ಆರ್‌ಎಸ್‌ಎಸ್ ನೂರು ವರ್ಷಗಳ ಪಯಣ, ಹಿಂದೂಗಳ ಸಂರಕ್ಷಣೆ ಕುರಿತು ಜಾಗೃತಿ
ಕನ್ನಡಪ್ರಭ ವಾರ್ತೆ ತುರುವೇಕೆರೆ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರು ವರ್ಷಗಳ ಪಯಣ ಹಾಗೂ ಹಿಂದೂಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಫೆ.19ರ ಗುರುವಾರ ಬೃಹತ್ ಹಿಂದೂ ಸಮಾಜೋತ್ಸವ ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 19ರಂದು ಬೆಳಗ್ಗೆ 10ಗಂಟೆಗೆ ಉಡುಸಲಮ್ಮ ದೇವಾಲಯದಿಂದ ಗಣಪತಿ ಆಸ್ಥಾನ ಮಂಟಪದವರೆಗೂ ಶೋಭಾ ಯಾತ್ರೆ ನಡೆಯಲಿದೆ. ಈ ವೇಳೆ ಹಲವಾರು ಕಲಾ ತಂಡಗಳು ಪಾಲ್ಗೊಳ್ಳಲಿವೆ. ಮಕ್ಕಳು ಮಹಾಪುರುಷರ ವೇಷಗಳನ್ನು ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಪಕ್ಷಾತೀತವಾಗಿ ಗಣ್ಯ ವ್ಯಕ್ತಿಗಳು ಭಾಗವಹಿಸುವರು ಎಂದು ಮುಖಂಡರು ತಿಳಿಸಿದ್ದಾರೆ.ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಮಹಾಸ್ವಾಮೀಜಿ, ವಿರಕ್ತ ಮಠದ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ, ಗೋಡೆಕೆರೆ ಮೃತ್ಯುಂಜಯ ದೇಶೀಕೇಂದ್ರ ಮಹಾಸ್ವಾಮೀಜಿ, ಅಖಿಲ ಭಾರತ ಶ್ರೀ ಕೃಷ್ಣ ಯಾದವ ಮಹಾಸಂಸ್ಥಾನ, ಸುಕ್ಷೇತ್ರ ಗೊಲ್ಲಹಳ್ಳಿಯ ಜಗದ್ಗುರು ಕೃಷ್ಣಯಾದವಾನಂದ ಮಹಾಸ್ವಾಮೀಜಿ, ಮಾದಿಹಳ್ಳಿ ರಾಮಕೃಷ್ಣ ಮಠದ ಸ್ವಾಮಿ ತದ್ಯುಕ್ತಾನಂದಜಿ ಮಹಾರಾಜ್ ಅವರು ಈ ಸಮಾಜೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವ್ಯಕ್ತಿ, ಕುಟುಂಬ, ಸಮಾಜದ ನಡಳಿಕೆಯಲ್ಲಿ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ, ಸ್ವದೇಶಿ, ಜೀವನ ಪದ್ಧತಿ ಹಾಗೂ ನಾಗರೀಕ ಶಿಷ್ಟಾಚಾರಗಳೆಂಬ ಪಂಚಪರಿವರ್ತನೆಗಳನ್ನು ತಿಳಿಸುವುದು, ಹಿಂದೂ ಸಮಾಜದ ಸಾಮೂಹಿಕ ಶಕ್ತಿ ಪ್ರಕಟ ಮಾಡುವುದು, ಹಿಂದೂ ಧರ್ಮ, ಸಂಸ್ಕೃತಿ, ಸಮಾಜಕ್ಕೆ ಪೂರಕವಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದು, ಸಮಾಜದಲ್ಲಿ ಹಿಂದುತ್ವದ ಭಾವನೆ ಮತ್ತಷ್ಟು ಬಲಪಡಿಸುವುದು, ದೇವಾಲಯಗಳನ್ನು ಜಾಗೃತಿ ಕೇಂದ್ರಗಳನ್ನಾಗಿ ಮಾಡುವುದು, ಹಿಂದೂ ಸಮಾಜದ ಒಗ್ಗಟ್ಟಿನ ಬಗ್ಗೆ ಅರಿವು ಮೂಡಿಸುವುದು ಮತ್ತು ಒಟ್ಟಿಗೆ ಕೆಲಸ ಮಾಡುವ ವಾತಾವರಣ ಸೃಷ್ಟಿಸುವುದು ಇದರ ಮೂಲ ಉದ್ದೇಶವಾಗಿದೆ.ತಾಲೂಕಿನ ಎಲ್ಲಾ ಹಿಂದೂ ಬಾಂಧವರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಾರಂಭದ ಆಯೋಜಕರು ಮನವಿ ಮಾಡಿದ್ದಾರೆ.