ರಣಜಿ ಪಂದ್ಯಕ್ಕೆ ಹುಬ್ಬಳ್ಳಿ ಹುಡುಗ ರೋಹಿತ್‌ ಆಯ್ಕೆ

KannadaprabhaNewsNetwork | Published : Dec 29, 2023 1:32 AM

ಸಾರಾಂಶ

ಜ.5ರಿಂದ 8ರ ವರೆಗೆ ಹುಬ್ಬಳ್ಳಿಯ ಕೆಎಸ್‌ಸಿಐ ಮೈದಾನದಲ್ಲಿ ನಡೆಯಲಿರುವ ಪಂಜಾಬ್ ಹಾಗೂ ಗುಜರಾತ್‌ನಲ್ಲಿ ಗುಜರಾತ್ ವಿರುದ್ಧ ಜ.12ರಿಂದ 15ರ ವರೆಗೆ ನಡೆಯಲಿರುವ ಎರಡು ಪಂದ್ಯಗಳಿಗೆ ಇವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಹುಬ್ಬಳ್ಳಿ: ರಣಜಿ ಪಂದ್ಯಗಳಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ 16 ಸದಸ್ಯರ ತಂಡವನ್ನು ಬುಧವಾರ ಪ್ರಕಟಿಸಿದೆ.ಇದರಲ್ಲಿ ಹುಬ್ಬಳ್ಳಿ ಕ್ರಿಕೆಟ್‌ ಸ್ಪೋರ್ಟ್ಸ್‌ ಕ್ಲಬ್‌ನ ಎಡಗೈ ಸ್ಪೀನರ್‌ (ಲೆಫ್ಟ್‌ ಆರ್ಮ್‌ ಸ್ಪಿನರ್‌) ರೋಹಿತ್‌ಕುಮಾರ ಎ.ಸಿ.ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಜ.5ರಿಂದ 8ರ ವರೆಗೆ ಹುಬ್ಬಳ್ಳಿಯ ಕೆಎಸ್‌ಸಿಐ ಮೈದಾನದಲ್ಲಿ ನಡೆಯಲಿರುವ ಪಂಜಾಬ್ ಹಾಗೂ ಗುಜರಾತ್‌ನಲ್ಲಿ ಗುಜರಾತ್ ವಿರುದ್ಧ ಜ.12ರಿಂದ 15ರ ವರೆಗೆ ನಡೆಯಲಿರುವ ಎರಡು ಪಂದ್ಯಗಳಿಗೆ ಇವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

70 ವಿಕೆಟ್‌: ಧಾರವಾಡ ಜೆಎಸ್‌ಎಸ್‌ ಕಾಲೇಜ್‌ನಲ್ಲಿ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ರೋಹಿತ್‌ಕುಮಾರ, ಮೂಲತಃ ಹಾವೇರಿ ಜಿಲ್ಲೆ ರಾಣಿಬೆನ್ನೂರಿನವರು.ಎಸ್ಸೆಸ್ಸೆಲ್ಸಿ ಮುಗಿದ ಬಳಿಕ ಕ್ರಿಕೆಟ್‌ ತರಬೇತಿ ಪಡೆಯಲೆಂದೇ ಹುಬ್ಬಳ್ಳಿಗೆ ಬಂದು ನೆಲೆಸಿದವರು.ಕಳೆದ ಏಳು ವರ್ಷದಿಂದ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಕ್ರಿಕೆಟ್‌ ಕೋಚಿಂಗ್‌ ಪಡೆಯುತ್ತಿರುವ ಇವರು,ನಿಜಾಮುದ್ದೀನ ಲೋಂಡೆವಾಲೆ ಅವರ ಬಳಿ ತರಬೇತಿ ಪಡೆದಿದ್ದಾರೆ. ಈ ವರೆಗೆ 19, 23, 25 ವರ್ಷದೊಳಗಿನ ತಂಡದಲ್ಲಿ ಬರೋಬ್ಬರಿ 13 ಮ್ಯಾಚ್‌ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ 70 ವಿಕೆಟ್‌ ಪಡೆದ ಹಿರಿಮೆ ಇವರದು.

ರಣಜಿ ತಂಡಕ್ಕೆ ಆಯ್ಕೆಯಾಗಿರುವುದು ಖುಷಿ ತಂದಿದೆ.ಈ ವರೆಗೆ 13 ಪಂದ್ಯಗಳಲ್ಲಿ ಕರ್ನಾಟಕ ಪ್ರತಿನಿಧಿಸಿದ್ದೇನೆ. 70 ವಿಕೆಟ್‌ ಪಡೆದಿದ್ದೇನೆ. ನನ್ನ ಸಾಧನೆಯನ್ನು ಆಯ್ಕೆಗಾರರು ಪರಿಗಣಿಸಿ ಆಯ್ಕೆಮಾಡಿದ್ದಾರೆ. ನನ್ನ ಕ್ರಿಕೆಟ್‌ ಜೀವನದ ಯಶಸ್ಸಿಗೆ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ನ ಸಹಕಾರ ಕಾರಣವಾಗಿದೆ ಎಂದು ರಣಜಿ ತಂಡಕ್ಕೆ ಆಯ್ಕೆಯಾದ ಸ್ಪಿನ್ನರ್‌ರೋಹಿತಕುಮಾರ ಎ.ಸಿ., ತಿಳಿಸಿದ್ದಾರೆ.

ಹುಬ್ಬಳ್ಳಿ ಸ್ಪೋರ್ಟ್ಸ ಕ್ಲಬ್‌ನ ಆಟಗಾರರೊಬ್ಬರು ರಣಜಿ ತಂಡ ಪ್ರತಿನಿಧಿಸುತ್ತಿರುವುದು ಕ್ಲಬ್‌ಗೆ ಹೆಮ್ಮೆಯ ವಿಷಯ. ರೋಹಿತ್ ಆರಂಭದಿಂದಲೂ ಸತತ ಪರಿಶ್ರಮದ ಮೂಲಕ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಈ ರಣಜಿ ತಂಡಕ್ಕೆ ಆಯ್ಕೆಯಾಗಿರುವುದು ಸಂತಸದ ಸಂಗತಿ. ಉತ್ತಮ ಪ್ರದರ್ಶನ ತೋರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವೀರಣ್ಣ ಸವಡಿ ಹೇಳಿದ್ದಾರೆ.

Share this article