ಮತ ಎಣಿಕೆ ಕೇಂದ್ರದ ಆವಾರದಲ್ಲಿ ಭಾರಿ ಜನಸ್ತೋಮ

KannadaprabhaNewsNetwork | Published : Jun 5, 2024 12:30 AM

ಸಾರಾಂಶ

ಮತ ಎಣಿಕೆಯ ಕುಮಟಾದ ಎ.ಬಿ. ಬಾಳಿಗಾ ಕೇಂದ್ರವು ಪೊಲೀಸ್ ಸರ್ಪಗಾವನಲ್ಲಿತ್ತು. ಪಾಸ್ ಇದ್ದವರಿಗೆ ಮಾತ್ರ ಮತ ಎಣಿಕೆ ಕೇಂದ್ರದೊಳಗೆ ಹೋಗಲು ಅವಕಾಶ ಕಲ್ಪಿಸಲಾಗಿತ್ತು.

ರಾಘು ಕಾಕರಮಠ

ಅಂಕೋಲಾ: ಕುಮಟಾದ ಎ.ವಿ. ಬಾಳಿಗಾ ಕಾಲೇಜಿನ ಹೊರ ಆವಾರದಲ್ಲಿ ಉಕ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯವನ್ನು ನೋಡಲು ನೆರೆದಿದ್ದ ಜನತೆಗೆ ವರುಣ ತಂಪೆರೆದು, ಆಯಾಸವನ್ನು ದೂರ ಮಾಡಿತು.

ಅಷ್ಟೇನು ಬಿಸಿಲಿನ ಝಳವಿಲ್ಲದೆ, ಜೀವ ಹಿಂಡುವ ಸೆಕೆಯಿಂದ ದೂರವಾಗಿದ್ದ ಜನತೆಗೆ ಬಿದ್ದ ಮಳೆಯು ಆಯಾಸವನ್ನು ದೂರ ಮಾಡಿತ್ತು. ನೆರೆದ ನಾಗರಿಕರು ತಮ್ಮ ಕುತೂಹಲದ ಕಣ್ಣುಗಳನ್ನು ಎ.ವಿ. ಬಾಳಿಗಾ ಕಾಲೇಜಿನತ್ತ ನೆಟ್ಟಿದ್ದರು.

ನಾಗರಿಕರಿಗೆ ಅನುಕೂಲವಾಗುವಂತೆ ಧ್ವನಿವರ್ಧಕ ಹಾಗೂ ಎಲ್‌ಇಡಿ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿತ್ತು. ಮತ ಎಣಿಕೆಯ ಕುಮಟಾದ ಎ.ಬಿ. ಬಾಳಿಗಾ ಕೇಂದ್ರವು ಪೊಲೀಸ್ ಸರ್ಪಗಾವನಲ್ಲಿತ್ತು. ಪಾಸ್ ಇದ್ದವರಿಗೆ ಮಾತ್ರ ಮತ ಎಣಿಕೆ ಕೇಂದ್ರದೊಳಗೆ ಹೋಗಲು ಅವಕಾಶ ಕಲ್ಪಿಸಲಾಗಿತ್ತು.

ಮರ ಏರಿದರು: ಎ.ವಿ. ಬಾಳಿಗಾ ಕಾಲೇಜಿನಲ್ಲಿ ಕುತೂಹಲದಿಂದ ಒಳಗೇನು ನಡೆಯುತ್ತಿದೆ, ಯಾವ ಪಕ್ಷ ಮುನ್ನಡೆದಿದೆ, ಯಾರು ಗೆದ್ದರು, ಯಾರು ಸೋತರು ಎಂಬ ಕುತೂಹಲ ವರ್ತಮಾನ ಅರಿಯಲು ಕೆಲವರು ಮರ ಏರಿ ಬಾಳಿಗಾ ಕಾಲೇಜಿನತ್ತ ಮುಖ ಹಾಕಿದರು.

ಬಿಜೆಪಿಯ ಕಾರ್ಯಕರ್ತರು ಗೆಲುವಿನಿಂದ ಹರ್ಷೋದ್ಗಾರ ಕೂಗಿದರು. ಪಟಾಕಿ ಸಿಡಿಸಲು ಪ್ರಯತ್ನಿಸಿದರೂ ಪೊಲೀಸರು ಅವಕಾಶ ನೀಡದೇ ಇದ್ದುದರಿಂದ ಜನರು ನಿರಾಶೆಗೊಳ್ಳುವಂತಾಯಿತು.

ಹೂವಿನ ಹಾರಕ್ಕೂ ನಿಷೇಧ: ಮತ ಎಣಿಕೆ ಕೇಂದ್ರದ ಎದುರು, ಹೂವಿನ ಹಾರದ ಮಾರಾಟಕ್ಕೂ ನಿಷೇಧ ಹೇರಲಾಗಿತ್ತು. ಹೀಗಾಗಿ ಗೆದ್ದ ಅಭ್ಯರ್ಥಿಗಳಿಗೆ ಶುಭಾಶಯ ಸಲ್ಲಿಸಲು, ಅವರ ಅಭಿಮಾನಿಗಳು ಉಮೇದು ತೋರಿದರೂ ಹಾರ- ಹೂವು ಸಿಗದೇ ಕೇವಲ ಜೈಕಾರ ಘೋಷಣೆ ಹಾಕಿ ಸಂಭ್ರಮ ಪಡಬೇಕಾಯಿತು. ಹೆದ್ದಾರಿ ಸಂಚಾರ ಅಸ್ತವ್ಯಸ್ತ

ಮತ ಎಣಿಕೆ ಕಾರ್ಯ ಮುಗಿಯುತ್ತಿದ್ದಂತೆ ಒಮ್ಮಿಂದೊಮ್ಮೆಲೆ ಜನರು ತಮ್ಮ ವಾಹನಗಳನ್ನು ರಸ್ತೆಗೆ ತಂದಿದ್ದರಿಂದ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗುವಂತಾಯಿತು. ಸುಮಾರು 1 ಗಂಟೆಗಳ ಕಾಲ ಹೆದ್ದಾರಿ ಸಂಚಾರದಲ್ಲಿ ತೊಡಕು ಉಂಟಾಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.ಪಕ್ಷೇತರ ಅಭ್ಯರ್ಥಿಯ ಉಮೇದು

ಉಕ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆ ಬಯಸಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದರು. 2 ರಾಷ್ಟ್ರೀಯ ಹಾಗೂ 3 ಪ್ರಾದೇಶಿಕ ಮತ್ತು 7 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು.

ಮಂಗಳವಾರ ಬೆಳಗ್ಗೆ 8 ಸರಿಯಾಗಿ ಮತ ಎಣಿಕೆಯ ಪ್ರಕ್ರಿಯೆ ಆರಂಭಗೊಂಡಿತ್ತು. ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಯಾವುದೇ ಅಭ್ಯರ್ಥಿಗಳು ಸಹ ಎಣಿಕೆ ಕೇಂದ್ರದತ್ತ ಮುಖ ಮಾಡದೆ ಫಲಿತಾಂಶದ ಭಯದ ಆತಂಕದಲ್ಲಿದ್ದರು.

ಆದರೆ ಪಕ್ಷೇತರವಾಗಿ ಸ್ಪರ್ಧಿಸಿದ್ದ ಚಿದಾನಂದ ಹನುಮಂತಪ್ಪ ಹರಿಜನ ಮಾತ್ರ ಸರಿಯಾಗಿ ಮತ ಎಣಿಕೆಯ ಕೇಂದ್ರದಲ್ಲಿ ಕಾಣಿಸಿಕೊಂಡು ಉಮೇದಿನಲ್ಲಿದ್ದರು. ಅಲ್ಲದೇ ಮತ ಎಣಿಕೆಯ ಕೊನೆಯ ಹಂತದವರೆಗೂ ಚಿದಾನಂದ ಹನುಮಂತಪ್ಪ ಹರಿಜನ ಕೇಂದ್ರದಲ್ಲಿದ್ದರು. ಇವರಿಗೆ 1721 ಮತ ಚಲಾವಣೆಯಾಗಿದ್ದವು. ಈ ವೇಳೆ ಮಾತನಾಡಿದ ಅವರು, ಚಹಾ ಮಾರುತ್ತಿದ್ದವನೆ ಪ್ರಧಾನಿಯಾಗಿ 10 ವರ್ಷ ದೇಶ ಮುನ್ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ಅದೃಷ್ಟದ ಬಾಗಿಲು ತೆರಯಬಹುದು ಎಂದು ನಗುತ್ತಲೆ ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿದರು.

ಧೈರ್ಯ ತೋರದ ಸಚಿವರು, ಶಾಸಕರು

ಮತ ಎಣಿಕೆ ಕೇಂದ್ರದಲ್ಲಿ ಪ್ರಾರಂಭದಿಂದಲೆ ಬಿಜೆಪಿ ಕಾರ್ಯಕರ್ತರ ಗೆಲುವಿನ ಉತ್ಸಾಹ ಹೆಚ್ಚಾಗಿ ಕಂಡುಬಂದಿತ್ತು. ಜಿಲ್ಲೆಯ ಯಾವುದೇ ಕಾಂಗ್ರೆಸ್ ಶಾಸಕರಾಗಲಿ, ಸಚಿವರಾಗಲಿ ಮತ ಎಣೆಯ ಕೇಂದ್ರದಲ್ಲಿ ಕುಳಿತು ಫಲಿತಾಂಶದ ಪ್ರಕ್ರಿಯೆ ನೋಡಲು ಧೈರ್ಯ ತೋರದೆ ದೂರ ಉಳಿದಿದ್ದು ಕಂಡುಬಂತು. ಇನ್ನು ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ ಸಹ ಮತ ಎಣೆಕೆ ಕೇಂದ್ರದತ್ತ ಮುಖ ಮಾಡಿರಲಿಲ್ಲ. ಇನ್ನು ಗೆದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಹ 1 ಲಕ್ಷ ಮತ ಲೀಡಿಂಗ್ ಆದ ಮೇಲೆಯೇ ಮುಖದಲ್ಲಿ ನಗುವನ್ನು ತುಂಬಿಕೊಂಡು ಕೇಂದ್ರದೊಳಕ್ಕೆ ಬಂದಿದ್ದರು. ಫಲಿತಾಂಶ ನಿಖರವಾಗಿ ಹೊರಬಿದ್ದ ಮೇಲೆ ಮಾಧ್ಯಮದ ಎದುರು ಬಾಯಿ ಬಿಟ್ಟರು.

Share this article