ಯಲ್ಲಾಪುರ: ಶಿಕ್ಷಣ ಕ್ಷೇತ್ರದಲ್ಲಿ ಸದಾ ಹೊಸತನವನ್ನು ಹಂಬಲಿಸುವ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹವು ಇದೀಗ ಪದವೀಧರ ವಿದ್ಯಾರ್ಥಿಗಳ ಉದ್ಯೋಗದ ಕನಸನ್ನು ಸಾಕಾರಗೊಳಿಸಲು ಮುಂದಾಗಿದೆ. ಇದರ ಭಾಗವಾಗಿ ಮೇ ೨ರಂದು ವಿಶ್ವದರ್ಶನ ಬಿಸಿಎ ಕಾಲೇಜು ಆವಾರದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾಹಿತಿ ನೀಡಿದ್ದಾರೆ.
ಕೇವಲ ಪದವೀಧರರು ಮಾತ್ರವಲ್ಲದೇ ಈ ವರ್ಷ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವವರು, ಸ್ನಾತಕೋತ್ತರ ಪದವೀಧರರು, ಡಿಪ್ಲೊಮಾ, ಐಟಿಐ, ಬಿಇ, ಎಸ್‌ಎಸ್‌ಎಲ್‌ಸಿ, ಪಿಯುಸಿ ಆದ ಯಾವುದೇ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ತಮ್ಮ ಅರ್ಹತೆಯ ಕನಸಿನ ಉದ್ಯೋಗಕ್ಕೆ ಸೇರಬಹುದಾಗಿದೆ.
ಶಿಕ್ಷಕರ ಉದ್ಯೋಗ ಮೇಳ: ಇನ್ನು ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಕರ ಕೊರತೆ ತೀವ್ರವಾಗಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಶಿಕ್ಷಕರ ಬೃಹತ್ ಉದ್ಯೋಗ ಮೇಳವೂ ಇದೇ ವೇಳೆ ನಡೆಯಲಿದೆ. ಈ ಉದ್ಯೋಗ ಮೇಳದ ಮೂಲಕ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅನುಭವಿ ಅಭ್ಯರ್ಥಿಗಳೊಂದಿಗೆ ಹೊಸ ಅಭ್ಯರ್ಥಿಗಳಿಗೂ ಅವಕಾಶ ನೀಡಲಾಗಿದೆ.ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ನೋಂದಣಿ ಕಡ್ಡಾಯವಾಗಿದ್ದು, ಗೂಗಲ್ ಫಾರ್ಮ್ https://forms.gle/TXm1i7Ym71b7Jisq6 ಭರ್ತಿ ಮಾಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಪ್ರಸನ್ನ ಭಟ್ಟ ೬೩೬೨೩೨೪೬೫೧ ಸಂಪರ್ಕಿಸಬಹುದು.