ಹುಬ್ಬಳ್ಳಿ ವಿಮಾನ ನಿಲ್ದಾಣ ಶೀಘ್ರದಲ್ಲಿಯೇ ಮೇಲ್ದರ್ಜೆಗೆ

KannadaprabhaNewsNetwork | Published : Nov 29, 2023 1:15 AM

ಸಾರಾಂಶ

ಡಿಸೆಂಬರ್‌ ಅಂತ್ಯದೊಳಗೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಮೇಲ್ದರ್ಜೆಗೇರಿಸುವ ಕಾಮಗಾರಿ ಆರಂಭಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಡಿಸೆಂಬರ್‌ ಅಂತ್ಯದೊಳಗೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಮೇಲ್ದರ್ಜೆಗೇರಿಸುವ ಕಾಮಗಾರಿ ಆರಂಭಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹುಬ್ಬಳ್ಳಿ ವಿಮಾನ ನಿಲ್ದಾಣ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಈಗಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ಸಂಚಾರ ದಟ್ಟಣೆ ಅವಶ್ಯಕತೆ ಹಾಗೂ ಸಾಮರ್ಥ್ಯದ ಪರಿಮಿತಿಯನ್ನು ವಿಸ್ತರಿಸುವ ಹಾಗೂ ಹುಬ್ಬಳ್ಳಿ ನಿಲ್ದಾಣದ ಅಗತ್ಯತೆಗಳನ್ನು 2026ರ ನಂತರದ ಸಂಚಾರ ದಟ್ಟಣೆಗೆ ಅನುಗುಣವಾಗಿ ವಿಮಾನ ನಿಲ್ದಾಣದ ಹೊಸ ವಿನ್ಯಾಸ ನಿರ್ಮಾಣ ಕಾರ್ಯ ಡಿಸೆಂಬರ್ ಅಂತ್ಯದೊಳಗೆ ಆರಂಭಿಸುವಂತೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ನಿಲ್ದಾಣದ ಈಗಿನ ಸಾಮರ್ಥ್ಯ, ಗಾತ್ರ ಹಾಗೂ ಇತರ ಸೌಲಭ್ಯಗಳ ವಿಸ್ತರಣೆಗಾಗಿ ಈಗಾಗಲೇ ಕೇಂದ್ರ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದು, ಈಗ ಒಟ್ಟು ₹340 ಕೋಟಿ ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ಕೊನೆಗೊಳ್ಳಲಿದ್ದು, ಡಿಸೆಂಬರ್ ಅಂತ್ಯದ ಒಳಗೆ ಕಾಮಗಾರಿ ಆರಂಭವಾಗುವುದು.

ನಿರ್ಮಾಣ ಕಾರ್ಯ ಮುಕ್ತಾಯಗೊಂಡಾಗ ಈ ಭಾಗದ ಐತಿಹಾಸಿಕ ಹಾಗೂ ಸಾಮಾಜಿಕ ಹಿನ್ನೆಲೆಯನ್ನು ಪ್ರತಿಫಲಿಸುವಂತೆ ಹೊರನೋಟ (ಫ್ರಂಟ್ ಎಲಿವೇಶನ್) ಹೇಗಿರಬೇಕೆಂಬ ಬಗ್ಗೆ ಸಚಿವ ಜೋಶಿ ಅಧಿಕಾರಿಗಳಿಗೆ ವಿವರಿಸಿ ಈ ಸಂಬಂಧವಾಗಿ ಸ್ಥಳೀಯವಾಗಿ ಲಭ್ಯವಿರುವ ತಜ್ಞ ಸಂಸ್ಥೆಗಳ ಸೇವೆ ಪಡೆಯಲು ಸೂಚಿಸಿದರು.

15,950 ಚ.ಮೀ. ವಿಸ್ತೀರ್ಣದಲ್ಲಿ ಹೊಸ ನಿಲ್ದಾಣದಲ್ಲಿ 4 ಏರೋ ಬ್ರಿಜ್ ಸಹಿತ ಏಕಕಾಲಕ್ಕೆ 2400 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಇತ್ಯಾದಿ ಸುಸಜ್ಜಿತ ನಿಲ್ದಾಣವಾಗಲಿದೆ. ಸಮಸ್ತ ಉತ್ತರ ಕರ್ನಾಟಕದ ಹೆಮ್ಮೆಯ ನಿಲ್ದಾಣವಾಗಿ ಹೊರಹೊಮ್ಮಲಿದೆ. ಈ ಹೊಸ ನಿಲ್ದಾಣ ಪರಿಸರ ಸ್ನೇಹಿಯಾಗಿರಲಿದೆ (Green Rating for Integrated Habitat Assessment-GRIHA 5 Star Rating) ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣ ಉತ್ತರ ಕರ್ನಾಟಕ ಭಾಗದ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರವಾಗಿದ್ದು, ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ದೇಶದ ವಿವಿಧ ನಗರಗಳಿಂದ ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವಲ್ಲಿ ವಿಮಾನ ನಿಲ್ದಾಣ ಪ್ರಮುಖ ಪಾತ್ರ ವಹಿಸುತ್ತದೆ.

ಧಾರವಾಡ ಕರ್ನಾಟಕದ ವಿದ್ಯಾಕಾಶಿಯಾಗಿದೆ. ಐಐಟಿ ಸೇರಿದಂತೆ ಹಲವಾರು ಉನ್ನತ ಶಿಕ್ಷಣದ ಕಾಲೇಜುಗಳಿವೆ. ಬೃಹತ್ ಕೈಗಾರಿಕಾ ಸಂಸ್ಥೆಗಳನ್ನು ಹೊಂದಿರುವ ಧಾರವಾಡ ಜಿಲ್ಲೆಗೆ ಭವಿಷ್ಯದಲ್ಲಿ ಭೇಟಿ ನೀಡುವ ಪ್ರಯಾಣಿಕರ ಸಂಖ್ಯೆ ಗಮನದಲ್ಲಿಟ್ಟುಕೊಂಡು ಹೊಸ ಕಟ್ಟಡ ವಿಸ್ತರಣೆ ಯೋಜನೆ ಕೈಗೊಳ್ಳಲಾಗಿದೆ ಎಂದರು.

ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣಗೊಂಡ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗುವ ನಿರೀಕ್ಷೆ ಇದೆ. ದೇಶದ ಹಲವು ನಗರಗಳಿಗೆ ಹುಬ್ಬಳ್ಳಿಯಿಂದ ವಿಮಾನ ಸೇವೆ ಆರಂಭಿಸಲು ಅನುಕೂಲವಾಗಲಿದೆ.

ಈ ವೇಳೆ ವಿಮಾನ ನಿಲ್ದಾಣದ ನಿರ್ದೇಶಕ ಮನೋಜ್ ಶೇಖರನ್, ಹು-ಧಾ ಪೊಲೀಸ್‌ ಕಮೀಷನರ್ ರೇಣುಕಾ ಸುಕುಮಾರ್‌, ತಹಸೀಲ್ದಾರ್‌ ಕಲಗೌಡ ಪಾಟೀಲ, ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯ ಕೌಸ್ತುಭ ಸಂಶೀಕರ, ಸತೀಶ್ ಮುನವಳ್ಳಿ, ಜಯರಾಮಶೆಟ್ಟಿ, ಸುನೀಲ ಸರ್ವದೆ ಹಾಗೂ ಇತರ ಅಧಿಕಾರಿಗಳು ಇದ್ದರು.

Share this article