಲಿಲ್ಲ, ಜಾತ್ಯಾತೀತ ಸಮಾಜಕ್ಕೆ ಶೋಷಿತರೆಲ್ಲ ಒಂದೇ ಎಂಬ ಮನೋಭಾವನೆಯನ್ನು ಇಂದಿನ ಯುವ ಸಮುದಾಯದಲ್ಲಿ ಮೂಡಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.ಉದ್ಯಮಿ ಡಿ.ಟಿ.ವೆಂಕಟೇಶ್ ಮಾತನಾಡಿ, ದಲಿತರ ಸಾಕ್ಷಿ ಪ್ರಜ್ಞೆಯಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರು ರಾಜಕಾರಣಕ್ಕಾಗಿ ಅನೇಕ ನಿರ್ಧಾರ ಕೈಗೊಂಡರು. ಅದು ಇಂದಿನ ಕಾಲಘಟ್ಟದಲ್ಲಿ ಯುವ ಸಮುದಾಯಕ್ಕೆ ತಪ್ಪಾಗಿ ಕಂಡರೂ ಸ್ವಾಭಿಮಾನವನ್ನು ಬಿಟ್ಟು ಕೊಡದೇ ಅಧಿಕಾರವನ್ನು ಪಡೆದ ಛಲವನ್ನು ಯುವ ರಾಜಕಾರಣಿಗಳು ಮತ್ತು ಯುವ ಸಮೂಹ ಅರಿಯಬೇಕು ಎಂದು ತಿಳಿಸಿದರು.

ಇತ್ತಿಚೆಗೆ ನಿವೃತ್ತರಾದ ಶಿಕ್ಷಣ ಇಲಾಖೆಯ ಗಂಗಾಧರಪ್ಪ, ರಾಮಚಂದ್ರಪ್ಪ (ಆರ್.ಸಿ) ರೇಷ್ಮೆ ಇಲಾಖೆಯ ಪ್ರಭುಕಾಳೆ ಅವರನ್ನು ಸಂಘಟನೆ ವತಿಯಿಂದ ಅಭಿನಂದಿಸಲಾಯಿತು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಾಗರಾಜು, ಕೋಟೆಕಲ್ಲಪ್ಪ, ಚಿಕ್ಕಣ್ಣ, ಶಿವರಾಮ್, ಹನುಮಂತರಾಜು, ಹನು ಮಂತರಾಯಪ್ಪ, ಸುರೇಶ್, ಮಂಜಣ್ಣ, ಮಾರುತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆನಂದಪುರ : ಮರದ ರಂಬೆ ಮರ್ಮಾಂಗಕ್ಕೆ ತಗುಲಿ ವ್ಯಕ್ತಿ ಸಾವು
ಅಪಘಾತದಿಂದ ಕೆಲ್ಸ ಕಳ್ಕೊಂಡ ಮಹಿಳೆ ನೆರವಿಗೆ ಕೋರ್ಟ್‌