ಬಂಟರನ್ನು ಶರಣಾಗಲು ಹೇಳಿ ಖೆಡ್ಡಾಗೆ ಬಿದ್ದ ದರ್ಶನ್‌!

KannadaprabhaNewsNetwork |  
Published : Jun 12, 2024, 12:38 AM IST

ಸಾರಾಂಶ

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನ ಸಹಚರರನ್ನು ಶರಣಾಗತಿ ಮಾಡಿಸಲು ಯತ್ನಿಸಿ ದರ್ಶನ್‌ ತಾವಾಗಿಯೇ ಪೊಲೀಸರ ಗಾಳಕ್ಕೆ ಸಿಲುಕಿರುವ ಕುತೂಹಲಕಾರಿ ಸಂಗತಿ ನಡೆದಿದೆ.

- ಶವ ಬಿಸಾಕಿದ್ದ ಸ್ಕಾರ್ಪಿಯೋ ಕಾರು ಸಿಸಿಟೀವಿಯಲ್ಲಿ ಪತ್ತೆ

- ಇದರಿಂದ ಬಂಧನದ ಭೀತಿಗೆ ಒಳಗಾದ ದರ್ಶನ್‌

- ಆಗ ಕೊಲೆಯನ್ನೇ ಮಾಡದ 4 ಆಪ್ತರಿಗೆ ಶರಣಾಗಲು ಹೇಳಿದ ನಟ

- ಈ ಮೂಲಕ ತಾವು ಸೇಫ್‌ ಆಗಲು ದರ್ಶನ್‌ ಯತ್ನ

- ವಿಚಾರಣೆ ವೇಳೆ ದರ್ಶನ್‌ ಬಾಯಿಬಿಟ್ಟ ಶರಣಾಗತರು

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನ ಸಹಚರರನ್ನು ಶರಣಾಗತಿ ಮಾಡಿಸಲು ಯತ್ನಿಸಿ ದರ್ಶನ್‌ ತಾವಾಗಿಯೇ ಪೊಲೀಸರ ಗಾಳಕ್ಕೆ ಸಿಲುಕಿರುವ ಕುತೂಹಲಕಾರಿ ಸಂಗತಿ ನಡೆದಿದೆ.

ಸುಮನಹಳ್ಳಿ ಮೇಲ್ಸೇತುವೆ ಸಮೀಪ ರಾಜಕಾಲುವೆ ಬಳಿ ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ ಪ್ರಕರಣದ ತನಿಖೆಗಿಳಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ದರ್ಶನ್ ಸ್ನೇಹಿತನಿಗೆ ಸೇರಿದ ಸ್ಕಾರ್ಪಿಯೋ ಕಾರು ಬೆನ್ನಹತ್ತಿದರು. ಈ ವಿಚಾರ ತಿಳಿದು ಬಂಧನ ಭೀತಿಗೊಳಗಾದ ದರ್ಶನ್‌, ಕೂಡಲೇ ತನ್ನ ಸ್ನೇಹಿತರ ಮೂಲಕ ಕೊಲೆಯಲ್ಲಿ ಪಾತ್ರ ಇಲ್ಲದ ನಾಲ್ವರನ್ನು ಶರಣಾಗತಿ ಮಾಡಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅಂತೆಯೇ ಕಾಮಾಕ್ಷಿಪಾಳ್ಯ ಠಾಣೆಗೆ ತಮ್ಮ ಪರಿಚಿತ ಪಿಎಸ್‌ಐಗೆ ಕರೆ ಮಾಡಿದ ದರ್ಶನ್‌ ಸಹಚರರಾದ ಲಗ್ಗೆರೆಯ ನಂದೀಶ್, ಕಾರ್ತಿಕ್‌, ನಿಖಿಲ್ ಹಾಗೂ ಕೇಶಮೂರ್ತಿ ಶರಣಾಗಿದ್ದಾರೆ ಹಾಗೂ ‘ಅಣ್ಣ ನಮ್ಮಿಂದ ತಪ್ಪಾಗಿದೆ’ ಎಂದು ಹೇಳಿದ್ದಾರೆ.

ಆದರೆ ಬಳಿಕ ಈ ನಾಲ್ವರ ಮೇಲೆ ಶಂಕೆಗೊಂಡು ತೀವ್ರವಾಗಿ ಪೊಲೀಸರು ವಿಚಾರಿಸಿದಾಗ ಕೊಲೆ ರಹಸ್ಯ ಹಾಗೂ ದರ್ಶನ್‌ ಪಾತ್ರ ಬಯಲಾಗಿದೆ ಎಂದು ತಿಳಿದು ಬಂದಿದೆ.

ಶರಣಾದವರ ವಿರುದ್ಧ ಪ್ರತ್ಯೇಕ ಪ್ರಕರಣ:

ಕೊಲೆ ಕೃತ್ಯದಲ್ಲಿ ಪಾತ್ರವಹಿಸದೆ ಹೋದರೂ ಶರಣಾಗಿದ್ದ ದರ್ಶನ್‌ ರವರ ನಾಲ್ವರು ಸಹಚರರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗುತ್ತದೆ. ಈಗ ಕೊಲೆ ಪ್ರಕರಣದಲ್ಲಿ ಅವರನ್ನು ಬಂಧಿತರಾಗಿದ್ದು, ಬಳಿಕ ತಪ್ಪು ಮಾಹಿತಿ ನೀಡಿದ ಆರೋಪ ಮೇರೆಗೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು