ಐದನೇ ದಿನ ಗವಿಸಿದ್ಧೇಶ್ವರ ಜಾತ್ರೆಗೆ ಅಪಾರ ಭಕ್ತಗಣ

KannadaprabhaNewsNetwork |  
Published : Jan 20, 2025, 01:32 AM IST
19ಕೆಪಿಎಲ್7:ಕೊಪ್ಪಳ ನಗರದ ಗವಿಮಠದಲ್ಲಿ ಭಾನುವಾರ ಜಾತ್ರಾ ಮಹೋತ್ಸವದ ಮಹಾದಾಸೋಹದಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದರು.  | Kannada Prabha

ಸಾರಾಂಶ

ನಗರದ ಗವಿಮಠದ ಗವಿಸಿದ್ಧೇಶ್ವರ ರಥೋತ್ಸವ ಜರುಗಿದ ಐದನೇ ದಿನವಾದ ಭಾನುವಾರ ಜಾತ್ರೆಗೆ ಅಪಾರ ಭಕ್ತಗಣ ಆಗಮಿಸಿತು.

ಬಿಡುವಿನ ದಿನ ಜಾತ್ರೆ ಮಾಡಿದ ಜನ । ಭಕ್ತರ ನಿಯಂತ್ರಣಕ್ಕೆ ಸ್ವತಃ ತಾವೇ ನಿಂತ ಗವಿಶ್ರೀ । ಲಕ್ಷಕ್ಕೂ ಅಧಿಕ ಜನರಿಂದ ಪ್ರಸಾದ ಸ್ವೀಕಾರ

ಕೊಪ್ಪಳ:ನಗರದ ಗವಿಮಠದ ಗವಿಸಿದ್ಧೇಶ್ವರ ರಥೋತ್ಸವ ಜರುಗಿದ ಐದನೇ ದಿನವಾದ ಭಾನುವಾರ ಜಾತ್ರೆಗೆ ಅಪಾರ ಭಕ್ತಗಣ ಆಗಮಿಸಿತು.

ರಜೆ ಹಾಗೂ ಐದನೇ ದಿನದ ಜಾತ್ರೆ ಇವೆರೆಡು ಸಮ್ಮಿಲನವಾಗಿದ್ದು, ಗವಿಮಠ ಲೆಕ್ಕಕ್ಕೆ ಸಿಗದಷ್ಟು ಜನರಿಂದ ತುಂಬಿತ್ತು. ಗವಿಮಠದ ಗುಡ್ಡವೆಲ್ಲ ಜನಜಂಗುಳಿಯಿಂದ ಆವೃತ್ತವಾಗಿತ್ತು. ಜಿಲ್ಲೆ ಹಾಗೂ ನಾನಾ ಜಿಲ್ಲೆಗಳಿಂದ ಗವಿಮಠದ ಜಾತ್ರೆಗಾಗಿ ಜನರು ಆಗಮಿಸಿದ್ದರು. ಅಪಾರ ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತು ಗವಿಮಠದಲ್ಲಿ ಗವಿಸಿದ್ಧೇಶ್ವರ ಅಜ್ಜನ ಗದ್ದುಗೆ ದರ್ಶನ ಪಡೆದರು. ಪೊಲೀಸ್ ಸಿಬ್ಬಂದಿ, ಹೋಮ್ ಗಾರ್ಡ್‌, ಸ್ಕೌಟ್ಸ್, ಗೈಡ್ಸ್ ಸಿಬ್ಬಂದಿ ಭಕ್ತರ ನಿಯಂತ್ರಣಕ್ಕೆ ನಿಂತಿದ್ದರು. ವಿಶೇಷವಾಗಿ ಡಿವೈಎಸ್ಪಿ ಮುತ್ತಣ್ಣ ಅಮರಗೋಳ ಸಹ ಸ್ಥಳದಲ್ಲಿ ನಿಂತು ಭಕ್ತರ ನಿಯಂತ್ರಣ ಮಾಡಿದರು. ಅಷ್ಟೊಂದು ಜನರು ಗವಿಮಠಕ್ಕೆ ಭಾನುವಾರ ದರ್ಶನಕ್ಕೆ ಆಗಮಿಸಿದ್ದರು.ಭಕ್ತರ ನಿಯಂತ್ರಣಕ್ಕೆ ನಿಂತ ಗವಿಶ್ರೀ:ಗವಿಮಠದಲ್ಲಿ ಕಿಕ್ಕಿರಿದು ಸೇರಿದ ಅಪಾರ ಭಕ್ತ ಸಮೂಹದ ನಿಯಂತ್ರಣಕ್ಕೆ ಸ್ವತಃ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರೇ ನಿಂತರು. ಭಕ್ತರು ಸರದಿಯಲ್ಲಿ ಹೋಗಲು ಸೂಚಿಸಿದರು. ಯಾರು ಅವಸರ ಮಾಡಬೇಡಿ, ನಿಧಾನವಾಗಿ ಬನ್ನಿ ಎಂದು ತಿಳಿಸಿದರು. ಗವಿಮಠದ ದ್ವಾರ ಬಾಗಿಲಿನಿಂದ ಹಿಡಿದು ಗವಿಸಿದ್ಧೇಶ್ವರ ಗದ್ದುಗೆ ವರೆಗೆ ಅಪಾರ ಜನರು ಸರದಿಯಲ್ಲಿ ನಡೆದರು.ಗವಿಸಿದ್ಧೇಶ್ವರ ಜಾತ್ರೆ ಅಂದರೆ ಪ್ರತಿಯೊಬ್ಬರಿಗೂ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಭಾನುವಾರ ದಿನ ನೌಕರರಿಗೆ ರಜೆಯ ಬಿಡುವು. ಜಿಲ್ಲೆಯ ಬಹುತೇಕ ಜನರು ಭಾನುವಾರದ ಬಿಡುವನ್ನು ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಭಾಗಿಯಾಗುವುದರ ಮೂಲಕ ಕಳೆದಿದ್ದಾರೆ. ಅಗಣಿತ ಭಕ್ತಗಣ ಗವಿಮಠಕ್ಕೆ ಆಗಮಿಸಿ ಜಾತ್ರೆ ಮಾಡಿದೆ.

ಲಕ್ಷಕ್ಕೂ ಅಧಿಕ ಜನರಿಂದ ಪ್ರಸಾದ ಸ್ವೀಕಾರ:ಭಾನುವಾರ ಗವಿಮಠಕ್ಕೆ ಅಪಾರ ಭಕ್ತಗಣ ಆಗಮಿಸಿತ್ತು. ಜಾತ್ರೋತ್ಸವದಲ್ಲಿ ಪ್ರಸಾದ ಸ್ವೀಕರಿಸುವುದು ಅಂದರೆ ಅದೊಂದು ವಿಶೇಷವೇ ಸರಿ. ಭಾನುವಾರ ದಿನ ಜಾತ್ರೆಯ ಮಹಾದಾಸೋಹದಲ್ಲಿ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಜನರು ಪ್ರಸಾದ ಸ್ವೀಕರಿಸಿದ್ದಾರೆ. ರಾತ್ರಿ ವೇಳೆವರೆಗೂ 100 ಕ್ವಿಂಟಲ್ ಅಕ್ಕಿ, 75 ಕ್ವಿಂಟಲ್ ಬುಂದಿ ಹೋಗಿದೆ. ರೊಟ್ಟಿ, ಚಟ್ನಿ, ಪಲ್ಯ, ಅನ್ನ, ಸಾಂಬಾರ್ ಪ್ರಸಾದವನ್ನು ಭಕ್ತರು ಸ್ವೀಕರಿಸಿದ್ದಾರೆ.

ಮಹಾರಥೋತ್ಸವದ ದಿನದಂದು ಸೇರಿದ್ದ ಭಕ್ತರ ಸಂಖ್ಯೆ ಭಾನುವಾರ ಸಹ ಸೇರಿದೆ ಎಂದು ಅಂದಾಜಿಲಾಯಿತು. ಭಾನುವಾರ ಬೆಳಗ್ಗೆಯಿಂದ ಗವಿಮಠಕ್ಕೆ ಅಪಾರ ಭಕ್ತರು ಹರಿದು ಬಂದರು. ದಾಸೋಹ ಸೇರಿದಂತೆ ಜಾತ್ರೆಯ ಆವರಣ ಸಹ ಜನರಿಂದ ತುಂಬಿತ್ತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ