ಹುಬ್ಬಳ್ಳಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಉದ್ಘಾಟನೆಯ ಸಮಯದಲ್ಲಿ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹುಬ್ಬಳ್ಳಿಯ ವಿದ್ವಾನ್ ಸುಜಯ ಶಾನಭಾಗ್ ಅವರಿಗೆ ಭರತನಾಟ್ಯ ಪ್ರದರ್ಶನಕ್ಕೆ ಆಹ್ವಾನ ನೀಡಲಾಗಿದೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಕಲಾ ಸುಜಯನ ಮುಖ್ಯಸ್ಥ ವಿದ್ವಾನ್ ಸುಜಯ ಶಾನಬಾಗ್, ನನ್ನ ಗುರುಗಳಾದ ಮೈಸೂರಿನ ವಸುಂಧರಾ ದೊರೆಸ್ವಾಮಿ ಅವರ ನೇತೃತ್ವದಲ್ಲಿ "ಶ್ರೀರಾಮಂ ಭಜೆ " ಎಂಬ ನೃತ್ಯ ಸಮರ್ಪಣೆಯಾಗಲಿದೆ. ಹಿರಿಯ ಶಿಷ್ಯನಾಗಿ ಅವರ ಜೊತೆ ನಾನು ವೇದಿಕೆ ಹಂಚಿಕೊಳ್ಳುತ್ತಿದ್ದೇನೆ. ಜ. 25ರಂದು ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಂಗಸಜ್ಜಿಕೆಯಲ್ಲಿ ಭರತನಾಟ್ಯ ಪ್ರದರ್ಶನ ನೀಡಲಾಗುವುದು ಎಂದರು.22ರಂದು ಮನಃವಾಸಿ ರಾಮ ಕಾರ್ಯಕ್ರಮ: ಅಯೋಧ್ಯೆಯ ರಾಮನ ಪ್ರಾಣಪ್ರತಿಷ್ಠಾಪನೆಯ ಸುಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಸಂಭ್ರಮಾಚರಣೆ ನಡೆಸುವ ಉದ್ದೇಶದಿಂದ ಹು-ಧಾ ಬಂಟರ ಸಂಘದ ಸಂಯಕ್ತ ಆಶ್ರಯದಲ್ಲಿ ಜ. 22ರಂದು ಸಂಜೆ 6 ಗಂಟೆಗೆ ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ "ಮನಃವಾಸಿ ರಾಮ " ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಕಲಾ ಸುಜಯ ಮುಖ್ಯಸ್ಥ ಸುಜಯ ಶಾನಭಾಗ ಹೇಳಿದರು.
ಕಲಾ ಸುಜಯ ಒಂದು ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಭಾರತೀಯ ಸಂಸ್ಕೃತಿ, ಶಾಸ್ತ್ರೀಯ ಕಲೆಗಳ ಉಳಿವು ಬೆಳವಿಗೆ ಅವಿರತವಾಗಿ ಶ್ರಮಿಸುತ್ತಿದೆ. ಕಳೆದ 9 ವರ್ಷಗಳಿಂದ ನಮ್ಮ ಸಂಸ್ಕೃತಿಯ ಹಿರಿಮೆ ಸಾರುವ ಅನೇಕ ನೃತ್ಯ ಸಂಯೋಜನೆಗಳನ್ನು ಪ್ರಸ್ತುತಪಡಿಸುತ್ತ ಬಂದಿದೆ ಎಂದರು.ಇದೀಗ ಕರಾವಳಿಯ ಪ್ರಖ್ಯಾತ ಯಕ್ಷಗಾನ ಕಲಾವಿದ ಶ್ರೀಧರ್ ಚಪ್ಪರಮನೆ ಮತ್ತು ಬೇಗಾರ್ ಶಿವಕುಮಾರ್ ಅವರ "ಮಾಯಾ ಮಂಥರೆ " ಎಂಬ ಹಾಸ್ಯ ಮತ್ತು ಖೇದಭರಿತ ಕಥಾಪ್ರಸಂಗವಿರುತ್ತದೆ. ವಿದ್ಯಾನ್ ಸುಜಯ ಶಾನಭಾಗ ಅವರಿಂದ "ಶಬರಿ "ಯ ರಾಮ ನಿರೀಕ್ಷಣೆಯ ಸಮಯೋಚಿತ ನೃತ್ಯ ಪ್ರಸ್ತುತಿ ಹಮ್ಮಿಕೊಳ್ಳಲಾಗಿದೆ. ಕಲಾ ಸುಜಯ ಸಂಸ್ಥೆಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿಂತನ ರಾಮಾಯಣವೆಂಬ, ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಆಧಾರಿತ, ಮನೋಜ್ಞ ನೃತ್ಯ ಸಂಯೋಜನೆಯನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದರು.
ಸಂಜೆ 6ಕ್ಕೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಕ್ಷಮತಾ ಟ್ರಸ್ಟ್‌ನ ಗೋವಿಂದ ಜೋಶಿ, ಗುಜ್ಜಾಡಿ ಸ್ವರ್ಣ ಜ್ಯೂಯಲರ್ಸ್‌ನ ಗೋಪಾಲಕೃಷ್ಣ ನಾಯಕ, ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ವೈದ್ಯರಾದ ಡಾ. ವೆಂಕಟೇಶ ಮೊಗೇರ, ಗೌತಮ ಬಾಫ್ನಾ, ನಂದಕುಮಾರ ಸೇರಿದಂತೆ ಹಲವರು ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ 12 ಕರಸೇವಕರನ್ನು ಸನ್ಮಾನಿಸಲಾಗುತ್ತದೆ ಎಂದರು.ಈ ವೇಳೆ ಕಾರ್ಯದರ್ಶಿ ಸತೀಶ ಶೆಟ್ಟಿ, ಟ್ರಸ್ಟಿ ಜೆ.ಎಲ್. ಶಾನಭಾಗ ಸೇರಿದಂತೆ ಹಲವರಿದ್ದರು.