ನವಲಗುಂದ: ತಾಲೂಕಿನಲ್ಲಿ ನಾಗರ ಪಂಚಮಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು, ಹಬ್ಬದ ಸಾಂಪ್ರದಾಯಿಕ ತಿನಿಸಾದ ಉಂಡಿಗಳಿಗೆ ಈ ಬಾರಿ ಭರ್ಜರಿ ಬೇಡಿಕೆ ಕಂಡುಬಂದಿದೆ.
ನಾಗರ ಪಂಚಮಿಯ ಅಂಗವಾಗಿ ಮನೆಮನೆಗಳಲ್ಲಿ ಸಾಂಪ್ರದಾಯಿಕವಾಗಿ ವಿವಿಧ ರೀತಿಯ ಊಂಡಿಗಳನ್ನು ತಯಾರಿಸಲಾಗಿದೆ. ಎಳ್ಳು, ಬೆಲ್ಲ, ಕಡಲೆಕಾಯಿ, ಕೊಬ್ಬರಿ, ಶೇಂಗಾ, ಲಡಕಿ, ರವೆ ಸೇರಿದಂತೆ ವಿವಿಧ ವಿಶಿಷ್ಟ ರುಚಿ ಮತ್ತು ಪರಿಮಳದಿಂದ ಕೂಡಿರುವ ಉಂಡಿಗಳು ಎಲ್ಲರನ್ನೂ ಆಕರ್ಷಿಸುತ್ತಿವೆ. ಹಬ್ಬದ ದಿನದಂದು ಕುಟುಂಬ ಸದಸ್ಯರು ಒಟ್ಟಾಗಿ ಉಂಡಿಗಳನ್ನು ತಯಾರಿಸಿ ಸವಿಯುವುದು ಸಂಪ್ರದಾಯದ ಪ್ರಮುಖ ಭಾಗವಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿಯೂ ಊಂಡಿಗಳ ತಯಾರಿ ಮತ್ತು ಮಾರಾಟ ಜೋರಾಗಿದೆ. ಮನೆಗಳಲ್ಲಿ ತಯಾರಿಸಲು ಸಮಯದ ಅಭಾವವಿರುವವರು ಅಂಗಡಿಗಳಿಂದ ಸಿದ್ಧ ಉಂಡಿಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ಸಣ್ಣ ವ್ಯಾಪಾರಿಗಳು, ಗೃಹೋದ್ಯಮ ನಡೆಸುವವರಿಗೆ ಉತ್ತಮ ವ್ಯಾಪಾರ ನಡೆಯುತ್ತಿದೆ. ಇದರ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ನಾಗರ ಪಂಚಮಿಯ ಜೋಕಾಲಿ ಆಟವೂ ಜನರನ್ನು ವಿಶೇಷವಾಗಿ ಆಕರ್ಷಿಸುತ್ತಿದೆ. ಮಕ್ಕಳು ಹಾಗೂ ಯುವಕರು ಜೋಕಾಲಿಯಲ್ಲಿ ಆಟವಾಡಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಿದ್ದಾರೆ.