ಕನ್ನಡಪ್ರಭ ವಾರ್ತೆ ವಿಜಯಪುರ
ಸಹಜವಾದ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದೆ. ಆದರೆ ಕೆಲವೊಂದು ವಿಕ್ಷಿಪ್ತ ಮನಸುಗಳು ತಮ್ಮ ಸ್ವಾರ್ಥ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ ಮಾಡಲು ಹೊರಟಿರುವುದು ನನ್ನ ಮನಸಿಗೆ ನೋವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ನನ್ನ ಆರೋಗ್ಯದ ವಿಷಯವನ್ನು ಸಹ ರಾಜಕಾರಣಕ್ಕೆ ಬೆಸೆಯುವುದು ಎಷ್ಟು ಸರಿ? ಈ ಸಂದರ್ಭದಲ್ಲಿ ಸೌಜನ್ಯ ತೋರುವ ಬದಲು ಈ ರೀತಿಯಾಗಿ ಕೆಟ್ಟ ರೀತಿಯಲ್ಲಿ ವರ್ತಿಸುತ್ತಿರುವುದು ಸರಿಯಲ್ಲ. ನಾನು ಆರೋಗ್ಯವಾಗಿದ್ದೇನೆ, ಗುಣಮುಖನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನನ್ನ ಆರೋಗ್ಯದ ವಿಷಯವನ್ನು ರಾಜಕಾರಣಕ್ಕೆ ಬೆರೆಸುವುದು ಸರಿಯಲ್ಲ. ಸಾಮಾನ್ಯವಾಗಿ ಕಾಣುವ ಸಮಸ್ಯೆ ನನಗೂ ಕಾಣಿಸಿದೆ. ಈ ಬಾರಿ ವಿಶ್ರಾಂತಿ ತೆಗೆದುಕೊಳ್ಳದ ಪರಿಣಾಮ ಸ್ವಲ್ಪ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿತ್ತು ಅಷ್ಟೇ ಎಂದರು.ಕಳೆದ ಜ.೧೯ರಿಂದಲೇ ನನಗೆ ಆರೋಗ್ಯ ಸಮಸ್ಯೆ ಕಾಡಿತು. ವಾತಾವರಣದಲ್ಲಿ ಬದಲಾವಣೆ ಅದರಲ್ಲೂ ಶೀತಮಯ ವಾತಾವರಣ ಉಂಟಾದಾಗ ನನಗೆ ನ್ಯೂಮೋನಿಯಾ ಕಾಡುವುದು ಸಹಜ. ಮನೆಯಲ್ಲಿದ್ದುಕೊಂಡು ವಿಶ್ರಾಂತಿ ಪಡೆದುಕೊಂಡರೆ ಎಲ್ಲವೂ ಸರಿ ಹೋಗುತ್ತಿತ್ತು. ಈ ಬಾರಿ ಶೀತದ ಸಂದರ್ಭದಲ್ಲಿ ನ್ಯೂಮೋನಿಯಾ ಉಂಟಾಯಿತು. ಆದರೆ, ಸ್ವಲ್ಪ ಹೆಚ್ಚಿನ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜ.೨೧ ರಂದು ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡೆ. ಜ.೨೨ ರಂದು ರಾಮಮಂದಿರ ಲೋಕಾರ್ಪಣೆಯ ವೇಳೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅಣಿಯಾದೆ. ನಂತರ ನಡೆದ ಗಣರಾಜ್ಯೋತ್ಸದಲ್ಲೂ ಭಾಗಿಯಾದೆ. ಕೊಂಚ ವಿಶ್ರಾಂತಿ ತೆಗೆದುಕೊಳ್ಳಲು ವಿಳಂಬ ಮಾಡಿದ ಪರಿಣಾಮವಾಗಿ ಪುನಃ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ವಿಶ್ರಾಂತಿ ಪಡೆಯದ ಕಾರಣಕ್ಕಾಗಿಯೇ ಈ ಬಾರಿ ಆರೋಗ್ಯದಲ್ಲಿ ಏರುಪೇರಾಯಿತು. ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ, ಯಾವ ಆರೋಗ್ಯ ಸಮಸ್ಯೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಆರೋಗ್ಯ ವಿಷಯವಾಗಿ ರಾಜಕಾರಣ ಮಾಡುತ್ತಿರುವುದು ನೋವು ತಂದಿದೆ. ಇಂತಹ ಸಂದರ್ಭದಲ್ಲಿ ಸೌಜನ್ಯ ತೋರುವ ಬದಲು ಕೆಲವು ಮನಸುಗಳು ರಾಜಕೀಯ ಮಾಡುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ಮಾಡುತ್ತಿರುವುದು ಅಸಹ್ಯಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.