ಸೋಮರಡ್ಡಿ ಅಳವಂಡಿ
ಯೂರಿಯಾ ಖರೀದಿಗೆಂದು ಕೊಪ್ಪಳ ಟಿಎಪಿಎಂಸಿಗೆ ಬಂದ ರೈತರೊಬ್ಬರು ನೋ ಸ್ಟಾಕ್ ಬೋರ್ಡ್ ನೋಡಿ ಆಕ್ರೋಶಗೊಂಡಿದ್ದಾರೆ. ಬೆಳೆಗೆ ಗೊಬ್ಬರ ಕೊಡದೆ ಇದ್ದರೆ ಮಾಡಿದ ಖರ್ಚು ಬರುವುದಿಲ್ಲ, ಮಣ್ಣು ತಿಂದು ಸಾಯಬೇಕಾ ಎಂದು ತಾನೇ ಮಣ್ಣು ತಿಂದಿದ್ದಾನೆ.
ತಾಲೂಕಿನ ಕುಣಿಕೇರಿ ಗ್ರಾಮದ ಚಂದ್ರಪ್ಪ ಬಡಿಗಿ ಎಂಬ ರೈತನೇ ಈ ರೀತಿ ಆಕ್ರೋಶ ವ್ಯಕ್ತಪಡಿಸಿ ಯೂರಿಯಾ ಅಭಾವದ ತೀವ್ರತೆ ಹೇಳಿದ್ದಾನೆ. ತನ್ನ ನಾಲ್ಕು ಎಕರೆ ಹೊಲದಲ್ಲಿ ಹಾಕಿದ ಮೆಕ್ಕೆಜೋಳಕ್ಕೆ ಯೂರಿಯಾ ರಸಗೊಬ್ಬರವನ್ನು ಈಗ ಹಾಕಲೇಬೇಕಾಗಿದೆ. ಆದರೆ, ಕಳೆದೊಂದು ವಾರದಿಂದ ಯೂರಿಯಾ ರಸಗೊಬ್ಬರಕ್ಕಾಗಿ ಸುತ್ತಾಡಿದರೂ ಸಿಕ್ಕಿಲ್ಲ. ಅತ್ತ ಉತ್ತಮ ಮಳೆ ಆಗುತ್ತಿರುವುದರಿಂದ ಯೂರಿಯಾ ರಸಗೊಬ್ಬರ ಹಾಕದಿದ್ದರೆ ಮೆಕ್ಕೆಜೋಳ ಬೆಳೆ ಹಳದಿ ಬಣ್ಣಕ್ಕೆ ತಿರುಗಿ ಹಾಳಾಗುತ್ತದೆ. ಹೀಗಾಗಿ ಯೂರಿಯಾ ರಸಗೊಬ್ಬರ ಸಿಗದೆ ಇರುವುದು ರೈತನ ಆಕ್ರೋಶಕ್ಕೆ ಕಾರಣವಾಗಿದೆ.ನಾನು ಕಳೆದ ವಾರದಿಂದ ನಾಲ್ಕು ಚೀಲ ಯೂರಿಯಾ ರಸಗೊಬ್ಬರ ಬೇಕೆಂದು ಅಂಗಡಿ, ಮುಂಗಟ್ಟು ಸುತ್ತಿದ್ದೇನೆ. ಅಷ್ಟೇ ಅಲ್ಲದೇ ಸರ್ಕಾರಿ ಒಡೆತನದ ಟಿಎಪಿಎಂಸಿ ಬಳಿ ಬೆಳಗಿನ ಜಾವವೇ ಬಂದು ಕಾದಿದ್ದೇನೆ. ಇವತ್ತು ಬಂದರೆ ಗೊಬ್ಬರವಿಲ್ಲವೆಂದು ಬೋರ್ಡ್ ಹಾಕಿದ್ದಾರೆ. ಕೇಳುವುದಕ್ಕೂ ಯಾರು ಇಲ್ಲ. ರೈತರು ಬೆಳೆಯದೇ ಇದ್ದರೆ ಎಲ್ಲರೂ ಮಣ್ಣು ತಿನ್ನಬೇಕಾಗುತ್ತದೆ. ರೈತರು ಯೂರಿಯಾ ರಸಗೊಬ್ಬರ ಸಿಗದೆ ಎಂತಹ ಸಂಕಷ್ಟ ಅನುಭವಿಸುತ್ತಿದ್ದಾರೆಂದು ಈ ಸರ್ಕಾರಕ್ಕೆ ಅರಿವಾಗಲೆಂದು ಮಣ್ಣು ತಿಂದಿದ್ದೇನೆ ಹೇಳಿಕೊಂಡಿದ್ದಾರೆ.
ಯೂರಿಯಾ ಅಭಾವ:
ಯೂರಿಯಾ ಗೊಬ್ಬರದ ಬದಲಾಗಿ ನ್ಯಾನೋ ಯೂರಿಯಾ ಬಳಸುವಂತೆ ಹೇಳುತ್ತಿದ್ದಾರೆ. ಆದರೆ, ರೈತರು ಮಾತ್ರ ಯೂರಿಯಾ ರಸಗೊಬ್ಬರವೇ ಬೇಕು ಎಂದು ಪಟ್ಟು ಹಿಡಿದಿದ್ದರಿಂದ ಸಮಸ್ಯೆ ಗಂಭೀರವಾಗಿದೆ. ಆದರೂ ಸರ್ಕಾರ ಸ್ಪಂದಿಸದೇ ಇರುವುದರಿಂದ ರೈತರು ರೊಚ್ಚಿಗೆದ್ದಿದ್ದಾರೆ.ಅಧಿಕ ಪೂರೈಕೆ
ರೈತರ ಆಧಾರ್ ಕಾರ್ಡ್ ಮೂಲಕವೇ ರಸಗೊಬ್ಬರ ಪೂರೈಕೆ ಮಾಡಬೇಕು. ಆದರೆ, ಒಬ್ಬೊಬ್ಬ ರೈತನ ಹೆಸರಿನಲ್ಲಿ ನೂರು ಚೀಲಕ್ಕೂ ಅಧಿಕ ಯೂರಿಯಾ ರಸಗೊಬ್ಬರ ನೀಡಿದ ದಾಖಲೆ ಸೃಷ್ಟಿ ಮಾಡಲಾಗಿದೆ. ಈ ಬಗ್ಗೆ ತನಿಖೆ ಮಾಡಿದರೆ ಕಳ್ಳ ದಂಧೆ ಮಾಡುವವರ ಬಣ್ಣ ಬಯಲಾಗುತ್ತದೆ.