)
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೌದು, ಬೆಂಗಳೂರಿನ ಸಾರ್ವಜನಿಕರು ಪ್ರತಿದಿನ ಬೆಳಗ್ಗೆ ಬರುವ ಕಸದ ಆಟೋಗಳಿಗೆ ನೀಡುವ ತ್ಯಾಜ್ಯದಲ್ಲಿ ಲಭ್ಯವಾಗುವ ಪ್ಲಾಸ್ಟಿಕ್ ಅನ್ನು ಆಂಧ್ರಪ್ರದೇಶಕ್ಕೆ ರಫ್ತು ಮಾಡುವುದಕ್ಕೆ ಬೆಂಗಳೂರು ಘನತ್ಯಾಜ್ಯ ವಿಲೇವಾರಿ ಸಂಸ್ಥೆ ನಿರ್ಧರಿಸಿದೆ.
ಕಡಪಾದಲ್ಲಿರುವ ದಾಲ್ಮಿಯಾ ಸಿಮೆಂಟ್ ಕಂಪನಿಯು ಕಸದಲ್ಲಿ ಲಭ್ಯವಾಗುವ ಪ್ಲಾಸ್ಟಿಕ್ ಖರೀದಿ ಮಾಡುವುದಕ್ಕೆ ಒಪ್ಪಂದ ಮಾಡಿಕೊಂಡಿದೆ. ಪ್ರತಿ ದಿನ ಸುಮಾರು 350 ಮೆಟ್ರಿಕ್ ಟನ್ ಪೂರೈಕೆ ಆಗಲಿದ್ದು, ದಾಲ್ಮಿಯಾ ಸಿಮೆಂಟ್ ಕಂಪನಿಯು ಪಡೆಯುವ ಪ್ಲಾಸ್ಟಿಕ್‌ಗೆ ಇಪಿಆರ್ ಕ್ರೆಡಿಟ್ ಪಾಯಿಂಟ್‌ಗಳನ್ನು ನೀಡಲಿದೆ. ಈ ಇಪಿಆರ್ ಕ್ರೆಡಿಟ್ ಪಾಯಿಂಟ್‌ಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿಕೊಂಡು ಹಣ ಗಳಿಸುವ ಪ್ಲಾನ್ ಅನ್ನು ಬೆಂಗಳೂರು ತ್ಯಾಜ್ಯ ವಿಲೇವಾರಿ ಸಂಸ್ಥೆ ಹಾಕಿಕೊಂಡಿದೆ.ಪ್ರತಿ ಟನ್ ಸುಮಾರು 1,500 ರು.ನಿಂದ 2 ಸಾವಿರ ರು. ಮೌಲ್ಯದ ಇಪಿಆರ್ ಕ್ರೆಡಿಟ್ ಪಾಯಿಂಟ್‌ಗಳನ್ನು ಬೆಂಗಳೂರು ತ್ಯಾಜ್ಯ ವಿಲೇವಾರಿ ಸಂಸ್ಥೆ ನೀಡಲಿದೆ. ಈ ಪ್ರಕಾರ ದಿನಕ್ಕೆ ಸುಮಾರು 6 ಲಕ್ಷ ರು. ಗಳನ್ನು ಸಂಸ್ಥೆ ಗಳಿಸಲಿದೆ ಎಂದು ಅಂದಾಜಿಸಲಾಗಿದೆ. ದಾಲ್ಮಿಯಾ ಸಿಮೆಂಟ್ ಕಂಪನಿಯು ಪ್ಲಾಸ್ಟಿಕ್ ಅನ್ನು ಇಂಧನವಾಗಿ ಬಳಕೆ ಮಾಡಿಕೊಳ್ಳಲಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರಿಗೌಡ, ನಗರದಲ್ಲಿ ಅಕ್ಟೋಬರ್‌ನಲ್ಲಿ ಪ್ಲಾಸ್ಟಿಕ್ ವಿಂಗಡಣೆ ಆರಂಭಿಸಲಾಗಿತ್ತು. ಆಗ ದಿನಕ್ಕೆ ಸುಮಾರು 10 ಟನ್‌ನಷ್ಟು ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಲಭ್ಯವಾಗುತ್ತಿತ್ತು. ಅದನ್ನು ಬಿಡದಿಯ ವೇಸ್ಟ್‌ಟು ಎನರ್ಜಿ ಘಟಕಕ್ಕೆ ಕಳುಹಿಸಲಾಗುತ್ತಿತ್ತು. ಪ್ಲಾಸ್ಟಿಕ್ ಉತ್ಪಾದನೆ ಪ್ರಮಾಣ ಇದೀಗ 350 ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ. ಅಷ್ಟೊಂದು ಪ್ಲಾಸ್ಟಿಕ್ ಬಳಕೆಯ ಸಾಮರ್ಥ್ಯ ಬಿಡದಿಯ ಘಟಕಕ್ಕೆ ಇಲ್ಲ. ಹಾಗಾಗಿ, ದಾಲ್ಮಿಯಾ ಸಿಮೆಂಟ್ ಕಂಪನಿ ಪ್ಲಾಸ್ಟಿಕ್ ಖರೀದಿಗೆ ಮುಂದೆ ಬಂದಿದೆ. ಸೋಮವಾರದಿಂದ ರಫ್ತು ಮಾಡಲಾಗುವುದು ಎಂದು ತಿಳಿಸಿದರು.ಪ್ಲಾಸ್ಟಿಕ್ ವಿಂಡಣೆ ಆರಂಭಗೊಂಡ ಬಳಿಕ ಭೂ ಭರ್ತಿ ಕ್ವಾರಿಗಳಿಗೆ ಸಾಗಿಸಲಾಗುತ್ತಿದ್ದ, ಮಿಶ್ರತ್ಯಾಜ್ಯದ ಲಾರಿಗಳ ಸಂಖ್ಯೆ ಶೇ.25 ರಷ್ಟು ಇಳಿಕೆಯಾಗಿದೆ. ಬೆಂಗಳೂರಿನ ಜನರು ಸಹಕಾರ ನೀಡಿ ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಣೆ ಮಾಡಿಕೊಟ್ಟರೆ, ದಿನಕ್ಕೆ ಒಂದು ಸಾವಿರ ಮೆಟ್ರಿಕ್ ಟನ್‌ನಷ್ಟು ಪ್ಲಾಸ್ಟಿಕ್ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಇಆರ್‌ಪಿ ಕ್ರೆಡಿಟ್ ಎಂದರೆ ಏನು?ಉತ್ಪಾದಕ ಸಂಸ್ಥೆಗಳು ತಮ್ಮ ಉತ್ಪನ್ನಗಳಿಂದ (ಪ್ಲಾಸ್ಟಿಕ್, ಇ-ತ್ಯಾಜ್ಯ, ಟೈರ್) ಉಂಟಾಗುವ ತ್ಯಾಜ್ಯದ ಮರುಬಳಕೆ ಮತ್ತು ವಿಲೇವಾರಿ ಜವಾಬ್ದಾರಿಯನ್ನು ಪೂರೈಸಲು ಬಳಸುವ ಡಿಜಿಟಲ್ ಟೋಕನ್, ಪರಿಕರಗಳಾಗಿದೆ. ಮರು ಬಳಕೆದಾರರು ತ್ಯಾಜ್ಯವನ್ನು ಮರುಬಳಕೆ ಮಾಡಿದಾಗ ಇಆರ್‌ಪಿ ಕ್ರೆಡಿಟ್‌ಗಳನ್ನು ರಚಿಸುತ್ತಾರೆ. ಉತ್ಪಾದಕರು ಈ ಕ್ರೆಡಿಟ್‌ಗಳನ್ನು ಖರೀದಿಸುವ ಮೂಲಕ ತಮ್ಮ ಪರಿಸರ ಜವಾಬ್ದಾರಿಯನ್ನು ಪೂರೈಸುತ್ತಾರೆ.