ಹೊಸಪೇಟೆ: ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಜಾರಿ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನಾ ಸಭೆಯನ್ನುದ್ದೇಶಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಮರಡಿ ಜಂಬಯ್ಯನಾಯಕ ಮಾತನಾಡಿ, ವಿಜಯನಗರ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕ್ರೈಸ್ತ ಮೊರಾರ್ಜಿ ವಸತಿ ಶಾಲೆಗಳು, ಹಂಪಿ ಕನ್ನಡ ವಿಶ್ವವಿದ್ಯಾಲಯ ಮುಂತಾದ ಇಲಾಖೆಗಳಲ್ಲಿ ಕನಿಷ್ಠ ವೇತನ ಜಾರಿಗೊಳಿಸಿ ಹೊರಗುತ್ತಿಗೆ ನೌಕರರಿಗೆ ತಕ್ಷಣ ಸಂಬಳ ಪಾವತಿಸಬೇಕು ಎಂದು ಒತ್ತಾಯಿಸಿದರು.
ಹೊರಗುತ್ತಿಗೆ ನೌಕರರಿಗೆ ನೇಮಕಾತಿ ಆದೇಶ, ಸರ್ವಿಸ್ ಸರ್ಟಿಫಿಕೇಟ್, ಸಮವಸ್ತ್ರ, ಐಡೆಂಟಿಟಿ ಕಾರ್ಡ್ ಮತ್ತು ಪ್ರತಿ ತಿಂಗಳು ವೇತನ ಚೀಟಿ ಹಾಗೂ ಪಿ.ಎಫ್. ಇ.ಎಸ್.ಐ. ಮಾಹಿತಿಯನ್ನು ಹೊರ ಸಂಪನ್ಮೂಲ ಏಜೆನ್ಸಿಗಳಿಂದ ನೌಕರರಿಗೆ ಕೊಡಿಸಬೇಕು. ಕಳೆದ 20 ವರ್ಷಗಳಿಂದ ದಿನಗೂಲಿಯಾಗಿ ಅನಂತರ ಹೊರ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವವರನ್ನು ಖಾಯಂ ಮಾಡಬೇಕು. ಇಲ್ಲವೇ ವಯೋ ನಿವೃತ್ತಿ ವರೆಗೆ ಕೆಲಸ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರುಸಂಘದ ಹಿರಿಯ ಮುಖಂಡ ಬಿ. ತಾಯಪ್ಪ ನಾಯಕ ಮಾತನಾಡಿ, ಹೊರಗುತ್ತಿಗೆ ನೌಕರದಾರರಿಗೆ ವಾರಕೊಮ್ಮೆ ರಜಾ ದಿನ ಮಂಜೂರು ಮಾಡಬೇಕು ಎನ್ನುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗೂ ನಾಯ್ಕ, ಸಂಘದ ಮುಖಂಡರಾದ ಎಂ. ಚಂದ್ರಶೇಖರ, ಜಿ. ಪರಸಪ್ಪ, ದುರುಗೇಶ್, ಶಿವಪ್ಪ, ರಮೇಶ್, ರಾಘವೇಂದ್ರ, ಪವಿತ್ರಾ, ರಾಘವೇಂದ್ರ, ಪ್ರೇಮಾ, ಕಾಳಮ್ಮ, ಸೀತಮ್ಮ, ಅಂಬಿಕಾ, ಸರೋಜಾ, ರಾಧಾ, ತಾಯಮ್ಮ, ಶಂಭುಲಿಂಗಪ್ಪ, ಹುಲಿಗೆಮ್ಮ, ರಾಮಕ್ಕ, ಗಡಿಗೆಯ್ಯ, ಕಾಡಪ್ಪ, ಪಾರ್ವತಿ, ಹುಲಿಗೆಮ್ಮ, ಮಂಜುಳಾ, ಫರೀದಾ ಬೇಗಂ, ಪ್ರಭಾವತಿ, ಪುಷ್ಪಾವತಿ, ಶರಣಪ್ಪ, ಪುರುಷೋತ್ತಮ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.