ಡಿಎಪಿ ಗೊಬ್ಬರಕ್ಕೆ ನರಗುಂದ ರೈತರಿಂದ ಭಾರಿ ಬೇಡಿಕೆ

KannadaprabhaNewsNetwork |  
Published : Jun 20, 2025, 12:34 AM ISTUpdated : Jun 20, 2025, 12:02 PM IST
(17ಎನ್.ಆರ್.ಡಿ4 ತಾಲೂಕಿನ ಡಿಎಪಿ ಗೋಬ್ಬರ ಕೊರತೆಯಿಂದ ರೈತ ಅಲೆದಾಟ ಮಾಡುವ ಸ್ಥಿತಿ ಬಂದಿದೆ.) | Kannada Prabha

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಾಗೂ ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆ ಜೋರಾಗಿ ನಡೆಯುತ್ತಿದೆ. ಆದರೆ ರೈತರ ಬೇಡಿಕೆಗೆ ತಕ್ಕಂತೆ ಡಿಎಪಿ ಗೊಬ್ಬರ ಸಿಗುತ್ತಿಲ್ಲ.

ಎಸ್.ಜಿ. ತೆಗ್ಗಿನಮನಿ

ನರಗುಂದ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಾಗೂ ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆ ಜೋರಾಗಿ ನಡೆಯುತ್ತಿದೆ. ಆದರೆ ರೈತರ ಬೇಡಿಕೆಗೆ ತಕ್ಕಂತೆ ಡಿಎಪಿ ಗೊಬ್ಬರ ಸಿಗುತ್ತಿಲ್ಲ.

ಮೇ ತಿಂಗಳ ಕೊನೆಯ ವಾರದಲ್ಲಿ ಕೃತಿಕಾ ಮಳೆ ಉತ್ತಮವಾಗಿ ಸುರಿದಿದ್ದರಿಂದ ರೈತರು ವಾಣಿಜ್ಯ ಬೆಳೆಯಾದ ಹೆಸರು ಬಿತ್ತನೆ ಮಾಡಿದ್ದಾರೆ. ಆದರೆ ಆನಂತರ ರೋಹಿಣಿ ಮಳೆ ಕೈ ಕೊಟ್ಟಿದ್ದರಿಂದ ಗೋವಿನ ಜೋಳ, ಬಿ.ಟಿ. ಹತ್ತಿ, ಈರುಳ್ಳಿ, ಮೆಣಸಿನಕಾಯಿ ಮತ್ತಿತರ ಬೆಳೆಗಳ ಬಿತ್ತನೆಗೆ ಸ್ವಲ್ಪ ಹಿನ್ನಡೆಯಾಗಿದೆ. ಆದರೆ ಮೃಗಶಿರಾ ಮಳೆ ಉತ್ತಮವಾಗಿದ್ದರಿಂದ ರೈತರು ಉಳಿದ ಬೆಳೆಗಳನ್ನು ಬಿತ್ತನೆ ಮಾಡಲು ಸಜ್ಜಾಗಿದ್ದಾರೆ.

ಡಿಎಪಿ ಗೊಬ್ಬರ ಕೊರತೆ:

ರೈತರು ಮುಂಗಾರು ಹಂಗಾಮಿನಲ್ಲಿ ಗೋವಿನ ಜೋಳ, ಬಿ.ಟಿ. ಹತ್ತಿ, ಈರಳ್ಳಿ, ಮೆಣಸಿಕಾಯಿ, ತೊಗರಿ ಬಿತ್ತನೆಗೆ ಡಿಎಪಿ ಗೊಬ್ಬರ ಬಳಸುತ್ತಾರೆ. ಆದರೆ ಈ ವರ್ಷ ಡಿಎಪಿ ಗೊಬ್ಬರ ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಆಗಿಲ್ಲ. ರೈತರು ಗೊಬ್ಬರಕ್ಕಾಗಿ ಅಲೆದಾಡುವ ಸ್ಥಿತಿ ಬಂದಿದೆ.

ಜಿಂಕ್‌ ಕಡ್ಡಾಯ: ತಾಲೂಕಿನ ಕೆಲವು ಅಂಗಡಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಇಪ್ಕೋ ಡಿಎಪಿ, ಸ್ಪಿಕ್‌ ಡಿಎಪಿ ಬಂದಿದೆ. ಈ ಗೊಬ್ಬರ ಬೇಕೆಂದರೆ ರೈತರು ಕಡ್ಡಾಯವಾಗಿ ₹600ಗಳ 1 ಕೆಜಿ ಜಿಂಕ್‌ ಖರೀದಿ ಮಾಡಬೇಕು ಎಂದು ಅಂಗಡಿಯವರು ಹೇಳುತ್ತಿದ್ದಾರೆ. ಒಂದು ಕಡೆ 50 ಕೆಜಿ ಡಿಎಪಿ ಗೊಬ್ಬರಕ್ಕೆ ₹1350 ಕೊಡಬೇಕು. ಇದರ ಜತೆಗೆ ₹600 ಕೊಟ್ಟು ಜಿಂಕ್‌ ಖರೀದಿ ಮಾಡುವುದು ತಮಗೆ ಹೊರೆಯಾಗಿದೆ ಎಂದು ರೈತರು ಹೇಳುತ್ತಿದ್ದಾರೆ.

ಕಡ್ಡಾಯವಿಲ್ಲ: ಕೃಷಿ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ, ರೈತರು ಬಿತ್ತನೆಗೆ ಬೇಕಾದ ರಾಸಾಯನಿಕ ಗೊಬ್ಬರ ಖರೀದಿ ಮಾಡುವ ಸಂದರ್ಭದಲ್ಲಿ ಜಿಂಕ್‌ ಅವಶ್ಯವಿದ್ದರೆ ಮಾತ್ರ ಖರೀದಿ ಮಾಡಬೇಕು. ಇಲ್ಲವಾದರೆ ಗೊಬ್ಬರ ಮಾತ್ರ ಖರೀದಿಸಬಹುದು. ಆದರೆ ಅಂಗಡಿಕಾರರು ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಡಿಎಪಿ ಗೊಬ್ಬರ ಪೂರೈಕೆ ಮಾಡುವ ಕಂಪನಿಯವರು ಕಡ್ಡಾಯವಾಗಿ ನಮಗೆ ಜಿಂಕ್‌ ಗೊಬ್ಬರ ಕಳುಹಿಸಿದ್ದಾರೆ. ಹೀಗಾಗಿ ನಾವು ಜಿಂಕ್ ಖರೀದಿ ಮಾಡುವ ರೈತರಿಗೆ ಮಾತ್ರ ಡಿಎಪಿ ಗೊಬ್ಬರ ಕೊಡುತ್ತೇವೆ ಎನ್ನುತ್ತಾರೆ.

ಬಿತ್ತನೆ ಗುರಿ: 2025-26ನೇ ಸಾಲಿನಲ್ಲಿ ಗೋವಿನ ಜೋಳ 13,000 ಹೆಕ್ಟೇರ್‌, ಬಿ.ಟಿ. ಹತ್ತಿ 4680 ಹೆಕ್ಟೇರ್‌, ತೊಗರಿ 250 ಹೆಕ್ಟೇರ್‌, ಸೂರ್ಯಕಾಂತಿ 240 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ ಹೆಸರು ಬಿತ್ತನೆಯಾಗಿದೆ ಎಂದು ಕೃಷಿ ಅಧಿಕಾರಿಗಳು ಹೇಳಿದರು.

ಗೊಬ್ಬರ ಸಂಗ್ರಹ ವಿವರ: ಯೂರಿಯಾ 6,100 ಟನ್, ಡಿಎಪಿ 200 ಟನ್, ಫಾಸ್ಪೇಟ್‌ 130 ಟನ್, ಕಾಂಪ್ಲೆಕ್ಸ್‌ 1072 ಕೆಜಿ, ಎಸ್.ಎಸ್.ಪಿ. 43.60 ಕೆಜಿ ಸದ್ಯ ತಾಲೂಕಿನ ಖಾಸಗಿ ಗೊಬ್ಬರ ಮಾರಾಟಗಾರರ ಅಂಗಡಿಗಳಲ್ಲಿ ಸಂಗ್ರಹವಿದೆ.

ಇತ್ತೀಚಿನ ದಿನಗಳಲ್ಲಿ ಡಿಎಪಿ ಗೊಬ್ಬರ ಉತ್ಪಾದನೆ ಮಾಡುವ ಕಂಪನಿಗಳು ಹೆಚ್ಚು ಉತ್ಪಾದನೆ ಮಾಡುತ್ತಿಲ್ಲ. ಆದ್ದರಿಂದ ರೈತರು ಪರ್ಯಾವಾಗಿ ಗೋವಿನ ಜೋಳ, ಬಿ.ಟಿ. ಹತ್ತಿ, ಈರುಳ್ಳಿ ಬಿತ್ತನೆ ಮಾಡಲು ಕಾಂಪ್ಲೆಕ್ಸ್‌ ಗೊಬ್ಬರಗಳಾದ 10.26.26, 20.20.20, 13.13.13 ಬಳಸಬಹುದು ಎಂದು ತಾಲೂಕು ಸಹಾಯಕ ಕೃಷಿ ಅಧಿಕಾರಿ ಮಂಜುನಾಥ ಜನಮಟ್ಟಿ ಹೇಳಿದರು.

ತಾಲೂಕಿನಲ್ಲಿ ರೈತರ ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಕೆ ಮಾಡಲು ಕೃಷಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಂಕ್‌ ಹೊರತುಪಡಿಸಿ ಡಿಎಪಿ ಗೊಬ್ಬರ ರೈತರಿಗೆ ಸಿಗುವಂತಾಗಬೇಕು ಎಂದು ಜಿಲ್ಲಾ ಭಾರತೀಯ ಕಿಸಾನ್‌ ಸಂಘದ ಅಧ್ಯಕ್ಷ ಎಸ್‌.ಎಸ್‌. ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌