ವಿಜೃಂಭಣೆಯ ಹುದೂರು ಬೋಡ್ ನಮ್ಮೆ ಸಂಪನ್ನ

KannadaprabhaNewsNetwork |  
Published : May 25, 2024, 12:47 AM IST
ಚಚಿತ್ರ :  24ಎಂಡಿಕೆ6 : ಹುದೂರಿನಲ್ಲಿ  ಬೋಡ್ ನಮ್ಮೆ ನಡೆಯಿತು.  | Kannada Prabha

ಸಾರಾಂಶ

ಪ್ರತಿವರ್ಷ ಹಳ್ಳಿಗಟ್ಟು ಬೋಡ್ ನಮ್ಮೆ ಕಳೆದನಂತರ ನಡೆಯುವ ಹುದೂರು ಬೋಡ್ ನಮ್ಮೆಯಲ್ಲಿ ಪರಸ್ಪರ ಎರಡು ಊರಿನವರು ಭಾಗವಹಿಸುವುದು ವಿಶೇಷ. ಎರಡು ಊರಿನ ಜನ ಪರಸ್ಪರ ಹಬ್ಬಹರಿದಿನಗಳಲ್ಲಿ ಒಂದಾಗಬೇಕು ಎಂಬ ಅಲಿಖಿತ ನಿಯಮವಿದೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಇಲ್ಲಿಗೆ ಸಮೀಪದ ಹುದೂರು ಶ್ರೀ ಭಗವತಿ ಹಾಗೂ ಶ್ರೀ ಭದ್ರಕಾಳಿ ದೇವರ ವಾರ್ಷಿಕ ಬೋಡ್ ನಮ್ಮೆ ಬುಧವಾರ ಹಾಗೂ ಗುರುವಾರ ವಿಜೃಂಭಣೆಯಿಂದ ನಡೆಯಿತು.

ಪ್ರತಿವರ್ಷ ಹಳ್ಳಿಗಟ್ಟು ಬೋಡ್ ನಮ್ಮೆ ಕಳೆದನಂತರ ನಡೆಯುವ ಹುದೂರು ಬೋಡ್ ನಮ್ಮೆಯಲ್ಲಿ ಪರಸ್ಪರ ಎರಡು ಊರಿನವರು ಭಾಗವಹಿಸುವುದು ವಿಶೇಷ. ಆಸುಪಾಸಿನಲ್ಲಿಯೇ ಇರುವ ಈ ಎರಡು ಊರಿನ ಜನರು ಮಾತ್ರವಲ್ಲ, ದೇವರಿಗೂ ಅವಿನಾಭಾವ ಸಂಬಂಧವಿದೆ. ಎರಡು ಊರಿನ ಜನ ಪರಸ್ಪರ ಹಬ್ಬಹರಿದಿನಗಳಲ್ಲಿ ಒಂದಾಗಬೇಕು ಎಂಬ ಅಲಿಖಿತ ನಿಯಮವಿದೆ. ಇದನ್ನು ಮೀರಿ ಒಂದಷ್ಟು ವರ್ಷಗಳಿಂದ ಹಬ್ಬಗಳು ಒಂದೇ ದಿನ ನಡೆಯುತ್ತಿದ್ದವು. ಇದೀಗ ಇಲ್ಲಿನ ವ್ಯಕ್ತಿಗಳ ಮೈಮೇಲೆ ದರ್ಶನ ನೀಡುವ ದೇವರು ಹಿಂದಿನ ಆಚರಣೆಗಳ ಬಗ್ಗೆ ತಿಳಿಸಿ ಎರಡು ಊರಿನ ಮಂದಿ ಪರಸ್ಪರ ಬೆರೆಯುವಂತೆ ಮಾಡಿದ್ದು ವಿಶೇಷ. ಇದರಿಂದ ಈ ಹಿಂದಿನ ಕಾಲದಂತೆ ಈ ವರ್ಷ ಹಳ್ಳಿಗಟ್ಟು ಹಾಗೂ ಹುದೂರು ಮಂದಿ ಪರಸ್ಪರ ಎರಡು ಬೋಡ್ ನಮ್ಮೆಗಳಲ್ಲಿ ಭಾಂದವ್ಯ ಹಂಚಿಕೊಂಡರು. ಕಳೆದ 18 ಹಾಗೂ 19ರಂದು ಹಳ್ಳಿಗಟ್ಟು ಬೋಡ್ ನಮ್ಮೆ ನಡೆದರೆ, ಹುದೂರು ಬೋಡ್ ನಮ್ಮೆ ಬುಧವಾರ ಹಾಗೂ ಗುರುವಾರ ಎರಡು ದಿನಗಳ ವಿಜೃಂಭಣೆಯಿಂದ ನಡೆಯಿತು.

ಮೊದಲ ದಿನ ಶ್ರೀ ಭದ್ರಕಾಳಿ ದೇವರ ಹಬ್ಬವಾದರೆ, ಎರಡನೇ ದಿನ ಭಗವತಿ ದೇವರಿಗೆ ಕುದುರೆ ಹಾಗೂ ಮೊಗ ಒಪ್ಪಿಸಲಾಯಿತು. ಬುಧವಾರ ಮಧ್ಯಾಹ್ನ ಅಡ್ಡಂಡ ಬಲ್ಯಮನೆ ಸಮೀಪದ ಅಂಬಲದಿಂದ ಹೊರಟು ಹತ್ತಿರದ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ದೇವರಿಗೆ ಹರಕೆ, ಕಾಣಿಕೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಿದರೆ. ಗುರುವಾರ ಮಧ್ಯಾಹ್ನ ಅಡ್ಡಂಡ ಬಲ್ಯಮನೆ ಸಮೀಪದ ಅಂಬಲದಿಂದ ಕುದುರೆ ಹಾಗೂ ಮೊಗ ಹೊರಟು ಸಿಐಟಿ ಕಾಲೇಜು ಸಮೀಪವಿರುವ ಶ್ರೀ ಭಗವತಿ ದೇವಸ್ಥಾನದಲ್ಲಿ ಹರಕೆ ಕಾಣಿಕೆಗಳನ್ನು ಸಲ್ಲಿಸಲಾಯಿತು. ನಾಡ್ ತಕ್ಕರಾದ ಪ್ರಕಾಶ್ ಕುಶಾಲಪ್ಪ ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಡ್ಡಂಡ ಡಾಲಿ ಜನಾರ್ದನ ಮುಂದಾಳತ್ವದಲ್ಲಿ ಹಬ್ಬ ನಡೆಯಿತು. ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು, ಊರು ತಕ್ಕರು ಸೇರಿದಂತೆ ವಿವಿಧ ಕುಟುಂಬಗಳ ಜನರು ಭಾಗಿಯಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!