ಹುಬ್ಬಳ್ಳಿ: ನಗರದಲ್ಲಿ ನಡೆದಿರುವ ಫ್ಲೈಓವರ್ ಕಾಮಗಾರಿ ಜನರ ಜೀವಹಿಂಡುತ್ತಿದೆ. ಕಾಮಗಾರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮಾರ್ಗ ಬದಲಾವಣೆ ಮಾಡಿರುವುದರಿಂದ ವಾಹನ ಸವಾರರು ಪರದಾಡುತ್ತಿರುವಂತಾಗಿದೆ.
ಭಾನುವಾರ ರಜಾ ದಿನವಾಗಿದ್ದರಿಂದ ಸಂಚಾರ ದಟ್ಟನೆ ಅಷ್ಟಾಗಿರಲಿಲ್ಲ. ಸೋಮವಾರ ನಗರದ ಎಲ್ಲೆಡೆ ವಾಹನ ದಟ್ಟಣೆ ವಿಪರೀತವಾಗಿತ್ತು.ಚೆನ್ನಮ್ಮ ಸರ್ಕಲ್, ದೇಶಪಾಂಡೆ ನಗರ, ಕೊಪ್ಪಿಕರ್ ರಸ್ತೆ, ಅಂಬೇಡ್ಕರ್ ರಸ್ತೆ, ಗಿರಣಿ ಚಾಳ, ಭಾರತ್ ಮಿಲ್ ಸರ್ಕಲ್, ಕಾರವಾರ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಮುಖ್ಯರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವುದನ್ನು ಗಮನಿಸಿದ ವಾಹನ ಸವಾರರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಲೇ ಪರ‍್ಯಾಯ ಮಾರ್ಗಗಳತ್ತ ಮುಖಮಾಡಿದರು. ಹೀಗಾಗಿ, ನಗರದ ಸಣ್ಣ- ಪುಟ್ಟ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.
ಮುಖ್ಯರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳ ನಿಯಂತ್ರಣಕ್ಕೆ ಹರಸಾಹಸ ಪಡುವಂತಾಯಿತು. ಕೆಲ ರಸ್ತೆಗಳಲ್ಲಿ ಪೊಲೀಸರು ಸಂಚಾರಕ್ಕೆ ಅವಕಾಶ ನೀಡದಿರುವುದರಿಂದ ವಾಹನ ಸವಾರರು ವಾಗ್ವಾದ ಕೂಡ ನಡೆಸಿದರು. ನೀಲಿಜಿನ್ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ, ಸೋಮವಾರ ಭಾರಿ ವಾಹನಗಳನ್ನು ಬಿಟ್ಟರೆ ಬೈಕ್, ಆಟೋ, ಕಾರುಗಳು ಎಂದಿನಂತೆ ಸಂಚರಿಸುತ್ತಿದ್ದವು.ಬಸ್ ಗಳ ಬಗೆಗೆ ಗೊಂದಲ: ಪರಸ್ಥಳಗಳಿಂದ ಬಂದವರಿಗೆ ಬಸ್ ನಿಲ್ದಾಣದ ಬಗೆಗೆ ಗೊಂದಲ ಏರ್ಪಟ್ಟಿತ್ತು. ಅವರಿವರ ಬಳಿ ಕೇಳುತ್ತ ತಾವು ತಲುಪಬೇಕಾದ ಊರಿನ ಬಸ್ ನಿಲ್ದಾಣದ ಮಾಹಿತಿ ಪಡೆಯುತ್ತ ಹುಬ್ಬಳ್ಳಿ ಬಸ್ ಸ್ಟ್ಯಾಂಡ್ ಗೊಂದಲ ಯಾವಾಗ ಸರಿಯಾಗುತ್ತೋ ಎಂದು ಗೊನಗುತ್ತಲೇ ಸಾಗುತ್ತಿದ್ದರು. ಕಂಡಕ್ಟರ್, ಡ್ರೈವರ್‌ಗಳಿಗೂ ಪ್ರಯಾಣಿಕರಿಗೆ ಮಾಹಿತಿ ನೀಡಿ ನೀಡಿ ಸಾಕಾಗಿತ್ತು.
ಪ್ರಯಾಣಿಕರು, ವಾಹನ ಸವಾರರು, ಜಿಲ್ಲಾಡಳಿತ, ಪಾಲಿಕೆ, ಕಾಮಗಾರಿ ನಿರ್ವಹಿಸುತ್ತಿರುವ ಕಂಪನಿ ವಿರುದ್ಧ ಅಸಮಾಧಾನ ಹೊರಹಾಕುವುದು ಅಲ್ಲಲ್ಲಿ ಕಂಡು ಬಂತು.ಮಾರ್ಗ ಬದಲು:
ಇಲ್ಲಿನ ಕಿತ್ತೂರು ಚೆನ್ನಮ್ಮ ವೃತ್ತದ ಬಳಿಕ ಫ್ಲೈಓವರ್ ಕಾಮಗಾರಿ ನಡೆಯುತ್ತಿರುವುದರಿಂದ ಹಳೇ ಬಸ್ ನಿಲ್ದಾಣಗಳ ವಾಹನಗಳ ಸಂಚಾರ ಬಂದ್ ಆಗಿದೆ. ಚೆನ್ನಮ್ಮ ವೃತ್ತದ ಮೂಲಕ ಕಾರ್ಯಾಚರಣೆ ಆಗುವ ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಾಹನಗಳ ಮಾರ್ಗ ಬದಲಾವಣೆ ಮಾಡಿ ಕಾರ್ಯಾಚರಣೆ ಮಾಡಲಾಗುತ್ತಿದೆ.ಸಿಬಿಟಿಯಿಂದ ಕಾರ್ಯಾಚರಣೆಯಾಗುತ್ತಿರುವ ನವನಗರ, ಗಾಮನಗಟ್ಟಿ, ಲಿಂಗರಾಜನಗರ, ಮಹಾಲಕ್ಷ್ಮೀನಗರ, ಕಾರವಾರ ರಸ್ತೆಯಲ್ಲಿ ಇರುವ ಮಿರ್ಜನಕರ ಪೆಟ್ರೋಲ್ ಬಂಕ್ ಹತ್ತಿರ, ಬಾಸಲ್ ಮಿಷನ್ ಚರ್ಚ್ ಹತ್ತಿರ ಹಾಗೂ ಐಟಿ ಪಾರ್ಕ್ ಮುಂದೆ ನಿಲ್ಲುತ್ತವೆ.
ಸಿಬಿಟಿಯಿಂದ ಕಾರ್ಯಾಚರಣೆಯಾಗುತ್ತಿರುವ ಗೋಕುಲ, ತಾರಿಹಾಳ, ಮಂಜುನಾಥನಗರ, ಕಾರವಾರ ರಸ್ತೆಯಲ್ಲಿ ಇರುವ ಮಿರ್ಜನಕರ ಪೆಟ್ರೋಲ್ ಬಂಕ್ ಹತ್ತಿರ, ಬಾಸಲ್ ಮಿಷನ್ ಚರ್ಚ್ ಹತ್ತಿರ ಹಾಗೂ ವಾಣಿ ವಿಲಾಸ ಸರ್ಕಲ್ ಹತ್ತಿರ ನಿಲುಗಡೆ ಮಾಡಲಾಗುತ್ತಿದೆ.ಸಿಬಿಟಿ/ರೈಲ್ವೆ ನಿಲ್ದಾಣದಿಂದ ಸಂಚರಿಸುವ 200ಎ ಮತ್ತು 201ಬಿ ಬಿಆರ್‌ಟಿಎಸ್ ವಾಹನಗಳು ಹಾಗೂ ಹುಬ್ಬಳ್ಳಿ-ಧಾರವಾಡ (ಮಿಶ್ರಪಥ) ವಾಹನಗಳು ಕಾರವಾರ ರಸ್ತೆಯಲ್ಲಿರುವ ಹನುಮಾನ ದೇವಸ್ಥಾನದ ಹತ್ತಿರ ಹಾಗೂ ಐಟಿ ಪಾರ್ಕ್ ಮುಂದುಗಡೆ ನಿಲುಗಡೆ ಮಾಡಲಾಗುತ್ತಿದೆ. ಬಿಆರ್‌ಟಿಎಸ್ ನಿಗದಿತ ನಿಲುಗಡೆಯ 100ಡಿ ವಾಹನಗಳು ಐಟಿ ಪಾರ್ಕ್ ಮುಂದುಗಡೆ ನಿಲುಗಡೆ ಮಾಡಲಾಗುತ್ತಿದೆ.
ಮಿಶ್ರಿಕೋಟಿ, ರೇವಡಿಹಾಳ, ಬಸನಕೊಪ್ಪ, ಗುರುವಿನಕೊಪ್ಪ, ದುಮ್ಮವಾಡ ರೇವಡಿಹಾಳ, ತಾರಿಹಾಳ, ದೇವರಗುಡಿಹಾಳ, ಇಟಿಗಟ್ಟಿ, ಚವರಗುಡ್ಡ ಇಂದಿರಾಗಾಂಧಿ ಗ್ಲಾಸ್‌ಹೌಸ(ಗಿರಣಿಚಾಳ) ಮುಂದೆ ನಿಲುಗಡೆ ಮಾಡಿ ಮುಂದೆ ಕಾರ್ಯಾಚರಣೆ ಆಗುತ್ತಿವೆ. ಕುಸುಗಲ್, ಬ್ಯಾಹಟ್ಟಿ, ಮಂಟೂರ ಶಿರಗುಪ್ಪಿಗೆ ಹೋಗುವ ವಾಹನಗಳು ಹಳೇ ಕೋರ್ಟ್ ಮುಂದೆ ನಿಲುಗಡೆ ಮಾಡಲಾಗುತ್ತಿದೆ ಎಂದು ನಗರ ಸಾರಿಗೆ ಘಟಕದ ವಿಭಾಗಾಧಿಕಾರಿ ಸಿದ್ದಲಿಂಗೇಶ ತಿಳಿಸಿದ್ದಾರೆ.