ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಮಂಜೂರು: ಸಂಚಲನ ಮೂಡಿಸಿದ ರೈಲ್ವೆ ಸಚಿವರ ಹೇಳಿಕೆ

KannadaprabhaNewsNetwork |  
Published : Jul 27, 2025, 12:01 AM IST
ಸ | Kannada Prabha

ಸಾರಾಂಶ

ಯೋಜನೆಯ ಮಾರ್ಗದ ಮರು ಸಮೀಕ್ಷೆ ನಡೆಸಲಾಗಿದೆ. ಯೋಜನೆಗೆ ಅಗತ್ಯವಾದ ಯೋಜನಾ ವರದಿ ಸಲ್ಲಿಕೆಯಾಗಿದೆ.

ಕಾರವಾರ: ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ ಮಂಜೂರು ಆಗಿರುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿರುವುದು ಜಿಲ್ಲೆಯ ಕರಾವಳಿಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ- ಅಂಕೋಲಾ 163 ಕಿ.ಮೀ. ದೂರದ ಜೋಡಿ ರೈಲು ಮಾರ್ಗ ಮಂಜೂರಾಗಿದೆ ಎಂದು ರೈಲ್ವೆ ಸಚಿವರು ಹೇಳಿಕೆ ನೀಡಿರುವುದರಿಂದ ಯೋಜನೆಗೆ ಇರುವ ಎಲ್ಲ ಅಡ್ಡಿ ಆತಂಕಗಳು ನಿವಾರಣೆಯಾದಂತಾಗಿದೆ. ಯೋಜನೆಯ ಮಾರ್ಗದ ಮರು ಸಮೀಕ್ಷೆ ನಡೆಸಲಾಗಿದೆ. ಯೋಜನೆಗೆ ಅಗತ್ಯವಾದ ಯೋಜನಾ ವರದಿ ಸಲ್ಲಿಕೆಯಾಗಿದೆ. ₹17 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸುಮಾರು ಎರಡೂವರೆ ದಶಕಗಳ ಹಿಂದಿನ ಕನಸಿನ ಕೂಸಾದ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ ಪರಿಸರ ಕಾರಣದಿಂದ ನನೆಗುದಿಗೆ ಬಿದ್ದ ಮೇಲೆ ಯೋಜನೆ ಜಾರಿಗಾಗಿ ಸುದೀರ್ಘ ಕಾನೂನು ಹೋರಾಟ, ಜನತೆಯ ಆಗ್ರಹ, ಪ್ರತಿಭಟನೆ, ಹೋರಾಟ ನಡೆಸಲಾಗಿತ್ತು.

ರೈಲ್ವೆ ಮಾರ್ಗಕ್ಕಾಗಿ ರಮಾನಂದ ನಾಯಕ, ರಾಜೀವ ಗಾಂವಕರ, ಜಾರ್ಜ್‌ ಫರ್ನಾಂಡಿಸ್, ವಿಠ್ಠಲದಾಸ ಕಾಮತ ಮತ್ತಿತರರು ಸುದೀರ್ಘ ಹೋರಾಟ ನಡೆಸಿದ್ದರು. ನ್ಯಾಯವಾದಿ ಆರ್.ಜಿ. ಕೊಲ್ಲೆ ಹೈಕೋರ್ಟಿನಲ್ಲಿ ವಾದ ಮಂಡಿಸಿ ಗಮನ ಸೆಳೆದಿದ್ದರು. ಎರಡೂವರೆ ದಶಕಗಳ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ ಎಂದು ಹೋರಾಟದಲ್ಲಿ ತೊಡಗಿಕೊಂಡಿದ್ದ ಪತ್ರಕರ್ತ ವಿಠ್ಠಲದಾಸ ಕಾಮತ ತಿಳಿಸಿದ್ದಾರೆ.

ಕರಾವಳಿಯನ್ನು ರಾಜ್ಯದ ವಾಣಿಜ್ಯ ನಗರಿಯಾದ ಹುಬ್ಬಳ್ಳಿಯ ಮೂಲಕ ರಾಜಧಾನಿ ಬೆಂಗಳೂರಿಗೆ ಬೆಸೆಯುವ ಈ ಮಾರ್ಗ ನಿರ್ಮಾಣವಾದ ಮೇಲೆ ಜಿಲ್ಲೆಯ ಕರಾವಳಿಯ ಅಭಿವೃದ್ಧಿಗೆ ಪ್ರಮುಖ ಕೊಡುಗೆಯಾಗಲಿದೆ.

ವಿಶ್ವಾಸ ಇತ್ತು: ರೈಲ್ವೆ ಸಚಿವರೇ ಹೇಳಿಕೆ ನೀಡಿರುವುದರಿಂದ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗಕ್ಕೆ ಇರುವ ಎಲ್ಲ ಅಡ್ಡಿಗಳು ನಿವಾರಣೆಯಾದಂತಾಗಿದೆ. ಅಗತ್ಯ ಇರುವ ಎಲ್ಲ ಪ್ರಕ್ರಿಯೆಗಳನ್ನು ರೈಲ್ವೆ ಇಲಾಖೆ ನಡೆಸಿದೆ. ಈ ರೈಲ್ವೆ ಮಾರ್ಗ ಆಗಲಿದೆ ಎಂಬ ವಿಶ್ವಾಸ ಇತ್ತು. ಆಗೇ ಆಗಲಿದೆ ಎನ್ನುತ್ತಾರೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಆತಂಕ ನಿವಾರಣೆ: ಈಗ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗಕ್ಕೆ ಇರುವ ಎಲ್ಲ ಆತಂಕವೂ ನಿವಾರಣೆಯಾಗಿದೆ. ಈ ಮಾರ್ಗ ಮಂಜೂರಾಗಿದೆ ಎಂದು ಸಚಿವರು ಹೇಳಿರುವುದು ಸಂತಸಕ್ಕೆ ಕಾರಣವಾಗಿದೆ ಎನ್ನುತ್ತಾರೆ ಹೈಕೋರ್ಟ್‌ ನ್ಯಾಯವಾದಿ ಆರ್.ಜಿ. ಕೊಲ್ಲೆ.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಮಂಜೂರು: ರೂಪಾಲಿ ನಾಯ್ಕ ಸಂತಸ

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ ಮಂಜೂರಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ಈ ಭಾಗದ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.ಜನತೆಯ ಬಹುಕಾಲದ ಕನಸು ಈ ರೈಲ್ವೆ ಮಾರ್ಗದ್ದಾಗಿತ್ತು. ಈ ರೈಲ್ವೆ ಮಾರ್ಗಕ್ಕಾಗಿ ಹಲವರು ಸುದೀರ್ಘ ಹೋರಾಟ, ಪ್ರತಿಭಟನೆ ನಡೆಸಿದ್ದಾರೆ. ಸಾರ್ವಜನಿಕರ ಒತ್ತಾಸೆಯೂ ಇತ್ತು. ಕೇಂದ್ರ ಸಚಿವರ ಹೇಳಿಕೆಯಿಂದ ಎಲ್ಲರ ಹೋರಾಟಕ್ಕೆ ಜಯ ಸಂದಂತಾಗಿದೆ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಯೋಜನೆಯ ಪರವಾಗಿ ನಿಂತು ಯೋಜನೆಗೆ ಸಮ್ಮತಿ ಸೂಚಿಸಿದ್ದರು. ಈ ಯೋಜನೆ ಜಾರಿ ಬಗ್ಗೆ ಯಡಿಯೂರಪ್ಪ ಬಳಿ ನಾನೂ ವಿನಂತಿಸಿದ್ದೆ.ಈ ಯೋಜನೆ ಮಂಜೂರಿಗೆ ಕಾರಣರಾದ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ರೂಪಾಲಿ ಎಸ್.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ