ಬಾಗಲಕೋಟೆ : ಸಿಇಟಿ ಪರೀಕ್ಷೆ ಬರೆಯಲು ಜನಿವಾರ ತೆಗೆಸಿದ ಪ್ರಕರಣದ ಹಿಂದೆ ವ್ಯವಸ್ಥಿತ ಷಡ್ಯಂತ್ರ ಅಡಗಿರುವ ಶಂಕೆಯಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಒತ್ತಾಯಿಸಿದ್ದಾರೆ.
ನವನಗರದ ಜಿಲ್ಲಾಡಳಿತ ಭವನದೆದುರು ಶಿವಮೊಗ್ಗ, ಬೀದರ್ ಹಾಗೂ ಧಾರವಾಡಗಳಲ್ಲಿ ಸಿಇಟಿ ಪರೀಕ್ಷೆ ಬರೆಯಲು ಜನಿವಾರ ತೆಗೆಸಿದ ಘಟನೆ ಖಂಡಿಸಿ ಹಿಂದೂ ಸಂಸ್ಕೃತಿ ಸುರಕ್ಷಾ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜನಿವಾರ, ಶಿವದಾರಗಳೆಲ್ಲವೂ ನಮ್ಮ ಅಸ್ಮಿತೆಯ ಸಂಕೇತ. ಅವು ಪರಂಪರಾಗತವಾಗಿ ಬಂದಿವೆ. ಅವುಗಳ ಮಹತ್ವ ಅರಿಯದೆ ತಗಿಸಿ ಹಾಕುವುಷ್ಟು ದಾರಿದ್ರ್ಯತನ ತುಂಬಿಕೊಂಡಿರುವುದು ದುರದೃಷ್ಟಕರ ಎಂದರು.
ಘಟನೆಗೆ ಸಂಬಂಧಿಸಿದಂತೆ ರಾಜಕೀಯ ಟೀಕೆಗೆ ನಾನು ಸಿದ್ಧನಿಲ್ಲ. ಆದರೆ ಘಟನೆ ಒಂದೇ ಕಡೆ ನಡೆದಿಲ್ಲ. ಅನೇಕ ಕಡೆ ನಡೆದಿರುವುದರಿಂದ ಇದರ ಹಿಂದಿರುವ ಷಡ್ಯಂತ್ರದ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ಬೀದರ್ ನಲ್ಲಿ ವಿದ್ಯಾರ್ಥಿ ಪರೀಕ್ಷೆಯಿಂದಲೇ ಹೊರಗೆ ಉಳಿದಿದ್ದಾನೆ. ಸರ್ಕಾರ ಉಚಿತ ಸೀಟ್ ನೀಡಿ ಆತನ ಭವಿಷ್ಯಕ್ಕೆ ನೆರವಾಗುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ಹೋರಾಟದ ನೇತೃತ್ವ ವಹಿಸಿದ್ದ ಡಾ.ಗಿರೀಶ ಮಸೂರಕರ ಮಾತನಾಡಿ, ಜನಿವಾರ ತಗಿಸುವ ಮಟ್ಟಿಗೆ ಇಳಿದಿರುವ ಅಧಿಕಾರಿ, ಸಿಬ್ಬಂದಿಯ ಅಮಾನತು ಮಾಡಲಾಗಿದೆ. ಅವರನ್ನು ಜೈಲಿಗಟ್ಟುವ ಕೆಲಸ ಮಾಡಬೇಕು. ಈ ವಿಚಾರದಲ್ಲಿ ವಿದ್ಯಾರ್ಥಿ ನೆರವಿಗೆ ಧಾವಿಸಿರುವ ಸಚಿವ ಈಶ್ವರ ಖಂಡ್ರೆ ನಡೆ ಶ್ಲಾಘನೀಯ ಎಂದ ಅವರು, ಬ್ರಾಹ್ಮಣರ ಮೇಲೆ ಮೂತ್ರ ಮಾಡುವುದಾಗಿ ಹೇಳಿಕೆ ನೀಡಿರುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಚಿತ್ರಗಳನ್ನು ಯಾರೂ ವೀಕ್ಷಿಸಬಾರದು ಎಂದು ಕರೆ ನೀಡಿದರು.
ಆರ್ಯವೈಶ್ಯ ಸಮಾಜದ ಸತ್ಯನಾರಾಯಣ ಹೇಮಾದ್ರಿ, ಎಸ್.ಎಲ್.ಕೋರಾ ಮಾತನಾಡಿ, ಜನಿವಾರಕ್ಕೆ ಅದರದೆ ಆದ ವೈಶಿಷ್ಟ್ಯತೆಯಿದೆ. ಅದು ನಮ್ಮ ಧಾರ್ಮಿಕ ನಂಬಿಕೆ ಅದನ್ನು ತೆಗೆಯುವ ಧೈರ್ಯ ಮಾಡಿದವರು ಸಂವಿಧಾನ ವಿರೋಧಿಗಳು. ವೈಯಕ್ತಿಕ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಲು ಇವರಿಗೆ ಹೇಳಿದ್ದು ಯಾರು ಈ ಬಗ್ಗೆ ತನಿಖೆ ಆಗಬೇಕೆಂದರು.
ಕ್ಷತ್ರೀಯ ಒಕ್ಕೂಟದ ಡಾ.ಶೇಖರ ಮಾನೆ ಮಾತನಾಡಿ, ಹಿಂದೂಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಕರ್ನಾಟಕದಲ್ಲಿ ಜನಿವಾರ ತೆಗೆಸಿರುವ ಘಟನೆ ನಿಜಕ್ಕೂ ಆತಂಕ ಸೃಷ್ಟಿ ಮಾಡಿದೆ. ವಿದ್ಯಾರ್ಥಿಗಳನ್ನು ಕುಗ್ಗಿಸುವ ಕೆಲಸವಾಗಿದೆ. ಸಮಾಜ ಒಗ್ಗಟ್ಟಾಗುವುದರಿಂದ ಮಾತ್ರ ಇಂಥ ಘಟನೆಗಳನ್ನು ತಡೆಯಲು ಸಾಧ್ಯ ಎಂದು ಹೇಳಿದರು.
ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗೆ, ಪಂ. ಭೀಮಸೇನಾಚಾರ್ಯ ಪಾಂಡುರಂಗಿ ಮಾತನಾಡಿ, ಸುಚಿವೃತ್ ಕುಲಕರ್ಣಿ ತೋರಿದ ಧೈರ್ಯದಿಂದಾಗಿ ನಾವೆಲ್ಲರೂ ಒಂದಾಗುವಂತೆ ಆಗಿದೆ. ತಾಯಿಂದ ಮೊದಲ ಜನನವಾದರೆ, ಜನಿವಾರದಿಂದ ಎರಡನೇ ಜನನ ಎಂಬ ನಂಬಿಕೆಯಿದೆ. ಅದನ್ನು ಧರಿಸಲು, ತ್ಯಜಿಸಲು ಅದರದೇ ಆದ ವಿಧಾನಗಳಿವೆ. ಈ ಘಟನೆ ನಿಜಕ್ಕೂ ದಿಗ್ಭ್ರಮೆಯನ್ನುಂಟು ಮಾಡಿದೆ. ಯಾವ ಕಾರಣಕ್ಕೂ ಇದನ್ನು ಸಮಾಜ ಸಹಿಸಲು ಸಾಧ್ಯವಿಲ್ಲ. ನಮಗೆ ಶಾಸ್ತ್ರ, ಶಸ್ತ್ರ ಎರಡೂ ಗೊತ್ತಿದೆ ಎಂದರು.
ಮರಾಠ ಸಮಾಜದ ಅಧ್ಯಕ್ಷ ಎಂ.ಆರ್. ಶಿಂಧೆ, ಗಣಪತಿ( ರಾಜು) ವಾಘ, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಚಂದ್ರಕಾಂತ ತೇಲ್ಕರ್, ವಾಸುದೇವ ಝಿಂಗಾಡೆ, ಸಂತೋಷ ಕರಣಿ, ಮಹೇಶ ತೇಲ್ಕರ್, ಮಹೇಶ್ವರಿ ಸಮಾಜದ ಲಕ್ಷ್ಮೀನಾರಾಯಣ ಕಾಸಟ್, ರಾಮ ಮುಂದಡಾ, ನಗರಸಭೆ ಉಪಾಧ್ಯಕ್ಷೆ ಶೋಭಾ ವೆಂಕಟೇಶರಾವ್, ಮುಖಂಡರಾದ ನಾಗರಾಜ ಹದ್ಲಿ, ವಿಜಯ ಸುಲಾಖೆ, ವೀರಣ್ಣ ಹಳೇಗೌಡರ, ಶಂಭುಗೌಡ ಪಾಟೀಲ, ಚಂದ್ರಕಾಂತ ಕೇಸನೂರ, ನರಸಿಂಹ ಆಲೂರ, ಶಿವರಾಂ ಹೆಗಡೆ, ಸುರೇಶ ಹೆಗಡೆ, ಗಿರೀಶ ಆಶ್ರಿತ, ಸಂತೋಷ ಗದ್ದನಕೇರಿ, ಅಡವೇಂದ್ರ ಇನಾಂದಾರ, ಪ್ರದೀಪ ಜೋಶಿ, ಧೀರೇಂದ್ರ ಜೋಶಿ, ವಿನಾಯಕ ತಾಳಿಕೋಟಿ, ರಾಘವೇಂದ್ರ ಕುಲಕರ್ಣಿ, ಶ್ರೀಹರಿ ಪಾಟೀಲ, ಶಶಿ ದೇಶಪಾಂಡೆ, ಡಿ.ಬಿ. ಕುಲಕರ್ಣಿ, ಗುಂಡೂ ಶಿಂಧೆ, ಬಂಡೇರಾವ್ ಸರದೇಸಾಯಿ, ಮಾರು ನಾಲವಡೆ, ವಾದಿರಾಜಾಚಾರ್ಯ ಇಂಗಳೆ, ಮಧ್ವೇಶಾಚಾರ್ಯ ಹಿಪ್ಪರಗಿ, ಪ್ರಸನ್ನ ದೇಶಪಾಂಡೆ, ವಕೀಲರಾದ ಕಿರಣ ಪುರೋಹಿತ, ಪ್ರಶಾಂತ ದೇಸಾಯಿ, ಜಯತೀರ್ಥ ಪರಾಂಡೆ ಮತ್ತಿತರರು ಇದ್ದರು.