ಹುಬ್ಬಳ್ಳಿ ಟೈಗರ್ಸ್ ವಿಕೆಟ್ ನಷ್ಟವಿಲ್ಲದೇ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಅಭೂತ ಪೂರ್ವ ಜಯ ಸಾಧಿಸಿತು. ಇದರೊಂದಿಗೆ 5 ಅಂಕಗಳೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ.
ಹುಬ್ಬಳ್ಳಿ:
ಮಯಾಂಕ್ ಅಗರವಾಲ್ (81*), ಮೊಹಮ್ಮದ ತಾಹ್ (57*) ಆಕರ್ಷಕ ಬ್ಯಾಟಿಂಗ್ ಹಾಗೂ ವೈಭವ ಶರ್ಮಾನ ಬೌಲಿಂಗ್ ಪ್ರದರ್ಶನದಿಂದಾಗಿ ಹುಬ್ಬಳ್ಳಿ ಟೈಗರ್ಸ್ ವಿಕೆಟ್ ನಷ್ಟವಿಲ್ಲದೇ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಅಭೂತ ಪೂರ್ವ ಜಯ ಸಾಧಿಸಿತು. ಇದರೊಂದಿಗೆ 5 ಅಂಕಗಳೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ.
ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಸೋಮವಾರ ನಡೆದ ಮಹಾರಾಜಾ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯ 16ನೇ ಪಂದ್ಯದಲ್ಲಿ ಎದುರಾಳಿಯಾಗಿದ್ದ ಗುಲ್ಬರ್ಗಾ ವಿರುದ್ಧ ಹುಬ್ಬಳ್ಳಿ ಟೈಗರ್ಸ್ 10 ವಿಕೆಟ್‌ನಿಂದ ತವರು ನೆಲದಲ್ಲಿ ಗೆಲುವು ಸಾಧಿಸಿತು. ಮೈಸೂರಲ್ಲಿ ನಡೆದ ಪಂದ್ಯದಲ್ಲಿ ಇದೇ ಗುಲ್ಬರ್ಗಾ ತಂಡದ ವಿರುದ್ಧ ಅತ್ಯಂತ ಹೀನಾಯ ಸೋಲು ಕಂಡಿದ್ದ ಹುಬ್ಬಳ್ಳಿ ಟೈಗರ್ಸ್ ಭರ್ಜರಿ ಗೆಲವು ಸಾಧಿಸುವ ಮೂಲಕ ಸೇಡು ತೀರಿಸಿಕೊಂಡಿತು.
15 ಓವರ್‌ಗಳಿಗೆ ಸೀಮಿತ:
ಮಳೆಯಿಂದಾಗಿ ಪಂದ್ಯವು 15 ಓವರ್‌ಗಳಿಗೆ ಸೀಮಿತಗೊಂಡಿತು. ಅಲ್ಲದೇ ಪಂದ್ಯ ಆರಂಭಕ್ಕೆ ಒಂದೂವರೆ ಗಂಟೆ ವಿಳಂಬ ಕೂಡ ಆಯ್ತು. ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ತಂಡ ಮೊದಲು ಫಿಲ್ಡಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ನಿಗದಿತ 15 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 139 ರನ್ ಕಲೆಹಾಕಿತು. ವೈಭವ ಶರ್ಮಾ 2ನೇ ಓವರ್‌ನಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್‌ನ ಎರಡು ವಿಕೆಟ್ ಕಬಳಿಸಿದರು. ಇದರಿಂದ ಗುಲ್ಬರ್ಗಾ ತಂಡಕ್ಕೆ ಆರಂಭದಲ್ಲೇ ಆಘಾತ ಉಂಟಾಯಿತು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಪ್ಪಾರೆಡ್ಡಿ(51), ಅನುಭವಿ ಮನೀಷ್ ಪಾಂಡೆ(35) ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ನೆರವಾದರು. ಈ ಮಧ್ಯೆ ವೈಭವ್ 3 ವಿಕೆಟ್ ಪಡೆದು ಮಿಂಚಿದರು.
ಬಳಿಕ ಈ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ ತಂಡ ಆರಂಭಿಕ ಬ್ಯಾಟರ್‌ಗಳಾದ ಮಯಾಂಕ್ ಅಗರವಾಲ್ (5 ಸಿಕ್ಸರ್, 8 ಬೌಂಡರಿಯೊಂದಿಗೆ 81*) ರನ್ ಹಾಗೂ ಮೊಹಮ್ಮದ್ ತಾಹ್( 4 ಸಿಕ್ಸರ್, 4 ಬೌಂಡರಿ 57*) ಅಮೋಘ ಅರ್ಧ ಶತಕದೊಂದಿಗೆ ತಂಡದ ಗೆಲುವಿಗೆ ಸಾಕ್ಷಿಯಾದರು. 73 ಎಸೆತಗಳಲ್ಲಿ 143 ರನ್‌ಗಳ ಜತೆಯಾಟದಲ್ಲಿ ಅಬ್ಬರಿಸಿದರು. ಈ ಮೂಲಕ ಇಬ್ಬರು ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ಬೌಲರ್‌ಗಳನ್ನು ಬಲವಾಗಿ ದಂಡಿಸಿದರು. ಈ ನಡುವೆ ಪಂದ್ಯ ಶ್ರೇಷ್ಠರಾಗಿ ವೈಭವ್ ಶರ್ಮಾ ಹೊರಹೊಮ್ಮಿದರು.29ಎಚ್‌ಯುಬಿ4: ಗುಲ್ಬರ್ಗಾ ಮಿಸ್ಟಿಕ್ ವಿರುದ್ಧ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಮೊಹಮ್ಮದ್ ತಾಹ್
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.