ಪಾಲಾಕ್ಷ ಬಿ. ತಿಪ್ಪಳ್ಳಿ ಯಲಬುರ್ಗಾ
ಗ್ರಾಮೀಣ ಪ್ರದೇಶದ ರೈತರ ಜಮೀನುಗಳ ಬದುಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ಬೇವಿನ ಮರಗಳಲ್ಲಿ ಬಿಡುವ ಹಣ್ಣುಗಳಿಗೆ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಹೆಚ್ಚಿದೆ. ಔಷಧೀಯ ಗುಣ ಹೊಂದಿರುವ ಬೇವಿನ ಬೀಜದಿಂದ ಹತ್ತಾರು ಪ್ರಯೋಜನವಿದೆ. ಜತೆಗೆ ಮಹಿಳೆಯರಿಗೆ ಆದಾಯ ದೊರೆಯುತ್ತದೆ.
ಕೃಷಿಯ ಉಪ ಕಸುಬು:ಜಮೀನಿನಲ್ಲಿ ಬಿತ್ತನೆ, ಕಳೆ ತೆಗೆಯುವುದು ಹಾಗೂ ಇನ್ನಿತರ ಕೃಷಿ ಚಟುವಟಿಕೆಯಿಂದ ಬಿಡುವಿದ್ದಾಗ ಮಹಿಳೆಯರು, ಮಕ್ಕಳು ಬೇವಿನ ಬೀಜ ಸಂಗ್ರಹಿಸುತ್ತಾರೆ. ಕೆಲವರಿಗೆ ಇದು ಕೃಷಿಯ ಜತೆಗೆ ಉಪಕಸಬು. ಬೇವಿನ ಬೀಜ ಸಂಗ್ರಹದಿಂದ ಕೆಲವು ಮಹಿಳೆಯರು ಸಾವಿರಾರು ರುಪಾಯಿ ಗಳಿಸುತ್ತಾರೆ.ಜೀವನ ನಿರ್ವಹಣೆಗೆ ಸಹಕಾರಿ:ಬೇವಿನ ಬೀಜಕ್ಕೆ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಹೆಚ್ಚಿದೆ. ರೈತರ ಜಮೀನು, ರಸ್ತೆ ಬದಿ ಬೆಳೆದಿರುವ ಬೇವಿನ ಮರಗಳಿಂದ ಬೇವಿನಹಣ್ಣು ಆರಿಸಿ, ಸಂಗ್ರಹಿಸಲಾಗುತ್ತದೆ. ಅವುಗಳನ್ನು ಖರೀದಿ ಮಾಡಲು ವರ್ತಕರು ಹಳ್ಳಿಗಳಿಗೆ ಮತ್ತು ಜಮೀನುಗಳಿಗೆ ಆಗಮಿಸುತ್ತಾರೆ. ಒಂದು ಡಬ್ಬಿ ಬೇವಿನ ಬೀಜಕ್ಕೆ ₹೧೩೦ರಿಂದ ₹೧೫೦ರ ವರೆಗೆ ದರ ಇರುತ್ತದೆ. ಬೇವಿನ ಹಣ್ಣು ಸಂಗ್ರಹಿಸಿ ಮಾರಾಟ ಮಾಡಿದ ಹಣದಿಂದ ಜೀವನ ನಿರ್ವಹಣೆಗೆ ದಾರಿಯಾಗಲಿದೆ ಎನ್ನುತ್ತಾರೆ ರೈತ ಮಹಿಳೆಯರು.
ಬೇವಿನ ಬೀಜದ ಎಣ್ಣೆ ಬೆಳೆಗಳಿಗೆ ಸಿಂಪಡಣೆ ಮಾಡುವುದರಿಂದ ರೋಗ ಹತೋಟಿಯಲ್ಲಿಡಬಹುದು. ಇದನ್ನು ನಾನಾ ಬೆಳೆಗಳಿಗೆ ಸಾವಯವ ಗೊಬ್ಬರದ ರೂಪದಲ್ಲಿ ಬಳಕೆ ಮಾಡಬಹುದು. ಬೇವಿನ ಹಿಂಡಿ ತಯಾರಿಸಿ ಹೊಲಗಳಲ್ಲಿ ಹಾಕುವುದರಿಂದ ಬೆಳೆಗಳಲ್ಲಿನ ರೋಗಬಾಧೆ ತಡೆಯಬಹುದು ಎಂದು ಯಲಬುರ್ಗಾ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ತಿಳಿಸಿದ್ದಾರೆ.