ಶಿವಾನಂದ ಗೊಂಬಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹತ್ವಾಂಕಾಕ್ಷಿ ಯೋಜನೆಯಾದ ಟೊರ್ರಿಫೈಡ್ ಚಾರ್‌ಕೋಲ್ (ಇದ್ದಿಲು) ತಯಾರಿಕಾ ಘಟಕಕ್ಕೆ ಕೊನೆಗೂ ಚಾಲನೆ ದೊರೆತಿದೆ.
ಥರ್ಮಲ್ ಪವರ್ ಪ್ಲಾಂಟ್‌ಗೆ ಬಳಸುವ ಚಾರ್‌ಕೋಲ್ ತಯಾರಿಸುವ ಕೆಲಸ ಸದ್ಯಕ್ಕೆ ಪ್ರಾಯೋಗಿಕವಾಗಿ ನಡೆಯುತ್ತಿದೆ. ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಚಾರ್‌ಕೋಲ್ ಉತ್ಪಾದನೆಯಾದರೆ ರಾಜ್ಯದ ಪ್ರಥಮ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರಿಂದ ಒಣಕಸವೂ ವೈಜ್ಞಾನಿಕವಾಗಿ ವಿಲೇವಾರಿ ಕೂಡ ಆದಂತಾಗಲಿದೆ.ತ್ಯಾಜ್ಯ ಸಂಗ್ರಹವೆಷ್ಟು?:
ಮಹಾನಗರ ಪಾಲಿಕೆಯು 2019ರಲ್ಲಿ ಎನ್‌ಟಿಪಿಸಿ-ವಿದ್ಯುತ್ ವ್ಯಾಪಾರ ನಿಗಮದೊಂದಿಗೆ 25 ವರ್ಷವರೆಗೆ ಒಪ್ಪಂದ ಮಾಡಿಕೊಂಡಿತ್ತು. ಜತೆಗೆ ಗಬ್ಬೂರನಲ್ಲಿ 10 ಎಕರೆ ಜಮೀನನ್ನು ನೀಡಿತ್ತು. ಆದರೆ, ಕೊರೋನಾ ಮಹಾಮಾರಿಯಿಂದಾಗಿ 2022ರ ವರೆಗೂ ಬರೀ ಒಪ್ಪಂದವಾಗಿಯೇ ಉಳಿದಿತ್ತು. ಬಳಿಕ ಇದರ ಸಿವಿಲ್ ವರ್ಕ್, ಯಂತ್ರ ಅಳವಡಿಕೆ ಸೇರಿದಂತೆ ಉಳಿದ ಎಲ್ಲ ಕೆಲಸಗಳನ್ನು ಕಂಪನಿಯೂ ಮುಗಿಸಿಕೊಂಡಿದೆ.
ಇಲ್ಲಿ ಉತ್ಪಾದನೆಯಾಗುವ ಚಾರ್‌ಕೋಲ್‌ನ್ನು ಥರ್ಮಲ್ ಪವರ್ ಪ್ಲಾಂಟ್‌ಗೆ ಕಳುಹಿಸಲಾಗುತ್ತದೆ. ಅಲ್ಲಿ ಕಲ್ಲಿದ್ದಲು ಜೊತೆ, ಜೊತೆಗೆ ಈ ಚಾರ್‌ಕೋಲ್ ಅನ್ನು ವಿದ್ಯುತ್ ಉತ್ಪಾದನೆಗೆ ಬಳಸಬಹುದಾಗಿದೆ. ಈ ಚಾರ್‌ಕೋಲ್ ಬಳಕೆಯಿಂದ ಶೇ.60-70ರಷ್ಟು ಕಲ್ಲಿದ್ದಲು ಬಳಕೆ ಕಡಿಮೆ ಮಾಡಬಹುದು ಎಂದು ಅಧಿಕಾರಿ ವರ್ಗ ತಿಳಿಸುತ್ತದೆ.
ಒಣಕಸದ ವಿಲೇವಾರಿ ಸಮಸ್ಯೆ ನಿವಾರಣೆಯಾಗುತ್ತದೆ. ರಾಶಿ, ರಾಶಿ ಗುಡ್ಡೆ ಬೀಳುವುದು ತಪ್ಪುತ್ತದೆ. ಜತೆಗೆ ಸಂಗ್ರಹವಾಗುವ ಒಣಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕೆಂದರೆ ಕನಿಷ್ಠವೆಂದರೂ ವರ್ಷಕ್ಕೆ ₹ 2ರಿಂದ ₹ 3 ಕೋಟಿ ಖರ್ಚಾಗುತ್ತಿದ್ದು ಅದು ಉಳಿತಾಯವಾಗುತ್ತದೆ. ತ್ಯಾಜ್ಯವೆಲ್ಲ ಮರುಬಳಕೆಯಾಗಿ ಪರಿಸರ ರಕ್ಷಣೆಯೂ ಆಗಲಿದೆ. ತ್ಯಾಜ್ಯ ಮುಕ್ತ ನಗರ ಆಗಲು ಅನುಕೂಲವಾಗಲಿದೆ. ಕಳೆದ ಎಂಟ್ಹತ್ತು ದಿನಗಳಿಂದ ಪ್ರಾಯೋಗಿಕವಾಗಿ ಟೊರ್ರಿಫೈಡ್ ಚಾರ್‌ಕೋಲ್ ಉತ್ಪಾದನೆ ನಡೆಯುತ್ತಿದ್ದು, ಇನ್ನೆರಡು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಲ್ಲಿ (ಬಿಬಿಎಂಪಿ) ಕೆಪಿಸಿಯಿಂದ ಒಣ ಕಸದಿಂದ ವಿದ್ಯುತ್ ಉತ್ಪಾದನೆಗೆ ಘಟಕ ಮಾಡಿಕೊಂಡಿದೆ. ಅದನ್ನು ಹೊರತುಪಡಿಸಿದರೆ, ಉಳಿದ 10 ಮಹಾನಗರ ಪಾಲಿಕೆಗಳ ಪೈಕಿ ಟೋರ್ರಿಫೈಡ್ ಚಾರ್‌ಕೋಲ್ ಉತ್ಪಾದನೆ ಮಾಡಲಿರುವ ಮೊದಲ ಪಾಲಿಕೆ ಎಂಬ ಹೆಗ್ಗಳಿಕೆಗೆ ಹುಬ್ಬಳ್ಳಿ-ಧಾರವಾಡ ಪಾತ್ರವಾಗಲಿದೆ.
ಒಣಕಸದಿಂದ ಟೊರ್ರಿಫೈಡ್ ಚಾರ್‌ಕೋಲ್ ಉತ್ಪಾದನೆಯ ಕೆಲಸ ಸದ್ಯ ಪ್ರಾಯೋಗಿಕವಾಗಿ ನಡೆಯುತ್ತಿದೆ. ಇನ್ನೆರಡು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿದ್ದು, ಒಣಕಸದ ಸಮಸ್ಯೆ ನಿವಾರಣೆಯಾಗಲಿದೆ.