ಸೌಲಭ್ಯವನ್ನೇ ನೀಡದೆ ಜನಸೇವೆ ಮಾಡಿ ಎಂದರೆ ಹೇಗೆ ಸಾಧ್ಯ?

KannadaprabhaNewsNetwork |  
Published : Feb 13, 2025, 12:47 AM IST
12 ಟಿವಿಕೆ 2 - ತುರುವೇಕೆರೆ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರದಿಂದ ಆರಂಭಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. | Kannada Prabha

ಸಾರಾಂಶ

ಸೂಕ್ತ ಸೌಲಭ್ಯಗಳನ್ನೇ ನೀಡದೇ ಜನರ ಸೇವೆ ಮಾಡಿ ಎಂದರೆ ಹೇಗೆ ಸಾಧ್ಯ? ತಾಂತ್ರಿಕ ಸೌಲಭ್ಯಗಳನ್ನು ನೀಡಿಲ್ಲ. ಗ್ರಾಮ ಆಡಳಿತಾಧಿಕಾರಿಗಳಿಗೆ ಸೂಕ್ತ ಕಚೇರಿ ಇಲ್ಲ. ಆಡಳಿತ ಚುರುಕುಗೊಳಿಸಲು ಹಲವಾರು ಆ್ಯಪ್‌ ಗಳನ್ನು ಜಾರಿಗೆ ತರಲಾಗಿದೆ. ಆದರೆ ಅವುಗಳ ಅನುಷ್ಠಾನಗೊಳಿಸಲು ಸರ್ಕಾರ ವಿಫಲವಾಗಿದೆ. ಯಾವುದೇ ಮೂಲಭೂತ ಸೌಕರ್ಯ ಒದಗಿಸದೇ ಇರುವ ಕಾರಣ ಜನರಿಗೆ ನಾವು ಸೇವೆ ಒದಗಿಸುವುದು ಅಸಾಧ್ಯವಾಗಿದೆ ಎಂದು ಅವರು ದೂರಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಪಟ್ಟಣದ ಹೃದಯಭಾಗದಲ್ಲಿರುವ ಮಿನಿ ವಿಧಾನಸೌಧದ ಎದುರು ಗ್ರಾಮ ಆಡಳಿತಾಧಿಕಾರಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಮೂರು ದಿನ ಪೂರೈಸಿದೆ.

ಗ್ರಾಮ ಆಡಳಿತಾಧಿಕಾರಿಗಳ ಜಿಲ್ಲಾ ಸಂಘದ ಉಪಾಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ಈ ಹೋರಾಟ ಎರಡನೇ ಹಂತದ್ದಾಗಿದೆ. ಈ ಹಿಂದೆ ನಡೆಸಿದ್ದ ಪ್ರತಿಭಟನೆಯ ವೇಳೆ ಸರ್ಕಾರ ನಮ್ಮ ಮೂಲ ಅಗತ್ಯತೆಗಳನ್ನು ಪೂರೈಸುವ ಭರವಸೆ ನೀಡಿತ್ತು. ಆದರೆ ಅದು ಇಂದು ಹುಸಿಯಾಗಿದೆ. ಸೂಕ್ತ ಸೌಲಭ್ಯಗಳನ್ನೇ ನೀಡದೇ ಜನರ ಸೇವೆ ಮಾಡಿ ಎಂದರೆ ಹೇಗೆ ಸಾಧ್ಯ? ತಾಂತ್ರಿಕ ಸೌಲಭ್ಯಗಳನ್ನು ನೀಡಿಲ್ಲ. ಗ್ರಾಮ ಆಡಳಿತಾಧಿಕಾರಿಗಳಿಗೆ ಸೂಕ್ತ ಕಚೇರಿ ಇಲ್ಲ. ಆಡಳಿತ ಚುರುಕುಗೊಳಿಸಲು ಹಲವಾರು ಆ್ಯಪ್‌ ಗಳನ್ನು ಜಾರಿಗೆ ತರಲಾಗಿದೆ. ಆದರೆ ಅವುಗಳ ಅನುಷ್ಠಾನಗೊಳಿಸಲು ಸರ್ಕಾರ ವಿಫಲವಾಗಿದೆ. ಯಾವುದೇ ಮೂಲಭೂತ ಸೌಕರ್ಯ ಒದಗಿಸದೇ ಇರುವ ಕಾರಣ ಜನರಿಗೆ ನಾವು ಸೇವೆ ಒದಗಿಸುವುದು ಅಸಾಧ್ಯವಾಗಿದೆ ಎಂದು ಅವರು ದೂರಿದರು.

ಇತರೆ ಎಲ್ಲ ಇಲಾಖೆಗಳಲ್ಲಿರುವಂತೆ ಕಂದಾಯ ಇಲಾಖೆಯಲ್ಲೂ ವರ್ಗಾವಣೆಗೆ ವಿಶೇಷ ಮಾರ್ಗಸೂಚಿಯನ್ನು ರಚಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಟ್ಟಡ ನೀಡಬೇಕು. ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕು. ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿಯನ್ನು ಈ ಹುದ್ದೆಗೂ ನೀಡಬೇಕು. ಅನುಕಂಪದ ನೇಮಕಾತಿಯಲ್ಲಿ ತಿದ್ದುಪಡಿ ತರುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡುತ್ತಿರುವುದಾಗಿ ಹೇಳಿದರು.

ನಮ್ಮ ಸಂಘಟನೆ ಪ್ರತಿಭಟನೆಯಲ್ಲಿ ತೊಡಗಿರುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ಆದರೆ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಇರುವ ಕಾರಣ ವಿಧಿ ಇಲ್ಲದೇ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಮಂತ್‌ ಕುಮಾರ್‌ ಹೇಳಿದರು.

ಧರಣಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಜಗದೀಶ್, ರಮೇಶ್, ಮಂಜುನಾಥ್, ಅಣ್ಣಪ್ಪ, ಮಲ್ಲಿಕಾರ್ಜುನ್, ಆಂಜನಪ್ಪ, ಭೂತೇಶ್, ಸಿದ್ದೇಶ್, ಚೇತನ್ ಕುಮಾರ್, ರೋಹಿತ್, ಸೌಮ್ಯ, ವೀಣಾ ಮತ್ತು ಇನ್ನು ಹಲವರು ಪಾಲ್ಗೊಂಡಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌