ಕೊಪ್ಪಳ:
ಈ ವೇಳೆ ಮಾತನಾಡಿದ ಸಮಿತಿಯ ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳದಲ್ಲಿ ಬಹುದೊಡ್ಡ ಜನಾಂದೋಲನ ರೂಪಗೊಂಡಿದೆ. ಕೈಗಾರಿಕೆ ವಿರುದ್ದ ಗಟ್ಟಿಯಾದ ಧ್ವನಿ ಎತ್ತಿದೆ. ಹಿಂದೆ ಗದಗನಲ್ಲಿ ಪೋಸ್ಕೋ ಕಂಪನಿ ಬಂದಾಗ ಆಗ ತೋಂಟದ ಸಿದ್ಧಲಿಂಗಶ್ರೀಗಳು ಹೋರಾಟದ ನೇತೃತ್ವ ವಹಿಸಿದ್ದರು. ಇದರಿಂದ ಕಂಪನಿ ಹೇಳ ಹೆಸರಿಲ್ಲದೇ ಕಿತ್ತುಕೊಂಡು ಹೋಯಿತು. ಈಗ ಅದೇ ಮಾದರಿಯಲ್ಲಿ ಕೊಪ್ಪಳದಲ್ಲಿ ಬಿಎಸ್‌ಪಿಎಲ್ ವಿರುದ್ದ ಗವಿಸಿದ್ಧೇಶ್ವರ ಶ್ರೀಗಳು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ನಾವೂ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ಸರ್ಕಾರವು ಬಿಎಸ್‌ಪಿಎಲ್ ಕೈಗಾರಿಕೆ ಸ್ಥಾಪನೆ ಆದೇಶ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಸರ್ಕಾರವೇ ಕೈಗಾರಿಕೆ ಸ್ಥಾಪನೆ ಮಾಡಿ ರದ್ದುಪಡಿಸಿರುವ ಸಾಕಷ್ಟು ಉದಾಹರಣೆ ಇವೆ. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಕೂಡಲೇ ರದ್ದತಿ ಆದೇಶ ಹೊರಡಿಸಬೇಕು. ಜಿಲ್ಲೆಯ ರಾಜಕಾರಣಿಗಳಿಗೆ ನೈತಿಕತೆಯಿದ್ದರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತಮ್ಮ ಬದ್ಧ ಪ್ರದರ್ಶಿಸಬೇಕು ಎಂದ ಅವರು, ಜಿಲ್ಲೆಗೆ ಅಣುಸ್ಥಾವರವೂ ಬೇಡ ಎಂದರು.ಗಿಣಗೇರಿ ಭಾಗದಲ್ಲಿ ಕೈಗಾರಿಕೆಗಳ ಕೇಂದ್ರೀಕರಣ ಮಾಡಲಾಗಿದೆ. ಇಂಥಹ ಕೇಂದ್ರೀಕರಣ ನೀತಿ ಸರಿಯಲ್ಲ. ಕೈಗಾರಿಕೆಗಳ ಸ್ಥಾಪನೆಯ ಬಾಧಿತ ಹಳ್ಳಿಗಳಲ್ಲಿ ಜನರಿಗೆ ಕ್ಯಾನ್ಸರ್ ಬರುತ್ತಿವೆ. ಟಿಬಿ, ಅಸ್ತಮಾ ಸೇರಿದಂತೆ ಹಲವು ರೋಗಗಳು ಕಾಣಿಸಿಕೊಳ್ಳುತ್ತಿವೆ. ಮಕ್ಕಳಲ್ಲಿ ಆರೋಗ್ಯದ ಸಮಸ್ಯೆ ಕಾಡಲಾರಂಭಿಸಿವೆ. ಈ ಕೂಡಲೇ ಸರ್ಕಾರವು ಜಿಲ್ಲಾಡಳಿತಕ್ಕೆ ಸೂಚನೆ ನೀಡುವ ಜತೆಗೆ ಕೈಗಾರಿಕೆ ರದ್ದತಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.