ಹುಬ್ಬಳ್ಳಿ ಕೇಂದ್ರ ಬಸ್‌ ನಿಲ್ದಾಣಕ್ಕೆ ಕೊನೆಗೂ ನವೀಕರಣ ಭಾಗ್ಯ!

KannadaprabhaNewsNetwork |  
Published : Nov 07, 2025, 02:45 AM IST
446456 | Kannada Prabha

ಸಾರಾಂಶ

13 ಎಕರೆ ವಿಸ್ತೀರ್ಣ ಹೊಂದಿರುವ ಈ ಬಸ್‌ ನಿಲ್ದಾಣದ ಕಟ್ಟಡವನ್ನು 23 ವರ್ಷದ ಹಿಂದೆಯೇ ನಿರ್ಮಿಸಲಾಗಿತ್ತು. ಆದರೆ, ಇಲ್ಲಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಸಮರ್ಪಕವಾದ ಆಸನ, ನೀರಿನ ಲಭ್ಯತೆ, ಶೌಚಾಲಯ ಹೀಗೆ ಅಗತ್ಯ ವ್ಯವಸ್ಥೆಗಳಿರಲಿಲ್ಲ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಕೇಂದ್ರ ಹೊಸ ಬಸ್‌ ನಿಲ್ದಾಣಕ್ಕೆ ಕೊನೆಗೂ ನವೀಕರಣ ಭಾಗ್ಯ ಲಭಿಸಿ, ನವ ವಧುವಿನಂತೆ ಕಂಗೊಳಿಸುತ್ತಿದೆ. ₹23.48 ಕೋಟಿ ವೆಚ್ಚದಲ್ಲಿ ಸಿಂಗಾರಗೊಂಡಿರುವ ಈ ಬಸ್‌ ನಿಲ್ದಾಣ ನ. 7ರಂದು ಉದ್ಘಾಟನೆಗೆ ಸಜ್ಜಾಗಿ ನಿಂತಿದೆ.

ಬೆಂಗಳೂರು ಹೊರತುಪಡಿಸಿದರೆ ಪ್ರಮುಖ ವಾಣಿಜ್ಯ ಕೇಂದ್ರ ಹುಬ್ಬಳ್ಳಿ. ಇಲ್ಲಿಗೆ ನಿತ್ಯವೂ ವ್ಯಾಪಾರ, ವಹಿವಾಟಿಗಾಗಿ ಅನ್ಯ ರಾಜ್ಯ, ಬೇರೆ ಬೇರೆ ಜಿಲ್ಲೆಗಳಿಂದ ಲಕ್ಷಾಂತರ ಜನರು ಬಸ್‌ ಮೂಲಕ ಸಂಚರಿಸುತ್ತಾರೆ. ಇಂತಹ ಪ್ರಯಾಣಿಕರ ಅನುಕೂಲಕ್ಕಾಗಿಯೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಕೇಂದ್ರಿಯ ಬಸ್ ನಿಲ್ದಾಣವನ್ನು ನವೀಕರಣ ಮಾಡಬೇಕು ಎನ್ನುವ ಕೂಗಿಗೆ ಸ್ಪಂದನೆ ಲಭಿಸಿದ್ದು, ಕಾಮಗಾರಿ ಪೂರ್ಣಗೊಂಡಿದೆ.

₹23.48 ಕೋಟಿ ವೆಚ್ಚ:

13 ಎಕರೆ ವಿಸ್ತೀರ್ಣ ಹೊಂದಿರುವ ಈ ಬಸ್‌ ನಿಲ್ದಾಣದ ಕಟ್ಟಡವನ್ನು 23 ವರ್ಷದ ಹಿಂದೆಯೇ ನಿರ್ಮಿಸಲಾಗಿತ್ತು. ಆದರೆ, ಇಲ್ಲಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಸಮರ್ಪಕವಾದ ಆಸನ, ನೀರಿನ ಲಭ್ಯತೆ, ಶೌಚಾಲಯ ಹೀಗೆ ಅಗತ್ಯ ವ್ಯವಸ್ಥೆಗಳಿರಲಿಲ್ಲ. ಪ್ರಮುಖವಾಗಿ ನಿಲ್ದಾಣಕ್ಕೆ ಆಕರ್ಷಕವಾಗಿರುವ ಪ್ರವೇಶ ದ್ವಾರವಿರಲಿಲ್ಲ. ಬೈಕ್‌ ಮತ್ತು ಕಾರುಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ 2024ರ ಫೆಬ್ರುವರಿಯಲ್ಲಿ ಡಲ್ಟ್‌ ಸಹಯೋಗದಲ್ಲಿ ₹23.48 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಪ್ರಾರಂಭಿಸಲಾಗಿತ್ತು. ಇದೀಗ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಕಲ ಸೌಲಭ್ಯ ಕಲ್ಪಿಸಲಾಗಿದೆ.

ಏನೇನು ಇದೆ:

ಈ ಬಸ್‌ ನಿಲ್ದಾಣದ ಮೂಲಕ ನಿತ್ಯ ಸಾವಿರಾರು ಬಸ್‌ ಸಂಚರಿಸುತ್ತಿವೆ. ಇವುಗಳ ಅಗತ್ಯಕ್ಕೆ ಅನುಗುಣವಾಗಿ ನಿಲ್ದಾಣದಲ್ಲಿ ಒಟ್ಟು 52 ಪ್ಲಾಟ್‌ ಫಾರಂ,

ನಿಲ್ದಾಣದ ಆವರಣ ಹಾಗೂ ಐಡೆಲ್ ಪಾರ್ಕಿಂಗ್‌ಗೆ ಕಾಂಕ್ರೀಟ್‌, ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು, ಮುಖ್ಯ ಕಟ್ಟಡ ಮೊದಲನೆ ಅಂತ್ತಸ್ತಿನ ಚಾವಣಿಗೆ ನವೀಕೃತ ಶೀಟ್, ನೂತನ ಮಾದರಿಯ ನಿರ್ಮಲ ಶೌಚಾಲಯ ಹಾಗೂ ಒಳ ಚರಂಡಿ ವ್ಯವಸ್ಥೆ, ಬಸ್‌ಗಳ ಆಗಮನ ಮತ್ತು ನಿರ್ಗಮನಕ್ಕೆ ಸಮರ್ಪಕ ವ್ಯವಸ್ಥೆ, ನಗರ ಸಾರಿಗೆ ಬಸ್‌ಗಳಿಗೆ ಪ್ರತ್ಯೇಕ ಪ್ಲಾಟ್‌ ಫಾರ್ಮ್‌ ವ್ಯವಸ್ಥೆ, ಟಿಕೆಟ್ ಕೌಂಟರ್‌ ಮೇಲ್ದರ್ಜೆಗೆ, ಪ್ರಯಾಣಿಕರಿಗೆ ವಿಶ್ರಾಂತಿ ಕೊಠಡಿ, ನಗರ ಸಾರಿಗೆ ನೂತನ ತಂಗುದಾಣ ಹಾಗೂ ಪ್ರತ್ಯೇಕ ಪಾದಚಾರಿ ಮಾರ್ಗ, ಲಗೇಜು ಇಡಲು ಕ್ಲಾಕ್ ರೂಮ್, ಬೈಕ್‌ ಹಾಗೂ ಕಾರುಗಳಿಗೆ ನಿಲುಗಡೆ ಪ್ರದೇಶ ಕಲ್ಪಿಸಲಾಗಿದೆ.

ಇನ್ನು ಮಹಿಳಾ ಪ್ರಯಾಣಿಕರಿಗಾಗಿ ಶಿಶುಪಾಲನಾ ಹಾಗೂ ವಿಶ್ರಾಂತಿ ಕೊಠಡಿ, ಆಟೋ-ಟ್ಯಾಕ್ಸಿಗೆ ಪ್ರತ್ಯೇಕ ಪಥ ಜತೆಗೆ ನಿಲ್ದಾಣದ ಎರಡೂ ಬದಿಯಲ್ಲಿ ಪ್ರಯಾಣಿಕರು ನಿಲ್ಲಲು ಪ್ಲಾಟ್‌ಫಾರ್ಮ್, ಆಸನದ ವ್ಯವಸ್ಥೆ, ಬಸ್ ನಿಲ್ದಾಣದಲ್ಲಿ ಕಾಂಕ್ರೀಟಿಕರಣ, ಒಳಚರಂಡಿ, ವಿಐಪಿ ಲಾಂಜ್, ವಾಣಿಜ್ಯ ಮಳಿಗೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಈ ಹೊಸ ಬಸ್‌ ನಿಲ್ದಾಣ ಹೊಂದಿದೆ. ಹಿಂದಿನ ಬಸ್‌ ನಿಲ್ದಾಣಕ್ಕೂ ಈಗಿನ ಬಸ್‌ ನಿಲ್ದಾಣಕ್ಕೂ ತುಂಬಾ ವ್ಯತ್ಯಾಸವಾಗಿದೆ. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಿರುವುದು ಸಂತಸ ತಂದಿದೆ. ಈಗಿರುವ ಸುಸಜ್ಜಿತ ಬಸ್‌ ನಿಲ್ದಾಣದ ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳು ಆದ್ಯತೆ ನೀಡಲಿ.

ಶಶಿಧರ ನಿಡಗುಂದಿ, ಪ್ರಯಾಣಿಕ

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ