ಕನ್ನಡಪ್ರಭ ವಾರ್ತೆ, ತುಮಕೂರು
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಮಯೂರ ಜಯಕುಮಾರ್ ಅವರ ಸಮ್ಮುಖದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಂಬಂಧ ಪಕ್ಷದ ಮುಖಂಡರು, ಕಾರ್ಯಕರ್ತರು, ಮಂಚೂಣಿ ಘಟಕಗಳ ಅಧ್ಯಕ್ಷರ ಅಭಿಪ್ರಾಯ ಆಲಿಸುವ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರ ಸಲಹೆಗಳನ್ನು ಪಡೆಯುವ ನಿಟ್ಟಿನಲ್ಲಿ ಸಭೆ ಕರೆದಿದ್ದು, ಸಭೆಯಲ್ಲಿ ಭಾಗವಹಿಸಿರುವ ಸಚಿವರು, ಶಾಸಕರು, ಮಾಜಿ ಶಾಸಕರು, ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿವಿಧ ಮಂಚೂಣಿ ಘಟಕಗಳ ಅಧ್ಯಕ್ಷರು ಮಂಡಿಸುವ ಸಲಹೆಗಳನ್ನು ಕ್ರೂಢಿಕರಿಸಿ, ಜಿಲ್ಲೆಯ ಇಬ್ಬರು ಸಚಿವರಾದ ಡಾ.ಜಿ. ಪರಮೇಶ್ವರ್ ಮತ್ತು ಕೆ.ಎನ್. ರಾಜಣ್ಣ ಅವರ ಅಭಿಪ್ರಾಯಗಳನ್ನು ಆಲಿಸಿ, ಪಕ್ಷದ ಹೈಕಮಾಂಡ್ ಓರ್ವ ಸೂಕ್ತ, ಗೆಲ್ಲವು ಎಲ್ಲಾ ಆರ್ಹತೆ ಇರುವ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದರು.
ಪಕ್ಷದ ಆಯ್ಕೆ ಮಾಡಿದ ಅಭ್ಯರ್ಥಿಯ ಪರ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡುವ ಮೂಲಕ ಅವರ ಗೆಲುವಿಗೆ ಶ್ರಮಿಸಬೇಕಿದೆ. ನಮಗೆ ಅಭ್ಯರ್ಥಿ ಯಾರು ಎಂಬುದು ಮುಖ್ಯವಲ್ಲ, ಪಕ್ಷ ಮುಖ್ಯ. ಹಾಗಾಗಿ ಎಲ್ಲರೂ ಸಹ ಪಕ್ಷದ ನಿಲುವಿಗೆ ಬದ್ದವಾಗಿ ಕೆಲಸ ಮಾಡಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಶ್ರಮಿಸೋಣ ಎಂದರು.ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಯಾವುದೇ ಪಕ್ಷ ಸದೃಢವಾಗಬೇಕಿದ್ದರೆ, ಆ ಪಕ್ಷದ ಕಾರ್ಯಕರ್ತರು ಸದೃಢರಾಗಿದ್ದಾಗ ಮಾತ್ರ ಸಾಧ್ಯ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದು ಸಾಭೀತಾಗಿದೆ. ಗೆಲ್ಲುವ ಅಭ್ಯರ್ಥಿಗೆ ಟಿಕೇಟ್ ನೀಡಬೇಕೆಂಬ ಆಶಯ ನಮ್ಮದು. ನಾವೇನು ಅಭಿಪ್ರಾಯ ಮಂಡಿಸಿದರೂ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುವವರು ಮುಖ್ಯಮಂತ್ರಿಗಳು ಮತ್ತು ಎಐಸಿಸಿ ಮುಖಂಡರು. 28 ಸೀಟುಗಳಲ್ಲಿ ಕನಿಷ್ಠ 20 ಸೀಟುಗಳನ್ನಾದರೂ ಈ ಬಾರಿಯ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕಿದೆ. ಇಲ್ಲದಿದ್ದರೆ ಸರಕಾರ ನಡೆಸುವ ನೈತಿಕತೆ ನಮಗೆ ಇರುವುದಿಲ್ಲ ಎಂದರು.
ಪಕ್ಷ ಮಾಡಿರುವ ಜನಪರ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು ಅವರು ಕಾಂಗ್ರೆಸ್‌ಗೆ ಮತ ಹಾಕುವಂತೆ ಮಾಡುವ ಗುರುತರ ಜವಾಬ್ದಾರಿ ಕಾರ್ಯಕರ್ತರು ಮತ್ತು ಮುಖಂಡರ ಮೇಲಿದೆ ಎಂದರು.ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಶ್ರಮಿಸಿದ ಕಾರ್ಯಕರ್ತರನ್ನು ವಿವಿಧ ನಿಗಮ, ಮಂಡಳಿ, ಜಿಲ್ಲಾ ಮಟ್ಟದ ಸಮಿತಿಗಳಿಗೆ ನೇಮಕ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಫೆ 10 ರಿಂದ ರಾಜ್ಯದಲ್ಲಿ ಆರಂಭವಾಗುವ ಬಜೆಟ್ ಅಧಿವೇಶನದ ವೇಳೆಗೆ ಎಲ್ಲಾ ಜಿಲ್ಲೆಗಳಿಂದ ಪಟ್ಟಿ ಪಡೆದು, ಫೆ. 16 ರಂದು ಬಜೆಟ್ ಮಂಡಿಸಿ, ಫೆ.24 ರೊಳಗೆ ಎಲ್ಲಾ ನಿಗಮ, ಮಂಡಳಿ, ಜಿಲ್ಲಾ ಮಟ್ಟದ ಸಮಿತಿಗಳ ನೇಮಕ ಪೂರ್ಣಗೊಳ್ಳಲಿದ್ದು, ಮಾರ್ಚ್ 1ರಿಂದ ಲೋಕಸಭಾ ಚುನಾವಣೆಗೆ ತಯಾರಿ ಆರಂಭವಾಗಲಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಟಿಕೇಟ್ ಕೇಳುವ ಅಧಿಕಾರವಿದೆ. ಕಾಂಗ್ರೆಸ್ ಪಕ್ಷದ ಜೀವಾಳವೇ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು. ಟಿಕೇಟ್ ನೀಡಲು ಗೆಲುವೇ ಮಾನದಂಡ. ವಯುಕ್ತಿಕ ವರ್ಚ್ಚಸ್ಸಿನ ಜೊತೆಗೆ, ಪಕ್ಷದ ಬಲವೂ ಬೇಕು. ಇದು ಪಕ್ಷದ ಅಳಿವು, ಉಳಿವಿನ ಪ್ರಶ್ನೆ ಎಂದು ಕೆ.ಎನ್.ರಾಜಣ್ಣ ನುಡಿದರು.
ಎಐಸಿಸಿ ಕಾರ್ಯದರ್ಶಿ ಕಾರ್ಯಕರ್ತರು, ಮುಖಂಡರ ಅಭಿಪ್ರಾಯಗಳನ್ನು ಮಯೂರು ಜಯಕುಮಾರ್ ಆಲಿಸಿದ ಅವರು, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಶೇ.೪೦ರ ಕಮಿಷನ್‌ನ ಬಿಜೆಪಿ ಸರಕಾರವನ್ನು ಕಿತ್ತೊಗೆಯುವಲ್ಲಿ ನಮ್ಮೆಲ್ಲಾ ಕಾರ್ಯಕರ್ತರ ಶ್ರಮವಿದೆ. ಹಾಗಾಗಿ ಅವರಿಗೆ ಅಧಿಕಾರ ನೀಡಿದರೆ ಮಾತ್ರ ಮುಂದಿನ ಚುನಾವಣೆ ಸುಸೂತ್ರ. ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಜಿಲ್ಲಾ, ತಾಲೂಕು ಮಟ್ಟದ ಆಶ್ರಯ,ಆರಾಧನಾ, ಆಸ್ಪತ್ರೆ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಸಮಿತಿಗಳ ಸದಸ್ಯರನ್ನು ನೇಮಕ ಮಾಡಲು ಮುಂದಿನ 10 ದಿನಗಳ ಒಳಗೆ ಪಟ್ಟಿ ಕಳುಹಿಸಬೇಕು. ಒಂದು ವೇಳೆ ತಪ್ಪಿದ್ದಲ್ಲಿ, ಮುಖಂಡರ ಅಭಿಪ್ರಾಯ ಆಲಿಸಿ, ಪಕ್ಷದ ಹೈಕಮಾಂಡ್ ನೇಮಕ ಅದೇಶ ಹೊರಡಿಸಲಿದೆ. ಎಐಸಿಸಿ ಡಿಸಿಸಿಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲ್ಲ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಗೌರವ ಸಿಗಬೇಕೆಂದರೆ ಅವರಿಗೂ ಅಧಿಕಾರಗಳು ಸಿಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರ ಪಟ್ಟಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.ಕಾಂಗ್ರೆಸ್ ಪಕ್ಷ ಆ ತಪ್ಪು ಮಾಡಲ್ಲ. ಕಾರ್ಯಕರ್ತರ ಕೈಗೆ ಅಧಿಕಾರ ನೀಡಲಿದೆ. ಅಲ್ಲದೆ ಒಮ್ಮತದ ಅಭ್ಯರ್ಥಿಯನ್ನು ನೀಡಿ ಪಕ್ಷದ ಅಭ್ಯರ್ಥಿ ಗೆಲ್ಲುವಂತಹ ವಾತಾವರಣ ನಿರ್ಮಾಣ ಮಾಡಲಿದೆ ಎಂದು ಮಯೂರು ಜಯಕುಮಾರ್ ಭರವಸೆ ನೀಡಿದರು.
ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ, ಪಾವಗಡ ಕ್ಷೇತ್ರದ ಶಾಸಕ ವಿ. ವೆಂಟಕೇಶ್ ಮಾತನಾಡಿದರು.ವೇದಿಕೆಯಲ್ಲಿ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ. ಜಯಚಂದ್ರ, ಮಾಜಿ ಶಾಸಕರಾದ ಎಸ್. ಷಪಿ ಅಹಮದ್, ಡಾ. ರಫೀಕ್ ಅಹಮದ್, ಗಂಗಹನುಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಮಾಜಿ ಅಧ್ಯಕ್ಷ ಆರ್. ರಾಮಕೃಷ್ಣ, ನರಸಿಂಹಯ್ಯ, ಇಕ್ಬಾಲ್ ಅಹಮದ್, ಮುರಳೀಧರ ಹಾಲಪ್ಪ, ನಿಖೇತರಾಜ್ ಮೌರ್ಯ, ಷಣ್ಮುಖಪ್ಪ, ರಾಯಸಂದ್ರ ರವಿಕುಮಾರ್, ಗೀತಾರಾಜಣ್ಣ, ಸುಜಾತಾ, ನಾಗಮಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
BOXಒಳಮೀಸಲಾತಿ ಬೇಡಿಕೆ
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಬಹುದಿನದ ಬೇಡಿಕೆ. ಬಿಜೆಪಿ ಪಕ್ಷ ಕೈಚಲ್ಲಿತ್ತು. ಸ್ವತಃ ಕೇಂದ್ರದ ಸಚಿವ ಎ. ನಾರಾಯಣಸ್ವಾಮಿ ಅವರೇ ಒಳಮೀಸಲಾತಿ ಸಾಧ್ಯವಿಲ್ಲ ಎಂಬ ಉತ್ತರವನ್ನು ಸಂಸತ್ತಿನಲ್ಲಿ ನೀಡಿದ್ದರು. ಆದರೆ ನಮ್ಮ ಪಕ್ಷ ಸಚಿವ ಸಂಪುಟದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಿ ಸಂವಿಧಾನದ ಕಲಂ 343(ಎ) ತಿದ್ದುಪಡಿ ತರುವ ಸಂಬಂಧ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದರು.