ಅಜೀಜಅಹ್ಮದ ಬಳಗಾನೂರ
ನಗರದ ಜನನಿಬಿಡ ಪ್ರದೇಶಗಳಲ್ಲಿನ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ಹಾಡುವ ಉದ್ದೇಶದಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ₹4.59 ಕೋಟಿ ವೆಚ್ಚದಲ್ಲಿ ಇಲ್ಲಿನ ಇಂದಿರಾ ಗಾಜಿನ ಮನೆ ಆವರಣದಲ್ಲಿ ಫಜಲ್ ಪಾರ್ಕಿಂಗ್ ನಿರ್ಮಿಸಲಾಗಿದೆ. ಆದರೆ, ಮಾಹಿತಿಯ ಕೊರತೆಯಿಂದ ಸಮರ್ಪಕವಾಗಿ ಬಳಕೆಯಾಗದೇ ಬಿಕೋ ಎನ್ನುತ್ತಿದೆ.ನಗರದ ಚೆನ್ನಮ್ಮ ವೃತ್ತ ಹಾಗೂ ಹಳೆ ಬಸ್ ನಿಲ್ದಾಣದ ಕೂಗಳತೆಯ ದೂರದಲ್ಲಿರುವ ಇಂದಿರಾ ಗಾಜಿನ ಮನೆಗೆ ಹಾಗೂ ಮಹಾತ್ಮ ಗಾಂಧಿ ಉದ್ಯಾನದ ವೀಕ್ಷಣೆಗೆ ಆಗಮಿಸುವವರ ಕಾರು ನಿಲುಗಡೆಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಇಲ್ಲಿ ಫಜಲ್ ಪಾರ್ಕಿಂಗ್ ನಿರ್ಮಾಣ ಮಾಡಿದೆ.
ಮಾಹಿತಿಯೇ ಇಲ್ಲ:ಇಲ್ಲಿ ವಾಹನಗಳ ನಿಲುಗಡೆಗಾಗಿ ಫಜಲ್ ಪಾರ್ಕಿಂಗ್ ವ್ಯವಸ್ಥೆ ಇದೆ ಎನ್ನುವ ಮಾಹಿತಿ ಸಾರ್ವಜನಿಕರಿಗೆ ದೊರೆಯದಂತಹ ಸ್ಥಿತಿ ನಿರ್ಮಾಣವಾಗಿದೆ. ಪಾರ್ಕಿಂಗ್ ವ್ಯವಸ್ಥೆಯ ಕುರಿತು ಯಾವುದೇ ನಾಮಫಲಕ, ಜನರಿಗೆ ತಿಳಿಸುವ ಸೈನ್ ಬೋರ್ಡ್‌ಗಳನ್ನು ಎಲ್ಲಿಯೂ ಹಾಕಿಲ್ಲ. ಉದ್ಯಾನದ ಪಕ್ಕದಲ್ಲಿರುವ ಜಾಗದಲ್ಲಿ ಅದರಲ್ಲೂ ಒಳಗಡೆ ಇರುವುದರಿಂದ ಜನರಿಗೆ ಗೊತ್ತೆ ಆಗುತ್ತಿಲ್ಲ. ಹಾಗಾಗಿ ಇದರ ಬಳಕೆಯೇ ಸರಿಯಾಗಿ ಆಗುತ್ತಿಲ್ಲ.
ಇದರ ನಿರ್ವಹಣೆಗಾಗಿ ಕಳೆದ 2023ರ ಮಾರ್ಚ್ ತಿಂಗಳಲ್ಲಿ ಒಂದು ವರ್ಷದ ಕಾಲ ಖಾಸಗಿ ಸಂಸ್ಥೆಯಾದ ಆದರ್ಶ ಎಂಟರ್ ಪ್ರೈಸ್‌ರ್ಸ್‌ಗೆ ಗುತ್ತಿಗೆ ನೀಡಲಾಗಿದೆ. ಈಗಾಗಲೇ ಟೆಂಡರ್ ಅವಧಿ ಪೂರ್ಣಗೊಂಡಿದ್ದು, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇವರ ಗುತ್ತಿಗೆ ಅವಧಿ ಮುಂದೂಡಲಾಗಿತ್ತು. ಇಲ್ಲಿ ಒಟ್ಟು 6 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪಾರ್ಕಿಂಗ್‌ನಲ್ಲಿ ಒಟ್ಟು 37 ಕಾರ್ ನಿಲ್ಲಿಸುವ ವ್ಯವಸ್ಥೆಯಿದೆ. ಒಂದು ಕಾರಿಗೆ(12 ಗಂಟೆ) ಕೇವಲ ₹ 30 ನಿಗದಿಗೊಳಿಸಲಾಗಿದೆ. ನಿರ್ವಹಣೆ ಏನೋ ಸರಿಯಾಗಿಯೇ ಇದೆ. ಆದರೆ, ಮಾಹಿತಿಯ ಕೊರತೆಯಿಂದಾಗಿ ಇಲ್ಲಿಗೆ ವಾಹನಗಳು ಬರುತ್ತಿಲ್ಲ.
ಪಾರ್ಕಿಂಗ್ ಲಾಟ್ ಬಳಿ ವಾಹನ ನಿಲ್ಲಿಸದಂತೆ ಕ್ರಮ ಸಹ ಕೈಗೊಳ್ಳಲಾಗುತ್ತಿದೆ. ಈ ಮಧ್ಯೆಯೂ ಕೆಲವರು ಚಿತ್ರಮಂದಿರ ಬಳಿ ಇರುವ ಖುಲ್ಲಾ ಜಾಗದಲ್ಲಿ ಪಾರ್ಕಿಂಗ್ ಮಾಡುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಉದ್ಯಾನಕ್ಕೆ ಹೆಚ್ಚು ಜನ ಬರುತ್ತಾರೆ. ಅಲ್ಲದೇ ನಗರದ ತೋಳನಕೆರೆ ಅಭಿವೃದ್ಧಿ ಮಾಡಿದ ದಿನದಿಂದ ಇಲ್ಲಿಗೆ ಬರುವ ಜನರ ಸಂಖ್ಯೆ ತುಂಬಾ ಕ್ಷೀಣಿಸಿದೆ.
ಫಜಲ್ ಪಾರ್ಕಿಂಗ್ ವ್ಯವಸ್ಥೆಯ ಕುರಿತು ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೆ ಪಡೆದುಕೊಂಡಿರುವ ಆದರ್ಶ ಎಂಟರ ಪ್ರೈಜರ್ಸ್‌ನ ವ್ಯವಸ್ಥಾಪಕರಿಗೆ ಹತ್ತಾರು ಬಾರಿ ಕರೆ ಮಾಡಿದರೂ ಸಹ ಸೌಜನ್ಯಕ್ಕೂ ಮಾತನಾಡುವ ವ್ಯವಧಾನ ತೋರುತ್ತಿಲ್ಲ. ಇನ್ನು ಯಾರಾದರೂ ಇಲ್ಲಿನ ಸಮಸ್ಯೆ ಕುರಿತು ಕರೆ ಮಾಡಿದರೆ ಹೇಗೆ ಸ್ಪಂದಿಸುತ್ತಾರೆ ಎಂಬ ಪ್ರಶ್ನೆ ಮೂಡಿದೆ.
ಜನನಿಬಿಡ ಪ್ರದೇಶಕ್ಕೆ ಸ್ಥಳಾಂತರಿಸಿ