ಬೆಂಕಿ ನಂದಿಸಲು ಹತ್ತಾರು ಅಗ್ನಿಶಾಮಕ ವಾಹನಗಳು, ನೂರಾರು ಸಿಬ್ಬಂದಿಯಿಂದ ಯತ್ನ
ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಕೇಂದ್ರೀಯ ಬಸ್ ನಿಲ್ದಾಣದ ಎದುರಿನಲ್ಲಿ ಜನನಿಭಿಡ ಪ್ರದೇಶದಲ್ಲಿಯೇ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡು, ಹಲವು ಅಂಗಡಿಗಳು ಸುಟ್ಟು ಭಸ್ಮವಾಗಿ ಕೋಟ್ಯಂತರ ರುಪಾಯಿ ಹಾನಿಯಾಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ, ನಾಲ್ಕಾರು ಗಂಟೆಗಳ ಕಾಲ ಅಗ್ನಿ ಧಗ ಧಗ ಉರಿಯುತ್ತಿದ್ದು, ಸಾವಿರಾರು ಜನರು ಜಮಾಯಿಸಿದ್ದರು.
ಬೆಂಕಿ ನಂದಿಸಲು ಹತ್ತಾರು ಅಗ್ನಿಶಾಮಕ ವಾಹನ ಹಾಗೂ ನೂರಾರು ಸಂಖ್ಯೆಯ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದರು. ಸ್ಥಳದಲ್ಲಿ ಸೇರಿದ್ದ ಜನರನ್ನು ಚದುರಿಸಲು, ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.
ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ಮುಚ್ಚಿದ್ದ ಕೆಲ ಅಂಗಡಿಗಳ ಬಾಗಿಲು ತೆರೆದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಒಳನುಗ್ಗಿ ಬೆಂಕಿ ನಂದಿಸಿದರು.
ಬೆಂಕಿ ಹೊತ್ತಿಕೊಂಡ ಅಂಗಡಿಗಳಲ್ಲಿ ಪೇಂಟ್, ಥಿನ್ನರ್, ಫೆವಿಕಾಲ್ ಮತ್ತಿತರ ಸಾಮಗ್ರಿಗಳು ಇದ್ದುದರಿಂದ ಆಗಾಗ ಸಣ್ಣ ಸ್ಫೋಟ ಸಂಭವಿಸಿ, ಸಾಮಗ್ರಿ ಸಿಡಿಯುತ್ತಿದ್ದವು. ಇದರಿಂದ ಸೇರಿದ್ದ ಜನರು ಗಾಬರಿಗೊಂಡರು.₹5 ಕೋಟಿಗೂ ಅಧಿಕ ಹಾನಿ:
ಹತ್ತಾರು ಅಂಗಡಿಗಳ ಬಹುತೇಕ ಸುಟ್ಟಿದ್ದರಿಂದ ಸುಮಾರು ₹5 ಕೋಟಿಗೂ ಅಧಿಕ ಹಾನಿಯಾಗಿದೆ ಎನ್ನಲಾಗಿದೆ. ಇದರ ಪ್ರಮಾಣ ಇನ್ನು ಹೆಚ್ಚಳವಾಗುವ ಸಾಧ್ಯತೆ ಇದೆ.ದುರಂತದ ಬಗ್ಗೆ ಅಂಗಡಿ ಮಾಲಿಕರ್ಯಾರೂ ಮಾತನಾಡುತ್ತಿಲ್ಲ. ಹೇಳಿಕೆ, ಮಾಹಿತಿ ಸಹ ನೀಡಲು ಹಿಂದೇಟು ಹಾಕಿದರು. ಬಹುತೇಕ ಅಂಗಡಿಯಲ್ಲಿ ಮುನ್ನೆಚ್ಚರಿಕೆ, ಅಗ್ನಿಶಾಮಕ ಉಪಕರಣ ಇರಲಿಲ್ಲ ಎನ್ನಲಾಗಿದೆ. ಅನುಮತಿ ಇಲ್ಲದೇ ಇರುವ ಅಂಗಡಿಯೇ ಹೆಚ್ಚಾಗಿದ್ದರಿಂದ ಯಾರೂ ಮಾಹಿತಿ ನೀಡಲು ಮುಂದೆ ಬಂದಿಲ್ಲ, ಹಾನಿಯ ಬಗ್ಗೆ ಬಾಯ್ಬಿಡುತ್ತಿಲ್ಲ.
ಎಸ್ಪಿ, ಡಿಸಿ ಭೇಟಿ:ಅಗ್ನಿ ದುರಂತ ಸ್ಥಳಕ್ಕೆ ಜಿಲ್ಲಾಧಿಕಾರಿ ನಲಿನ್ ಅತುಲ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಭೇಟಿ ನೀಡಿ, 3-4 ಗಂಟೆಗಳ ಕಾಲ ಸ್ಥಳದಲ್ಲಿಯೇ ಇದ್ದು, ಬೆಂಕಿ ನಿಯಂತ್ರಿಸುವ ಕಾರ್ಯದ ಉಸ್ತುವಾರಿ ನೋಡಿಕೊಂಡರು. ಸ್ಥಳೀಯ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವುದು ಅಸಾಧ್ಯ ಎನಿಸಿದಾಗ ಜಿಲ್ಲೆಯ ವಿವಿಧೆಡೆ, ಪಕ್ಕದ ಜಿಲ್ಲೆಯಿಂದಲೂ ವಾಹನ ತರಿಸಿದರು. ಆ್ಯಂಬೆಲೆನ್ಸ್ ಸಹ ಸನ್ನದ್ಧ ಸ್ಥಿತಿಯಲ್ಲಿಟ್ಟು ಅಗತ್ಯ ಕ್ರಮ ಕೈಗೊಂಡರು.