ಮೃತ್ಯಕೂಪವಾದ ಹುಬ್ಬಳ್ಳಿ-ಅಂಕೋಲಾ ಹೆದ್ದಾರಿ!

KannadaprabhaNewsNetwork |  
Published : Jan 16, 2026, 01:30 AM IST
ಮದಮದಮ | Kannada Prabha

ಸಾರಾಂಶ

ವಾಹನಗಳ ಸುಗಮ ಸಂಚಾರಕ್ಕೆ ಚತುಷ್ಪಥ ಹೆದ್ದಾರಿ ನಿರ್ಮಿಸಲಾಗಿದೆ. ಆದರೆ, ಹತ್ತಾರು ಗ್ಯಾರೇಜ್‌ಗಳು ತಮ್ಮ ಹಳೆಯ ಕಾರುಗಳನ್ನು ಫುಟ್‌ಪಾತ್‌ ಹಾಗೂ ರಸ್ತೆ ಮೇಲಿಟ್ಟರೆ, ಟೈರ್‌ ರಿಪೇರಿ ಅಂಗಡಿಗಳು ಟೈರ್‌ಗಳ ರಾಶಿಯನ್ನೇ ಒಟ್ಟಿವೆ. ಮೋಡಕಾ ಅಡ್ಡೆಗಳು ತಮ್ಮ ವ್ಯವಹಾರವನ್ನೆಲ್ಲ ರಸ್ತೆಯಲ್ಲೇ ಮಾಡುತ್ತವೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಗ್ಯಾರೇಜ್‌, ಟೈರ್‌ ಅಂಗಡಿಕಾರರು ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ (ಎನ್ಎಚ್‌-67)ಯ ಹುಬ್ಬಳ್ಳಿಯಿಂದ ಅಂಚಟಗೇರಿ ವರೆಗಿನ ಮಾರ್ಗವನ್ನು ಅತಿಕ್ರಮಿಸಿದ್ದು ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಈ ಹೆದ್ದಾರಿಯಲ್ಲಿ ವಾಹನ ಚಲಾಯಿಸಬೇಕೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕಾದ ಪರಿಸ್ಥಿತಿ ಇಲ್ಲಿನದು.

ಚತುಷ್ಪಥ ಅಲ್ಲ ದ್ವಿಪಥ:

ವಾಹನಗಳ ಸುಗಮ ಸಂಚಾರಕ್ಕೆ ಚತುಷ್ಪಥ ಹೆದ್ದಾರಿ ನಿರ್ಮಿಸಲಾಗಿದೆ. ಆದರೆ, ಹತ್ತಾರು ಗ್ಯಾರೇಜ್‌ಗಳು ತಮ್ಮ ಹಳೆಯ ಕಾರುಗಳನ್ನು ಫುಟ್‌ಪಾತ್‌ ಹಾಗೂ ರಸ್ತೆ ಮೇಲಿಟ್ಟರೆ, ಟೈರ್‌ ರಿಪೇರಿ ಅಂಗಡಿಗಳು ಟೈರ್‌ಗಳ ರಾಶಿಯನ್ನೇ ಒಟ್ಟಿವೆ. ಮೋಡಕಾ ಅಡ್ಡೆಗಳು ತಮ್ಮ ವ್ಯವಹಾರವನ್ನೆಲ್ಲ ರಸ್ತೆಯಲ್ಲೇ ಮಾಡುತ್ತವೆ. ಸಣ್ಣ ಪುಟ್ಟ ಚಹಾದಂಗಡಿಗಳು ಸಹ ರಸ್ತೆ ಅತಿಕ್ರಮಿಸಿವೆ. ಹೆದ್ದಾರಿಗೆ ಹೊಂದಿಕೊಂಡು ಟ್ರಕ್‌ ಟರ್ಮಿನಲ್‌ ಇದ್ದರೂ ರಸ್ತೆಯಲ್ಲಿ ಲಾರಿಗಳು ನಿಲ್ಲುತ್ತಿವೆ. ಹೀಗಾಗಿ ಹುಬ್ಬಳ್ಳಿ ಬೈಪಾಸ್‌ನಿಂದ ಅಂಚಟಗೇರಿ ವರೆಗೂ ಹೆದ್ದಾರಿ ಅಕ್ಷರಶಃ ಮೃತ್ಯುಕೂಪವಾಗಿ ಪರಿಣಮಿಸುತ್ತಿದೆ.

ಟೈರ್‌ ಅಂಗಡಿಗಳೆಲ್ಲವೂ ಮೊದಲು ನಗರದೊಳಗಿದ್ದವು. ಅಲ್ಲಿ ಟ್ರಾಫಿಕ್‌ ಜಾಮ್‌ ಆಗುತ್ತದೆ ಎಂದುಕೊಂಡು ಅಲ್ಲಿನ ಅಂಗಡಿಗಳನ್ನೆಲ್ಲ ಊರ ಹೊರಗೆ ಶಿಫ್ಟ್‌ ಮಾಡಲಾಯಿತು. ಅಲ್ಲಿನ ಅಂಗಡಿಗಳೆಲ್ಲ ಇಲ್ಲಿಗೆ ಬಂದು ಹೆದ್ದಾರಿಯನ್ನೇ ಅತಿಕ್ರಮಿಸಿಕೊಂಡವು. ಹಾಗಂತ ಊರೊಳಗಿನ ಅಂಗಡಿಗಳೆಲ್ಲ ಬಂದ್‌ ಆಗಿಲ್ಲ. ಊರೊಳಗೆ ಮೊದಲು ನಡೆಯುತ್ತಿದ್ದ ಜಾಗೆಯಲ್ಲೂ ಟೈರ್‌, ವಾಹನ ವಸ್ತುಗಳ ಮೋಡಕಾ ಅಂಗಡಿಗಳಿವೆ. ಆದರೆ ಮೊದಲಿದ್ದಷ್ಟು ಇಲ್ಲ ಅಷ್ಟೇ.

ಕಣ್ಮುಚ್ಚಿದ ಪೊಲೀಸ್‌, ಪಾಲಿಕೆ:

ಗ್ಯಾರೇಜ್‌, ಟೈರ್‌ ಅಂಗಡಿಕಾರರು ಹೆದ್ದಾರಿ ಅತಿಕ್ರಮಿಸಿದರೂ ಪೊಲೀಸರು, ಆರ್‌ಟಿಒ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇದೇ ರಸ್ತೆಯಲ್ಲಿ ಪೊಲೀಸರು ನಿಂತು ವಾಹನಗಳ ದಾಖಲೆ ಪರಿಶೀಲಿಸಿ ದಂಡ ದಾಖಲಿಸುತ್ತಿದ್ದಾರೆ ಹೊರತು ಹೆದ್ದಾರಿ ಅತಿಕ್ರಮಣ ತೆರವಿಗೆ ಮುಂದಾಗಿಲ್ಲ. ಅತಿಕ್ರಮಣದಿಂದ ಚತುಷ್ಪಥ ಮಾರ್ಗವೀಗ ದ್ವಿಪಥವಾಗಿ ಪರಿಣಮಿಸಿದೆ. ಇದರಿಂದ ಹಲವು ಬೈಕ್‌ ಸವಾರರು ಬಿದ್ದು ಕೈ-ಕಾಳು ಮುರಿದುಕೊಂಡಿದ್ದಾರೆ. ಕಳೆದ ವಾರವಷ್ಟೇ ತಂದೆ- ಮಗು ಇದೇ ಮಾರ್ಗದಲ್ಲೇ ಅಪಘಾತಕ್ಕಿಡಾಗಿ ಜೀವ ಕಳೆದುಕೊಂಡಿದ್ದಾರೆ. ಮಹಾನಗರ ಪಾಲಿಕೆಯ ಡಂಪಿಂಗ್‌ ಯಾರ್ಡ್‌ಗೆ ಬರುವ ವಾಹನಗಳ ಸಹ ತ್ಯಾಜ್ಯ ವಿಲೇವಾರಿ ಬಳಿಕ ರಸ್ತೆ ಬದಿ ಸಾಲುಗಟ್ಟಿ ನಿಲ್ಲುತ್ತಿವೆ.

ತೆರವಿಗೆ ಆಗ್ರಹ:

ಅಂಚಟಗೇರಿ, ಮಿಶ್ರೀಕೋಟಿ, ಚವರಗುಡ್ಡ ಸೇರಿದಂತೆ ಹತ್ತಾರು ಗ್ರಾಮಗಳ ಯುವಸಮೂಹ, ರೈತರು ಕೆಲಸಕ್ಕೆಂದು ಹುಬ್ಬಳ್ಳಿಗೆ ಆಗಮಿಸುತ್ತಾರೆ. ಬಹುತೇಕರು ಬೈಕ್‌ನಲ್ಲಿಯೇ ಬರುತ್ತಿದ್ದು ರಸ್ತೆ ಅತಿಕ್ರಮಣದಿಂದ ವಾಹನ ಓಡಿಸುವುದು ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಏನಾದರೂ ಅನಾಹುತ ಸಂಭವಿಸುವ ಮೊದಲೇ ಮಹಾನಗರ ಪಾಲಿಕೆ, ಪೊಲೀಸ್‌ ಇಲಾಖೆ ಹೆದ್ದಾರಿ ಅತಿಕ್ರಮಣ ತೆರವುಗೊಳಿಸಬೇಕು ಎಂಬುದು ನಾಗರಿಕರ ಒಕ್ಕೊರಲಿನ ಆಗ್ರಹವಾಗಿದೆ.

ಅತಿಕ್ರಮಣದಿಂದಾಗಿ ಚತುಷ್ಪಥ ಹೋಗಿ ದ್ವಿಪಥ ಆಗಿದೆ. ಇದರಿಂದಾಗಿ ಅಪಘಾತವಲಯವಾಗಿ ಪರಿಣಮಿಸುತ್ತಿದೆ. ಪೊಲೀಸರು, ಪಾಲಿಕೆ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಜಗದೀಶ ಪಾಟೀಲ, ದ್ವಿಚಕ್ರ ವಾಹನ ಸವಾರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನದ ಸತ್ಯ ರೂಪಿತವಾಗಲು ನಡೆ ನುಡಿ ಶುದ್ಧಿಯಾಗಿರಲಿ
ಮಾರಕ ಯೋಜನೆಗೆ ಬಿಜೆಪಿ ಅವಕಾಶ ನೀಡುವುದಿಲ್ಲ: ಎನ್‌.ಎಸ್‌. ಹೆಗಡೆ ಕರ್ಕಿ