ಹುಬ್ಬಳ್ಳಿ: ಒಂದು ವಾರದಿಂದ ಬಿಡುವು ನೀಡಿದ್ದ ವರುಣ ಶುಕ್ರವಾರ ಮತ್ತೆ ಅರ್ಭಟಿಸಿದ್ದು, ಸುಮಾರು ಆರೇಳು ಗಂಟೆ ಸುರಿದ ಮಳೆಗೆ ಅವಳಿ ನಗರಗಳು ನಲಗುವಂತಾಯಿತು. ಸುರಿದ ಮಹಾಮಳೆಗೆ ಊರು ಹೊಳೆಯಂತೆ ಆಗಿತ್ತು.
ಇಲ್ಲಿನ ದಾಜೀಬಾನ್‌ಪೇಟ್, ಶಾ ಬಜಾರ, ದುರ್ಗದಬೈಲ್, ಸ್ಟೇಶನ್ ರಸ್ತೆ, ಗೋಕುಲ ರಸ್ತೆ, ಚೆನ್ನಮ್ಮ ಸರ್ಕಲ್ ಹಾಗೂ ಹಳೆಯ ಕೋರ್ಟ್ ಸರ್ಕಲ್, ಉಣಕಲ್, ತುಳಜಾಭವಾನಿ ಸರ್ಕಲ್, ಶ್ರೀನಗರ, ಲ್ಯಾಮಿಂಗ್ಟನ್ ಸರ್ಕಲ್, ಕೇಶ್ವಾಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ರಸ್ತೆಯಲ್ಲಿ ಮೊಣಕಾಲವರೆಗೆ ಮಳೆ ನೀರು ನಿಂತಿತ್ತು. ಅಕ್ಷರಶಃ ರಸ್ತೆಗಳೆಲ್ಲ ಹೊಳೆಯಂತೆ ಭಾಸವಾಗುತ್ತಿದ್ದವು.
ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಓಡಾಡಲು ತೀವ್ರ ಕಷ್ಟ ಅನುಭವಿಸುವಂತಾಯಿತು. ಕೆಲ ದ್ವಿಚಕ್ರವಾಹನಗಳು ರಸ್ತೆಯಲ್ಲೇ ನಿಂತು ಬಿಟ್ಟಿದ್ದವು. ಒಂದೊಂದು ವಾಹನಗಳನ್ನು ಇಬ್ಬಿಬ್ಬರು ತಳ್ಳಿಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಚರಂಡಿಗಳೆಲ್ಲ ತುಂಬಿ ಹರಿದಿದ್ದರಿಂದ ಅದರ ಗಲೀಜು ಕೂಡ ರಸ್ತೆ ಮೇಲೆ ಹರಿಯುತ್ತಿತ್ತು. ಪಾಲಿಕೆಗೆ ಹಿಡಿಶಾಪ ಹಾಕುತ್ತಲೇ ಜನತೆ ಮುಂದೆ ಸಾಗುತ್ತಿತ್ತು.ಕೆಲವೆಡೆ ಮಳೆ ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ತಗ್ಗು-ಗುಂಡಿಗಳು ಕಾಣದೇ ವಾಹನ ಸವಾರರು ಭಯದಿಂದಲೇ ಸಂಚರಿಸುವಂತಾಯಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿ ನೆನೆದುಕೊಂಡೇ ಮನೆ ಸೇರುವಂತಾಯಿತು. ಚರಂಡಿಗಳಲ್ಲಿ ತ್ಯಾಜ್ಯ ಸಿಲುಕಿದ ಪರಿಣಾಮ ಚರಂಡಿ ನೀರು ಸಹ ರಸ್ತೆ ಮೇಲೆ ಹರಿದು ತರಕಾರಿ ಸೇರಿ ಬೀದಿ ಬದಿ ವ್ಯಾಪಾರಿಗಳು ಪರದಾಡುವಂತಾಯಿತು.
ಧಾರವಾಡದಲ್ಲಿ ಸಂಜೆ 5ರ ಸುಮಾರಿಗೆ ಆರಂಭವಾದ ಧಾರಾಕಾರ ಮಳೆ ಗಂಟೆಗಟ್ಟಲೆ ಬಿಟ್ಟು ಬಿಡದೇ ಸುರಿದ ಕಾರಣ ಅವಳಿ ನಗರದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಹೊಕ್ಕು ಜನರು ಪರದಾಡುವಂತಾಗಿದೆ.
ಕಳೆದ ಒಂದು ವಾರ ಬಿಸಿಲಿನ ತಾಪದಿಂದ ಸುಸ್ತಾಗಿದ್ದ ಜನತೆ ಒಮ್ಮಿಗೆ ಸುರಿದ ಮಹಾಮಳೆಗೆ ಹೈರಾಣುವನ್ನಾಗಿಸಿದ್ದಂತೂ ಸತ್ಯ.