ಕೊಪ್ಪಳ:
ಪ್ರತಿಭಟನಾಕಾರರು ಮಾತನಾಡಿ, ಸಾರ್ವಜನಿಕರು ಬಸಾಪುರ ಕೆರೆಯಲ್ಲಿನ ನೀರು ಬಳಕೆ ಮಾಡಲು ಸುಪ್ರೀಂಕೋರ್ಟ್ ಆದೇಶವಿದ್ದರೂ ಕುರಿಗಳು ಹಾಗೂ ಜಾನುವಾರುಗಳಿಗೆ ನೀರು ಕುಡಿಸಲು ಹೋದ ಕುರಿಗಾಹಿ ಮತ್ತು ದನಗಾಹಿಗಳ ಮೇಲೆ ಕಂಪನಿ ನೇಮಿಸಿರುವ ಭದ್ರತಾ ಸಿಬ್ಬಂದಿ ಹೆಸರಿನ ಗೂಂಡಾಗಳು ಕಂಪನಿ ಮಾಲೀಕನ ಪ್ರಚೋದನೆಯಿಂದ ಮನಬಂದಂತೆ ಹಲ್ಲೆ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು.
ಈ ಕಂಪನಿ ಸಲುವಾಗಿ ರೈತರು ನೂರಾರು ಎಕರೆ ಭೂಮಿ ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡು 13 ವರ್ಷ ಗತಿಸಿದರೂ ರೈತರಿಗೆ ಉದ್ಯೋಗ ಕೊಟ್ಟಿಲ್ಲ. ಜೀವನೋಪಾಯಕ್ಕಾಗಿ ಆಧಾರವಾದ ಜಾನುವಾರುಗಳಿಗೆ ಏಕೈಕ ಕುಡಿಯುವ ನೀರಿನ ಮೂಲವನ್ನು ಕಿತ್ತುಕೊಂಡು ಈಗ ಗೂಂಡಾಗಿರಿ ಮಾಡುವ ಕಂಪನಿ ಅಟ್ಟಹಾಸ ಮಿತಿಮೀರಲಿದೆ ಎನ್ನುವ ಆತಂಕ ಜನರಲ್ಲಿ ಮೂಡಿದೆ. ಯಾವುದೇ ಕಾರಣಕ್ಕೂ ಈ ಕಾರ್ಖಾನೆ ವಿಸ್ತರಣೆ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಕುರಿಗಾಯಿ ದೇವಪ್ಪ ಹಾಲಳ್ಳಿ ಮೇಲೆ ದಾಳಿ ಮಾಡಿದವರನ್ನು ಶಿಕ್ಷೆಗೊಳಪಡಿಸಬೇಕು. ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬಲ್ಡೋಟಾ ಎಂಎಸ್‌ಪಿಎಲ್-ಬಿಎಸ್‌ಪಿಎಲ್ ವಿಸ್ತರಣೆ ರದ್ದುಗೊಳಿಸುವುದು, ಕುರಿಗಾಹಿ-ದನಗಾಹಿ ದೇವಪ್ಪ ಹಾಲಳ್ಳಿ ಮೇಲೆ ಹಲ್ಲೆ ನಡೆಸಿದ ಕಂಪನಿ ಸಿಬ್ಬಂದಿಗಳ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮಾಲೀಕನನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು. ಕುಟುಂಬಕ್ಕೆ ಸೂಕ್ತ ಪರಿಹಾರ, ಬಸಾಪೂರ ಸ.ನಂ. 143ರ 44.35 ಎಕರೆ ಕೆರೆಯನ್ನು ನ್ಯಾಯಾಲಯದ ಆದೇಶದಂತೆ ಬಳಸಲು ಮುಕ್ತಗೊಳಿಸಬೇಕು. ಬಸಾಪೂರ ಗ್ರಾಮದಿಂದ ಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕಾಂಪೌಂಡ್ ನಿರ್ಮಿಸಿದ್ದು ತೆರವುಗೊಳಿಸಬೇಕು. ಕೆರೆ ಏರಿಗೆ ನೇರವಾಗಿ ಮುಖ್ಯದ್ವಾರ ನಿರ್ಮಿಸಿ ಗೇಟ್ ಅಳವಡಿಸಿದ್ದರಿಂದ ಭಾರಿ ವಾಹನ, ಟಿಪ್ಪರ್ ಓಡಾಟ ಮಾಡುತ್ತಿದ್ದು ಕೆರೆಗೆ ಸುಗಮವಾಗಿ ಹೋಗಿ ಬರಲು ಆಗುತ್ತಿಲ್ಲ. ಆದ್ದರಿಂದ ಗೇಟ್ ತೆರವು ಮಾಡಬೇಕು. ಕೆರೆಯ ಪೂರ್ವ ಭಾಗ ಮತ್ತು ಉತ್ತರ ಭಾಗದಲ್ಲಿ 10ರಿಂದ 15 ಎಕರೆ ಕೆರೆ ಮುಚ್ಚಿ ರಸ್ತೆ ಮಾಡಿಕೊಂಡಿದ್ದು ತೆರವುಗೊಳಿಸಬೇಕು. ಕಾರ್ಖಾನೆ ವಿಸ್ತರಣೆಗೆ ಶೀಘ್ರವಾಗಿ ಶಾಶ್ವತ ತಡೆ ನೀಡಿ ಆದೇಶಿಸಿ ಭಾಗ್ಯನಗರದ ಮೇಲಿನ ಪರಿಣಾಮ ತಪ್ಪಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ವಿಠಲ್ ಚೌಗಲ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.