ಮಹಮ್ಮದ ರಫೀಕ್ ಬೀಳಗಿ
ಹುಬ್ಬಳ್ಳಿ ಕಾ ಮಹಾರಾಜಾ ಮೂರ್ತಿ ತಯಾರಿಕೆ ಹೊಣೆಯನ್ನು ಪಶ್ಚಿಮ ಬಂಗಾಳದ ಅಪ್ಪು ಪಾಲ್ ಅವರ ಸಹೋದರ ಸ್ವಪನ್ ಪಾಲ್ ವಹಿಸಿದ್ದಾರೆ. ಪ್ರತಿಬಾರಿ ಅಪ್ಪು ಪಾಲ್ ಮುಂದೆ ನಿಂತು ಮೂರ್ತಿ ತಯಾರಿಸುತ್ತಿದ್ದರು. ಈ ಬಾರಿ ಅನಾರೋಗ್ಯದಿಂದಾಗಿ ಅವರು ಆಗಮಿಸಿಲ್ಲ. ಆದರೆ, ಮೊಬೈಲ್ ಮೂಲಕ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಹುಬ್ಬಳ್ಳಿಯೊಂದಿಗೆ ಸುಮಾರು 30 ವರ್ಷಗಳಿಂದ ನಂಟು ಹೊಂದಿರುವ ಈ ಪಾಲ್ ಸಹೋದರರು ಪ್ರತಿ ವರ್ಷ ನಾಲ್ಕೈದು ತಿಂಗಳು ಮೊದಲೇ ಮೂರ್ತಿ ತಯಾರಿಗೆಂದೇ ನಗರಕ್ಕೆ ಆಗಮಿಸುತ್ತಾರೆ. ಬೃಹತ್ ಮೂರ್ತಿಗಳನ್ನು ರೂಪಿಸುವುದರಲ್ಲಿ ನಿರತರಾದ ಇವರು ಪ್ರತಿ ಸಲವೂ ಬೇರೆ ಬೇರೆ ವಿನ್ಯಾಸಗಳಿಗೆ ಆದ್ಯತೆ ನೀಡುತ್ತಾರೆ.ನಗರದಲ್ಲೇ ಮೂರ್ತಿ ತಯಾರಿಕೆ:
ಮೇ ತಿಂಗಳಲ್ಲೇ ಬಂಗಾಳದಿಂದ ಆಗಮಿಸಿರುವ 12 ಕಾರ್ಮಿಕರು ರಾತ್ರಿ, ಹಗಲು ಎನ್ನದೇ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರದ ಸ್ಪಪನ್ ಪಾಲ್ ಅವರು ಮರಾಠಗಲ್ಲಿಯ ಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ವಿವಿಧ ಗಾತ್ರದ ಸುಮಾರು 40 ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದಾರೆ.
3 ರಿಂದ 25 ಅಡಿ ಎತ್ತರದ ಮೂರ್ತಿಗಳನ್ನು ಸಿದ್ಧಪಡಿಸಿದ್ದೇವೆ. ಹುಬ್ಬಳ್ಳಿಯಲ್ಲಿ ಮೂರ್ತಿಗಳನ್ನು ತಯಾರಿಸುವುದು ನಮಗೆ ಖುಷಿ ತರುತ್ತದೆ. ನಾವು ತಯಾರು ಮಾಡಿರುವ ಗಣಪತಿಗಳನ್ನು ವಿವಿಧ ಜಿಲ್ಲೆಗಳ ಗಣೇಶೋತ್ಸವ ಮಂಡಳಿಯವರು ಒಯ್ದು ಪ್ರತಿಷ್ಠಾಪಿಸುತ್ತಾರೆ. ಈ ಬಾರಿ ಕಚ್ಚಾ ವಸ್ತುಗಳ ಬೆಲೆ ಗಣನೀಯವಾಗಿ ಏರಿದೆ. ಇದರಿಂದಾಗಿ ಮೂರ್ತಿ ತಯಾರಿಕಾ ವೆಚ್ಚ ಪ್ರತಿಬಾರಿಗಿಂತ ಹೆಚ್ಚಾಗಿದೆ. ನಾವು ತಯಾರಿಸಿದ ಮೂರ್ತಿಗಳನ್ನು ಇಲ್ಲಿನ ಜನ ಖುಷಿಯಿಂದ ಖರೀದಿಸುತ್ತಾರೆ, ಪೂಜಿಸುತ್ತಾರೆ. ಇದು ನಮಗೆ ಖುಷಿ ಕೊಡುತ್ತದೆ ಎನ್ನುತ್ತಾರೆ ಸ್ಪಪನ್ ಪಾಲ್.25 ಅಡಿಯ ಮೂರ್ತಿ: ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗುವ ಗಜಕಾಯದ ಗಣಪತಿಯು 25 ಅಡಿ ಎತ್ತರವಿದೆ. ಸಂಪೂರ್ಣ ಮಣ್ಣಿನಿಂದ ತಯಾರಿಸಿದ ಮೂರ್ತಿ ಇದಾಗಿದ್ದು, ಪರಿಸರ ಸ್ನೇಹಿಯಾಗಿದೆ.
ನಮ್ಮದು ಕಲಾವಿದರ ಕುಟುಂಬ. ಮೂವರು ಸಹೋದರರಿದ್ದೇವೆ. ಮೂವರೂ ಮೂರ್ತಿ ತಯಾರಿಕೆಯಲ್ಲೇ ತೊಡಗಿಸಿಕೊಂಡಿದ್ದೇವೆ. ನನ್ನ ತಂದೆ ಕೂಡ ಪ್ರಸಿದ್ಧ ವಿಗ್ರಹ ತಯಾರಕರಾಗಿದ್ದರು. ಈ ಬಾರಿ ಸಹೋದರ ಅಪ್ಪು ಪಾಲ್ ಅನಾರೋಗ್ಯದಿಂದಾಗಿ ಹೆಚ್ಚಿನ ವಿಗ್ರಹಗಳಿಗೆ ಬೇಡಿಕೆ ಇದ್ದರೂ ನಮಗೆ ಮಾಡಲು ಸಾಧ್ಯವಾಗಿಲ್ಲ ಎಂದು ಮೂರ್ತಿ ತಯಾರಕ ಸ್ವಪನ್ ಪಾಲ್ ಹೇಳಿದರು.