ಹುಬ್ಬಳ್ಳಿಯಲ್ಲಿ ತಮಟೆಗಳಿಗೀಗ ಭಾರಿ ಬೇಡಿಕೆ

KannadaprabhaNewsNetwork | Published : Mar 12, 2025 12:48 AM

ಸಾರಾಂಶ

ಇಲ್ಲಿನ ಸಾಯಿಬಾಬಾ ಮಂದಿರ, ದುರ್ಗದ ಬೈಲ್, ಜನತಾ ಬಜಾರ್‌, ಚೆನ್ನಮ್ಮ ವೃತ್ತ, ಹಳೇ ಹುಬ್ಬಳ್ಳಿ ಸೇರಿದಂತೆ ಹಲವೆಡೆ ವಿವಿಧ ಗಾತ್ರ, ಆಕಾರ, ಬಣ್ಣಗಳಲ್ಲಿ ಬಗೆ ಬಗೆಯ ತಮಟೆಗಳ ಮಾರಾಟಕ್ಕಿರಿಸಿದ್ದು, ಹೋಳಿ ಹಬ್ಬದ ಸಂಭ್ರಮ ಹೆಚ್ಚಿಸಲು ತಮ್ಮಿಷ್ಟದ ತಮಟೆಗಳ ಖರೀದಿಯಲ್ಲಿ ತೊಡಗಿದ್ದಾರೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಹೋಳಿ ಹುಣ್ಣಿಮೆ ಬಂದರೆ ಸಾಕು ಎಲ್ಲೆಡೆಯೂ ಹಲಗೆ, ತಮಟೆಗಳ ಸದ್ದು. ರಂಗುರಂಗಿನ ಹೋಳಿ ಹಬ್ಬದ ಆಚರಣೆಗೆ ಉತ್ತರ ಕರ್ನಾಟಕಾದ್ಯಂತ ಜನತೆ ಸಿದ್ಧರಾಗಿದ್ದಾರೆ. ಹುಬ್ಬಳ್ಳಿಯಲ್ಲಿ ದೊರೆಯುವ ಫೈಬರ್‌ ನಿರ್ಮಿತ ತಮಟೆಗಳಿಗೆ ಈ ವರ್ಷ ಬೇಡಿಕೆ ಹೆಚ್ಚಾಗಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಿಂದ ಸಾವಿರಾರು ಜನರು ಹುಬ್ಬಳ್ಳಿಗೆ ಆಗಮಿಸಿ ತಮಟೆ ಖರೀದಿಸುತ್ತಿದ್ದಾರೆ.

ರಂಗ ಪಂಚಮಿ ಬಂದರೆ ಸಾಕು ನಮ್ಮ ಕಣ್ಮುಂದೆ ಬರುವುದು ಹಲಗೆ- ತಮಟೆಗಳ ಸದ್ದು. ದಿನದಿಂದ ದಿನಕ್ಕೆ ಚರ್ಮದಿಂದ ತಯಾರಿಸಿದ ಹಲಗೆಗಳು ಕಣ್ಮರೆಯಾಗುತ್ತಿದ್ದರೆ, ಇದರ ಸ್ಥಾನವನ್ನು ಫೈಬರ್‌ ನಿರ್ಮಿತ ತಮಟೆಗಳು ಅಲಂಕರಿಸಿಕೊಳ್ಳುತ್ತಿವೆ. ಇದಕ್ಕೆ ಪ್ರಮುಖ ಕಾರಣ ಚರ್ಮದಿಂದ ತಯಾರಿಸಿದ ಹಲಗೆಗಳಿಗೂ ಫೈಬರ್‌ನಿಂದ ತಯಾರಿಸಿದ ತಮಟೆಗಳಿಗೂ ಬೆಲೆಯಲ್ಲಿರುವ ವ್ಯತ್ಯಾಸ.

ಜನರಿಂದ ಖರೀದಿ:

ಇಲ್ಲಿನ ಸಾಯಿಬಾಬಾ ಮಂದಿರ, ದುರ್ಗದ ಬೈಲ್, ಜನತಾ ಬಜಾರ್‌, ಚೆನ್ನಮ್ಮ ವೃತ್ತ, ಹಳೇ ಹುಬ್ಬಳ್ಳಿ ಸೇರಿದಂತೆ ಹಲವೆಡೆ ವಿವಿಧ ಗಾತ್ರ, ಆಕಾರ, ಬಣ್ಣಗಳಲ್ಲಿ ಬಗೆ ಬಗೆಯ ತಮಟೆಗಳ ಮಾರಾಟಕ್ಕಿರಿಸಿದ್ದು, ಹೋಳಿ ಹಬ್ಬದ ಸಂಭ್ರಮ ಹೆಚ್ಚಿಸಲು ತಮ್ಮಿಷ್ಟದ ತಮಟೆಗಳ ಖರೀದಿಯಲ್ಲಿ ತೊಡಗಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಹೋಳಿ ಹಬ್ಬದ ರಂಗು ಇನ್ನುಳಿದ ಜಿಲ್ಲೆಗಳಿಗಿಂತ ಕೊಂಚ ಹೆಚ್ಚಾಗಿ ಕಂಡುಬರುತ್ತದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಂದ ಸಾವಿರಾರು ಜನರು ಹುಬ್ಬಳ್ಳಿಗೆ ಆಗಮಿಸಿ ಬಗೆಬಗೆಯ ತಮಟೆ ಖರೀದಿಸುತ್ತಿದ್ದಾರೆ.

30ಕ್ಕೂ ಅಧಿಕ ಕುಟುಂಬ

ರಾಜ್ಯದ ಜಳಕಿ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು, ಬಿಹಾರದಿಂದ ಸುಮಾರು 30ಕ್ಕೂ ಅಧಿಕ ಕುಟುಂಬಗಳು ನಗರದ ಜನನಿಬಿಡ ಪ್ರದೇಶಗಳಲ್ಲಿ ಫೈಬರ್‌ನಿಂದ ತಯಾಸಿರಿದ ಬಗೆಬಗೆಯ ತಮಟೆ ಮಾರಾಟಕ್ಕಿರಿಸಿದ್ದಾರೆ. ಅಳತೆಗೆ ತಕ್ಕಂತೆ ಬೆಲೆ ನಿಗದಿಗೊಳಿಸಲಾಗಿದ್ದು, ₹150 ರಿಂದ ಹಿಡಿದು ಸಾವಿರ ರುಪಾಯಿ ವರೆಗೆ ಮಾರಾಟ ಮಾಡುತ್ತಿದ್ದಾರೆ.

ಕಣ್ಮರೆಯಾಗುತ್ತಿರುವ ಹಲಗೆ

ಈ ಹಿಂದೆ ಅದರಲ್ಲೂ ಗ್ರಾಮೀಣ ಭಾಗಗಗಳಲ್ಲಿ ಹೆಚ್ಚಾಗಿ ಮನೆಮನೆಗಳಲ್ಲೂ ಚರ್ಮದ ಹಲಗೆಗಳು ಕಾಣಸಿಗುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಚರ್ಮದ ಹಲಗೆಗಳ ಜಾಗವನ್ನು ಫೈಬರ್ ತಮಟೆಗಳು ಆವರಿಸಿಕೊಂಡಿವೆ. ಚರ್ಮದ ಹಲಗೆ ಸದ್ದು ಕೇಳುವುದೇ ಚಂದ. ಆದರೆ, ಕಡಿಮೆ ಬೆಲೆಯಲ್ಲಿ ದೊರೆಯುತ್ತಿರುವ ಫೈಬರ್ ತಮಟೆಗಳಿಂದಾಗಿ ಚರ್ಮದ ಹಲಗೆಗಳ ನಾದ ಕ್ಷೀಣಿಸುತ್ತ ಸಾಗಿದೆ.

ತಯಾರಿಸುವವರಿಲ್ಲ

ಗ್ರಾಮೀಣ ಪ್ರದೇಶದಲ್ಲಿ ಅಲ್ಲೊಂದು, ಇಲ್ಲೊಂದು ಕಾಣಸಿಗುತ್ತಿರುವ ಚರ್ಮದ ಹಲಗೆಗಳು ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ತಯಾರಿಸುವವರೇ ಇಲ್ಲದಂತಾಗಿದೆ. ಜತೆಗೆ ಇದರ ತಯಾರಿಕೆ ತುಂಬಾ ಶ್ರಮ ಬೇಕು. ಹಾಗಾಗಿ ಹಲವು ತಯಾರಕರು ಈ ಉದ್ಯೋಗ ಕೈಬಿಟ್ಟು ಬೇರೆ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವುದು ಪ್ರಮುಖ ಕಾರಣ. ಹೆಚ್ಚಿನ ಮಾರಾಟ

ಕಳೆದ 8-10 ವರ್ಷಗಳಿಂದ ತಮಟೆ ಮಾರಾಟ ಮಾಡಲು ಹುಬ್ಬಳ್ಳಿಗೆ ಬರುತ್ತಿದ್ದೇವೆ. ವರ್ಷಕ್ಕಿಂತ ಈ ಬಾರಿ ಹೆಚ್ಚಿನ ತಮಟೆಗಳು ಮಾರಾಟವಾಗುತ್ತಿವೆ. ಒಂದು ವಾರದಲ್ಲಿ 700ಕ್ಕೂ ಹೆಚ್ಚು ತಮಟೆಗಳನ್ನು ಮಾರಾಟ ಮಾಡಿದ್ದೇವೆ.

ಸುರೇಂದರ್, ಆಂಧ್ರಪ್ರದೇಶದಿಂದ ಆಗಮಿಸಿದ ತಮಟೆ ಮಾರಾಟಗಾರ

ಕಡಿಮೆ ಬೆಲೆ

ಬೆಳಗಾವಿ, ಬಾಗಲಕೋಟೆ ಹೋಲಿಸಿದರೆ ಹುಬ್ಬಳ್ಳಿಯಲ್ಲಿ ಕಡಿಮೆ ಬೆಲೆಗೆ ಬಗೆಬಗೆಯ ತಮಟೆಗಳು ದೊರೆಯುತ್ತವೆ. 4-5 ಸ್ನೇಹಿತರೊಂದಿಗೆ ಹುಬ್ಬಳ್ಳಿಗೆ ಬಂದು ಬಗೆಬಗೆಯ ತಮಟೆಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದೇವೆ.

- ಮನೋಹರ, ನಿಷಾಂತ ಬಗಾಡೆ, ಬೆಳಗಾವಿಯಿಂದ ಹಲಗೆ ಖರೀದಿಸಲು ಆಗಮಿಸಿದ್ದ ಯುವಕರು

Share this article