ಹುಬ್ಬಳ್ಳಿ- ಅಂಕೋಲಾ: ರೈಲ್ವೆ ಮಂಡಳಿಗೆ ಡಿಪಿಆರ್‌ ಸಲ್ಲಿಕೆ

KannadaprabhaNewsNetwork |  
Published : Apr 02, 2025, 01:02 AM IST
ನಮನಮ | Kannada Prabha

ಸಾರಾಂಶ

ಬಯಲುಸೀಮೆ ಹಾಗೂ ಕರಾವಳಿಯನ್ನು ಸಂಪರ್ಕಿಸುವ, ವಾಣಿಜ್ಯೀಕರಣಕ್ಕೆ ಉತ್ತೇಜನ ನೀಡುವ ಬಹು ವರ್ಷದ ಬೇಡಿಕೆಯ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೆ ಕೊನೆಗೂ ಡಿಪಿಆರ್‌ ಸಿದ್ಧವಾಗಿದ್ದು, ರೈಲ್ವೆ ಮಂಡಳಿಗೆ ಸಲ್ಲಿಕೆಯಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಬಯಲುಸೀಮೆ ಹಾಗೂ ಕರಾವಳಿಯನ್ನು ಸಂಪರ್ಕಿಸುವ, ವಾಣಿಜ್ಯೀಕರಣಕ್ಕೆ ಉತ್ತೇಜನ ನೀಡುವ ಬಹು ವರ್ಷದ ಬೇಡಿಕೆಯ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೆ ಕೊನೆಗೂ ಡಿಪಿಆರ್‌ ಸಿದ್ಧವಾಗಿದ್ದು, ರೈಲ್ವೆ ಮಂಡಳಿಗೆ ಸಲ್ಲಿಕೆಯಾಗಿದೆ.ಬರೋಬ್ಬರಿ ₹17141 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಯನ್ನು ರೈಲ್ವೆ ಮಂಡಳಿಗೆ ನೈರುತ್ಯ ರೈಲ್ವೆ ವಲಯ ಸಲ್ಲಿಸಿದೆ. ಇನ್ನೇನಿದ್ದರೂ ವನ್ಯಜೀವಿ ಮಂಡಳಿ ಅನುಮತಿಯೊಂದೇ ಬಾಕಿ.

ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ನಿರ್ಮಿಸಬೇಕೆಂಬ ಬೇಡಿಕೆ ಹಲವು ದಶಕಗಳದ್ದು. ಇದಕ್ಕಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ಇದರೊಂದಿಗೆ ಪರಿಸರವಾದಿಗಳು ರೈಲು ಮಾರ್ಗ ಅರಣ್ಯ ಪ್ರದೇಶದೊಳಗೆ ಬರುತ್ತದೆ ಎಂದು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವುದುಂಟು. ಇದೀಗ ಪರಿಷ್ಕೃತ ಡಿಪಿಆರ್‌ ಅನ್ನು ನೈರುತ್ಯ ರೈಲ್ವೆವಲಯ ಸಿದ್ಧಪಡಿಸಿ ಸಲ್ಲಿಸಿದ್ದಾಗಿದೆ.

ಪರಿಷ್ಕೃತ ವರದಿ

ಈಗಿರುವ ರಾಷ್ಟ್ರೀಯ ಹೆದ್ದಾರಿ 263 ಪಕ್ಕದಲ್ಲೇ ಜೋಡಿ ಮಾರ್ಗ ನಿರ್ಮಾಣ ಮಾಡುವುದಾಗಿ ಡಿಪಿಆರ್‌ನಲ್ಲಿ ಹೇಳಿಕೊಳ್ಳಲಾಗಿದೆ. ಈ ಮೊದಲು 595 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ಪರಿಷ್ಕೃತ ವರದಿಯಲ್ಲಿ 10 ಹೆಕ್ಟೇರನಷ್ಟು ಕಡಿತಗೊಳಿಸಲಾಗಿದೆ. 163 ಕಿ.ಮೀ ಅಂತರದ ಈ ಮಾರ್ಗದಲ್ಲಿ 97 ಕಿ.ಮೀ ಮಾರ್ಗವು ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತದೆ. ಅದರಲ್ಲೂ 46.57 ಕಿ.ಮೀ ಅಂತರದಲ್ಲಿ 57 ಸುರಂಗ ನಿರ್ಮಿಸಬೇಕಾಗುತ್ತದೆ ಎಂದು ಡಿಪಿಆರ್‌ನಲ್ಲಿ ತಿಳಿಸಲಾಗಿದೆ.

ದಟ್ಟ ಅರಣ್ಯ ಹೊಂದಿರುವ ಯಲ್ಲಾಪುರ - ಸುಂಕಸಾಳಾ ವರೆಗಿನ ಘಟ್ಟ ಪ್ರದೇಶದಲ್ಲಿ ಬೆಟ್ಟ ಕೊರೆದು ಸುರಂಗ ನಿರ್ಮಿಸಬೇಕಾಗುತ್ತದೆ. ಅಲ್ಲದೇ ಮಾರ್ಗದ ನಾನಾ ಕಡೆಗಳಲ್ಲಿ ತಗ್ಗು ಪ್ರದೇಶಗಳು, ಹೊಂಡಗಳು ಬರುತ್ತಿದ್ದು, ಒಟ್ಟು 13.89 ಕಿ.ಮೀ ಉದ್ದದಷ್ಟು ಮೇಲ್ಸೇತುವೆ ನಿರ್ಮಿಸಬೇಕಾಗುತ್ತದೆ ಎಂಬುದನ್ನು ಪ್ರಸ್ತಾಪಿಸಲಾಗಿದೆ.

ಭೂಮಿ ಎಷ್ಟು ಬೇಕು?

ಹುಬ್ಬಳ್ಳಿ- ಯಲ್ಲಾಪುರ ನಡುವೆ 75 ಕಿ.ಮೀ ಬಯಲು ಪ್ರದೇಶ, ಯಲ್ಲಾಪುರದಿಂದ ಸುಂಕಸಾಳಾದ ವರೆಗೆ 55 ಕಿ.ಮೀ ಘಟ್ಟ ಪ್ರದೇಶವಿದೆ. ಸುಂಕಸಾಲದಿಂದ ಅಂಕೋಲಾ ವರೆಗೆ ಗುಡ್ಡಗಾಡು ಇದೆ. ಯೋಜನೆಗೆ ಒಟ್ಟು 995 ಹೆಕ್ಟೇರ್ ಭೂಮಿ ಬೇಕಾಗುತ್ತದೆ. ಇದರಲ್ಲಿ 586 ಹೆಕ್ಟೇರ್ ಅರಣ್ಯ, 184 ಹೆಕ್ಟೇರ್ ನೀರಾವರಿ ಭೂಮಿ ಹಾಗೂ 185 ಹೆಕ್ಟೇರ್ ಒಣಭೂಮಿ, 1.40 ಹೆಕ್ಟೇರ್ ನಗರ ಪ್ರದೇಶ ಒಳಗೊಳ್ಳಲಿದೆ. ಈ ಮಾರ್ಗ ನಿರ್ಮಾಣದಿಂದ ಕಲ್ಲಿದ್ದಲು, ಕಬ್ಬಿಣ ಅದಿರು, ಆಹಾರ ಧಾನ್ಯ ಸೇರಿದಂತೆ ಮೊದಲಾದ ಸರಕು ಸಾಗಿಸಬಹುದಾಗಿದೆ. ಕರಾವಳಿ ಬಂದರುಗಳಿಂದ ರಫ್ತು ವಹಿವಾಟು ಹೆಚ್ಚಿಸಲು ಅನುಕೂಲವಾಗುತ್ತದೆ. ಜತೆಗೆ ಪ್ರವಾಸೋದ್ಯಮಕ್ಕೂ ಸಹಕಾರಿಯಾಗಲಿದೆ.

ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಯೋಜನೆ ಉತ್ತರ ಕರ್ನಾಟಕ ಭಾಗದ ಬಹುಮುಖ್ಯ ರೈಲ್ವೆ ಯೋಜನೆಯಾಗಿದೆ. ಈ ಯೋಜನೆ ಡಿಪಿಆರ್ ಅನ್ನು ಫೆ.17ರಂದು ರೈಲ್ವೆ ಬೋರ್ಡ್‌ಗೆ ಸಲ್ಲಿಸಲಾಗಿದ್ದು, ರೈಲ್ವೆ ಮಂಡಳಿ ಈ ಯೋಜನೆ ಅಂತಿಮಗೊಳಿಸಬೇಕು. ಆದಾದ ಬಳಿಕ ಕಾಮಗಾರಿಯನ್ನು ರೈಲ್ವೆ ಇಲಾಖೆ ಕೈಗೆತ್ತಿಕೊಳ್ಳಲಿದೆ.

ವನ್ಯಜೀವಿ ಮಂಡಳಿ

ಈ ಯೋಜನೆಗೆ ಪರಿಸರವಾದಿಗಳು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಯೋಜನೆಯಿಂದ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರದ ಈ ಪ್ರದೇಶದಲ್ಲಿ ವನ್ಯ ಜೀವಿಗಳಿಗೆ ತೊಂದರೆಯಾಗಲಿದೆ ಎಂಬುದು ಪರಿಸರವಾದಿಗಳ ಅಂಬೋಣ. ಈ ಹಿನ್ನೆಲೆಯಲ್ಲಿ ಕೇಂದ್ರ ವನ್ಯಜೀವಿ ಮಂಡಳಿಯ ತಂಡ ಕಳೆದ ಜನವರಿಯಲ್ಲಿ ಖುದ್ದು ಸಮೀಕ್ಷೆ ನಡೆಸಿ ಪ್ರಾಣಿಗಳ ಸಂಚಾರ, ಸಸ್ಯ ಸಂಕುಲ ಹಾಗೂ ಅಳಿವಿನ ಅಂಚಿನಲ್ಲಿರುವ ಈ ಪ್ರದೇಶದ ಸಸ್ಯ ಪ್ರಭೇದಗಳ ಮಾಹಿತಿಯನ್ನೂ ಕಲೆಹಾಕಿ ವರದಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.ಆ ವರದಿಯಲ್ಲಿ ಏನಿದೆ.? ಎಂಬುದು ಇನ್ನು ಗೊತ್ತಾಗಿಲ್ಲ. ಅಲ್ಲಿಂದ ಅನುಮತಿ ಸಿಕ್ಕರೆ ಮುಗಿತು ಕೆಲಸ ಶುರುವಾಗಲಿದೆ ಎಂಬುದು ರೈಲ್ವೆ ಹೋರಾಟಗಾರರ ಅಂಬೋಣ.

ನಾಲ್ಕು ಪಟ್ಟಿಗೂ ಹೆಚ್ಚು

1999ರಲ್ಲಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಶಂಕುಸ್ಥಾಪನೆ ನೆರವೇರಿಸಿದ್ದರು. ಆಗ ಯೋಜನೆಗೆ ₹494 ಕೋಟಿ ವೆಚ್ಚ ಎಂದು ಅಂದಾಜಿಸಲಾಗಿತ್ತು. ಈಗ ವೆಚ್ಚ ನಾಲ್ಕು ಪಟ್ಟಿಗೂ ಹೆಚ್ಚಾಗಿದೆ. ಡಿಪಿಆರ್‌ ಸಿದ್ಧ

ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ನಿರ್ಮಾಣದ ಡಿಪಿಆರ್‌ ಸಿದ್ಧಪಡಿಸಿ ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ. ಫೆಬ್ರವರಿ ಅಂತ್ಯದಲ್ಲಿ ಸಲ್ಲಿಸಲಾಗಿದೆ. ₹17,141 ಕೋಟಿ ಯೋಜನಾ ವೆಚ್ಚದ ವರದಿ ಸಿದ್ಧಪಡಿಸಲಾಗಿದೆ. ಮಂಡಳಿ ಅನುಮತಿಗೆ ಕಾಯುತ್ತಿದ್ದೇವೆ.

ಮಂಜುನಾಥ ಕನಮಡಿ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈರುತ್ಯ ರೈಲ್ವೆ ವಲಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ