ನೇರಳೆ ಹಣ್ಣುಗಳಿಗೆ ಭಾರಿ ಬೇಡಿಕೆ

KannadaprabhaNewsNetwork | Updated : Jun 17 2024, 02:38 PM IST
Follow Us

ಸಾರಾಂಶ

ಜೂನ್ ತಿಂಗಳು ಬಂತೆಂದರೆ ನೇರಳೆ ಹಣ್ಣಿನ ಸುಗ್ಗಿ ಬಂದಂತೆ. ಹಲವಾರು ಔಷಧೀಯ ಗುಣ ಹೊಂದಿರುವ ನೇರಳೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದೆ. ಈ ಹಣ್ಣಿನ ದರ ದುಬಾರಿಯಾಗಿದ್ದರೂ ಖರೀದಿ ಜೋರಾಗಿಯೇ ನಡೆದಿದೆ.

 ಕುಷ್ಟಗಿ : ಜೂನ್ ತಿಂಗಳು ಬಂತೆಂದರೆ ನೇರಳೆ ಹಣ್ಣಿನ ಸುಗ್ಗಿ ಬಂದಂತೆ. ಹಲವಾರು ಔಷಧೀಯ ಗುಣ ಹೊಂದಿರುವ ನೇರಳೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದೆ. ಈ ಹಣ್ಣಿನ ದರ ದುಬಾರಿಯಾಗಿದ್ದರೂ ಖರೀದಿ ಜೋರಾಗಿಯೇ ನಡೆದಿದೆ.

ಪಟ್ಟಣ ಸೇರಿದಂತೆ ತಾಲೂಕಿನ ಹನುಮನಾಳ, ಹನುಮಸಾಗರ, ತಾವರಗೇರಾ, ದೋಟಿಹಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೇರಳೆ ಹಣ್ಣಿನ ವ್ಯಾಪಾರ ಜೋರಾಗಿದೆ. ಕಾಡಿನಲ್ಲೆ ಬೆಳೆಯುವ ನೇರಳೆ ಹಣ್ಣು ಜನರಿಗೆ ಅಚ್ಚು ಮೆಚ್ಚು. ಹಾಗಾಗಿ ಈಗ ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿಗೆ ಹೆಚ್ಚು ಬೇಡಿಕೆ ಬಂದಿದೆ. ಈ ನೇರಳೆ ಹಣ್ಣು ಮಧುಮೇಹಕ್ಕೆ ಹಾಗೂ ಹಲವು ಔಷಧ ಗುಣಗಳನ್ನು ಹೊಂದಿದೆ ಇದು ಜಂತು ಹುಳು ನಿಯಂತ್ರಣಕ್ಕೆ ಮದ್ದಾಗಿದೆ.

ಯಥೇಚ್ಛ ಔಷಧೀಯ ಗುಣ:

ಜಂಬು ನೇರಳೆ ಯಥೇಚ್ಛವಾಗಿ ಔಷಧೀಯ ಗುಣ ಹೊಂದಿದೆ. ಸಕ್ಕರೆ ಕಾಯಿಲೆ ನಿಯಂತ್ರಣ ಹಾಗೂ ಜೀರ್ಣ ಶಕ್ತಿ ವೃದ್ಧಿಸುವ ಜಂಬುನೇರಳೆ ಸಿಗುವುದೇ ಅಪರೂಪ. ಮೇದೋಜೀರಕ ಗ್ರಂಥಿಯ ಮೇಲೆ ಪರಿಣಾಮ ಬೀರುವುದರಿಂದ ಸಕ್ಕರೆ ಕಾಯಿಲೆಗೆ ಉತ್ತಮ ಔಷಧಿಯ ಅಂಶವುಳ್ಳ ಹಣ್ಣಾಗಿದೆ. ಜಂಬು ನೇರಳೆ ಹಣ್ಣಿನ ಬೀಜದ ಪುಡಿ ಸೇವಿಸುವುದರಿಂದ ಅತಿಯಾದ ಮೂತ್ರ ತೊಂದರೆ ನಿವಾರಣೆ ಆಗುತ್ತದೆ. ಇದು ಜಂತು ಹುಳು ನಿಯಂತ್ರಣಕ್ಕೆ ಮದ್ದಾಗಿದೆ ಎಂಬುದು ವೈದ್ಯರ ಸಲಹೆ.

ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ:

ಜಂಬುನೇರಳೆ ಹಣ್ಣಿನ ಜ್ಯೂಸ್‌ನಿಂದ ಹೃದಯ ಕಾಯಿಲೆ ಹಾಗೂ ನಿರಂತರ ಭೇದಿ ನಿಯಂತ್ರಣಕ್ಕೆ ಬರುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಈ ಹಣ್ಣು ಕ್ಯಾನ್ಸರ್ ರೋಗಾಣುಗಳನ್ನು ನಾಶಪಡಿಸುವ ಶಕ್ತಿ ಹೊಂದಿದೆ. ಈ ಹಣ್ಣು ತಿನ್ನುವುದರಿಂದ ಯಕೃತ್ತು ಸ್ವಚ್ಛಗೊಳ್ಳುತ್ತದೆ. ಗಾಯ, ಅಸ್ತಮಾ ಕಾಯಿಲೆಗೆ ರಾಮಬಾಣವಾಗಿದೆ. ಈ ಹಣ್ಣಿನಲ್ಲಿ ಕಬ್ಬಿನಾಂಶ ಮತ್ತು ಕ್ಯಾಲ್ಸಿಯಂ, ಪೊಟ್ಯಾಸಿಯಂ ಇರುತ್ತದೆ. ಅಜೀರ್ಣ, ಚಂಚಲತೆ, ಕಿಡ್ನಿ ಸಮಸ್ಯೆ ನಿವಾರಣೆಗೂ ನೇರಳೆ ಹಣ್ಣು ದಿವ್ಯ ಔಷಧವಾಗಿದೆ.

ಈ ಹಣ್ಣಿನಲ್ಲಿ ಜಂಬು, ಹೈಬ್ರೀಡ್, ಜವಾರಿ, ನಾಯಿ ನೇರಳೆ ಹೀಗೆ ಕೆಲವು ತಳಿಗಳಿವೆ. ಇದರಲ್ಲಿ ಜಂಬು ನೇರಳೆ ಹಣ್ಣು ತುಂಬಾ ರುಚಿಯಾಗಿರುತ್ತದೆ. ಹೀಗಾಗಿ ಜಂಬು ನೇರಳೆಯನ್ನು ಗ್ರಾಹಕರು ಹೆಚ್ಚು ಇಷ್ಟಪಡುತ್ತಾರೆ. ಅಲ್ಲದೆ ಮಾರುಕಟ್ಟೆಯಲ್ಲಿಯೂ ಜಂಬು ನೇರಳೆಯೇ ಹೆಚ್ಚಾಗಿ ಮಾರಾಟಕ್ಕಿರುತ್ತದೆ. ಈ ಹಣ್ಣು ಕಾಡಿನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ನಾಯಿ ನೇರಳೆ ಹಣ್ಣುಗಳ ಮರಗಳು ರಸ್ತೆ ಬದಿಗಳಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಬೆಳೆದಿದ್ದು, ಇದು ಅಷ್ಟೊಂದು ರುಚಿಕರವಾಗಿಲ್ಲವಾದ್ದರಿಂದ ಜನಪ್ರಿಯವಾಗಿಲ್ಲ. ಆದ ಕಾರಣ ರೈತರು ವ್ಯಾಪಾರಿಗಳು ಜಂಬು ನೇರಳೆ ಗಿಡಗಳನ್ನೇ ಹೆಚ್ಚಾಗಿ ಬೆಳೆಸುತ್ತಾರೆ.

ಕೆಜಿಗೆ ₹ 150-200:

ಒಂದು ಕೆಜಿ ನೇರಳೆ ಹಣ್ಣಿನ ಬೆಲೆ ಮಾರುಕಟ್ಟೆಯಲ್ಲಿ ₹150 ರಿಂದ 200ವರೆಗೆ ಇದೆ. ದುಬಾರಿಯಾದರೂ ಮಾರಾಟ ಭರದಿಂದ ಸಾಗಿದೆ. ಆರಂಭದಲ್ಲಿ ಹೆಚ್ಚು ಬೇಡಿಕೆಯಿರಲ್ಲಿಲ್ಲ. ಆದರೆ ಸದ್ಯ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಗಗನಕ್ಕೇರಿದೆ.