ಹಳಿಯಾಳ: ತಂತ್ರಜ್ಞಾನದ ಜತೆಯಲ್ಲಿ ಕೌಶಲ್ಯ ಜ್ಞಾನ ಹೊಂದಿರುವನಿಗೆ ಉದ್ಯಮ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಅಪಾರವಾದ ಅವಕಾಶಗಳಿವೆ. ಅದಕ್ಕಾಗಿ ಇಂದಿನ ಯುವಪೀಳಿಗೆ ಹಾಗೂ ವಿದ್ಯಾಥಿಗಳು ಕೃತಕ ಬುದ್ಧಿಮತೆ ಹಾಗೂ ಡಿಜಿಟಲ್ ತಂತ್ರಜ್ಞಾನದಲ್ಲಿ ಪಾರಂಗತರಾಗಲು ಆದ್ಯತೆ ನೀಡಬೇಕು ಎಂದು ವಿ.ಆರ್.ಡಿ.ಎಂ. ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಕರೆ ನೀಡಿದರು.
ತರಬೇತಿ ಕೇಂದ್ರದ ಮಾಜಿ ವಿದ್ಯಾರ್ಥಿ, ಪಾಟೀಲ್ ಕಾರ್ ಸೆಂಟರ್ ಮಾಲೀಕ ಕಿಶನ ಪಾಟೀಲ ಮಾತನಾಡಿ, ನಾನು ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಪಡೆದ ಶಿಕ್ಷಣ ಹಾಗೂ ಕೌಶಲ್ಯ ಜ್ಞಾನವು ನನಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದೆ. ವಿದ್ಯಾರ್ಥಿಗಳು ತಮ್ಮ ತರಬೇತಿ ಮುಕ್ತಾಯವಾದ ನಂತರ ಸ್ವಂತ ಉದ್ಯೋಗ ಆರಂಭಿಸಲು ಗಮನಹರಿಸಬೇಕು ಎಂದರು.
ಸಂಸ್ಥೆಯ ಪ್ರಾಚಾರ್ಯ ದಿನೇಶ್ ಆರ್. ನಾಯ್ಕ್ ಮಾತನಾಡಿ, ಇದೊಂದು ವಿಶೇಷ ದಿನವಾಗಿದ್ದು, ಕಳೆದ ವರ್ಷ ಇಂಡಿಯಾ ಸ್ಕೀಲ್ ಸ್ಪರ್ಧೆಯಲ್ಲಿ ಕನಾಟಕವನ್ನು ಪ್ರತಿನಿಧಿಸಿದ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳಿಗೆ ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಯುವ ಸಮಾರಂಭಕ್ಕೆ ವಿಶೇಷ ಆಮಂತ್ರಣ ನೀಡಿರುವುದು ಸಂತಸದ ಬೆಳವಣಿಗೆಯಾಗಿದೆ ಎಂದರು.ವಿದ್ಯಾರ್ಥಿಗಳಿಗೆ ಕೌಶಲ್ಯ ಪರೀಕ್ಷಿಸುವ ವಿವಿಧ ವೃತ್ತಿಯವರು ರಚಿಸಿದ ತಾಂತ್ರಿಕ ಮಾದರಿ ರಚನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ತರಬೇತಿ ಕೇಂದ್ರದ ಉಪನ್ಯಾಸಕರು ಹಾಗೂ ಸಾಂಸ್ಕೃತಿಕ ವಿಭಾಗದ ದಿನೇಶ್ ಡಿ. ನಾಯ್ಕ ಕಾರ್ಯಕ್ರಮ ಆಯೋಜಿಸಿದ್ದರು. ಕಿರಿಯ ತರಬೇತಿ ಅಧಿಕಾರಿ ಅವಿನಾಶ ಲೋನಿ ಕಾರ್ಯಕ್ರಮ ನಿರ್ವಹಿಸಿದರು.