ಗುಡಿಕಲಕೇರಿ ಸೇತುವೆ ಮೇಲೆ ಬೃಹತ್‌ ಗುಂಡಿ, ಸಂಚಾರಕ್ಕೆ ಸಂಚಕಾರ

KannadaprabhaNewsNetwork | Published : Apr 8, 2025 12:30 AM

ಸಾರಾಂಶ

ಜಿಲ್ಲಾ ಮುಖ್ಯ ರಸ್ತೆಯಾಗಿದ್ದರಿಂದ ಈ ಸೇತುವೆಯ ಮೂಲಕ ತಾವರಗೇರಾ, ಮುದೇನೂರು, ದೋಟಿಹಾಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ತಲುಪಬಹುದಾಗಿದ್ದು ಅನೇಕರು ಈ ಸೇತುವೆ ಮೇಲಿನ ಪ್ರಯಾಣವನ್ನೇ ಅವಲಂಬಿಸಿದ್ದಾರೆ. ರಾತ್ರಿ ಸಂಚರಿಸುವ ಸವಾರರು ಸೇತುವೆ ಮೇಲಿನ ಗುಂಡಿ ತಪ್ಪಿಸಿ ವಾಹನ ಚಲಾಯಿಸಲು ಡಬಲ್ ಗುಂಡಿಗೆ ಬೇಕು ಎನ್ನುತ್ತಾರೆ ಸ್ಥಳೀಯರು.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ತಾಲೂಕಿನ ದೋಟಿಹಾಳ ಸಮೀಪದ ಗುಡಿಕಲಕೇರಿ ಗ್ರಾಮದ ಹತ್ತಿರ ಏಳು ವರ್ಷದ ಹಿಂದೇ ನಿರ್ಮಿಸಿದ ಸೇತುವೆಯಲ್ಲಿ ಎರಡು ಅಡಿಯಷ್ಟು ಆಳವಾದ ಗುಂಡಿ ಬಿದ್ದು ನಾಲ್ಕೈದು ವರ್ಷ ಕಳೆದರು ಅಧಿಕಾರಿಗಳು ದುರಸ್ತಿಗೆ ಕ್ರಮಕೈಗೊಳ್ಳದೆ ದಿವ್ಯಮೌನ ವಹಿಸಿದ್ದಾರೆ. ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವಾಹನ ಚಲಾಯಿಸುತ್ತಿದ್ದಾರೆ.

ಇದು ಜಿಲ್ಲಾ ಮುಖ್ಯ ರಸ್ತೆಯಾಗಿದ್ದು ಈ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ಎರಡು ಅಡಿ ಆಳದಷ್ಟು ನಾಲ್ಕೈದು ಗುಂಡಿಗಳು ಬಿದ್ದಿವೆ. ಈ ಸಮಸ್ಯೆ 4 ವರ್ಷಗಳಿ೦ದ ಜೀವಂತವಿದ್ದರೂ ಅಧಿಕಾರಿಗಳು ದುರಸ್ತಿಗೆ ಮುಂದಾಗದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾ ಮುಖ್ಯ ರಸ್ತೆಯಾಗಿದ್ದರಿಂದ ಈ ಸೇತುವೆಯ ಮೂಲಕ ತಾವರಗೇರಾ, ಮುದೇನೂರು, ದೋಟಿಹಾಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ತಲುಪಬಹುದಾಗಿದ್ದು ಅನೇಕರು ಈ ಸೇತುವೆ ಮೇಲಿನ ಪ್ರಯಾಣವನ್ನೇ ಅವಲಂಬಿಸಿದ್ದಾರೆ. ರಾತ್ರಿ ಸಂಚರಿಸುವ ಸವಾರರು ಸೇತುವೆ ಮೇಲಿನ ಗುಂಡಿ ತಪ್ಪಿಸಿ ವಾಹನ ಚಲಾಯಿಸಲು ಡಬಲ್ ಗುಂಡಿಗೆ ಬೇಕು ಎನ್ನುತ್ತಾರೆ ಸ್ಥಳೀಯರು. ಮಳೆ ಬಂದರೆ ತೆಗ್ಗು ಯಾವುದು, ರಸ್ತೆ ಯಾವುದು ಎಂಬುದೇ ಕಾಣುವುದಿಲ್ಲ.

ಟೋಲ್‌ ತಪ್ಪಿಸಲು ಪ್ರಯಾಸ:

ಈ ಸೇತುವೆ ಮೂಲಕ ಮುಖ್ಯ ರಸ್ತೆಯು ನೇರವಾಗಿ ರಾಷ್ಟ್ರೀಯ ಹೆದ್ದಾರಿ ತಲುಪುವ ಕಾರಣ ನೂರಾರು ಟಿಪ್ಪರ್, ಬೃಹತ್ ಲಾರಿಗಳು ಟೋಲ್‌ ತಪ್ಪಿಸಲು ಈ ಮಾರ್ಗವನ್ನು ಅವಲಂಬಿಸಿವೆ. ಅಲ್ಪ ಹಣ ಉಳಿಸಲು ಹೋಗಿ ಅಪಘಾತ ಸಂಭವಿಸಿ ಗಾಯಗೊಂಡಿದ್ದಾರೆ. ಮುಖ್ಯರಸ್ತೆಯ ಸೇತುವೆ ದುರಸ್ತಿಗೆ ಅಧಿಕಾರಿಗಳು ಆದ್ಯತೆ ನೀಡುತ್ತಿಲ್ಲ. ಇನ್ನೂ ಸಂಪರ್ಕ ಕಲ್ಪಿಸುವ ರಸ್ತೆಗಳ ಗತಿಯೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ಐದಾರು ವರ್ಷಗಳ ಹಿಂದೇ ನಿರ್ಮಿಸಿದ ಸೇತುವೆ ಕುಸಿಯುತ್ತಿದೆ. ಇಲ್ಲಿ ಬಿದ್ದಿರುವ ಗುಂಡಿ ಮುಚ್ಚಲು ಸಹ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಸೇತುವೆಯ ಕಬ್ಬಿಣದ ರಾಡುಗಳು ಹೊರಬಂದಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಶಾಸಕರು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ಸೇತುವೆ ದುರಸ್ತಿಗೆ ಕ್ರಮಕೈಗೊಳ್ಳಬೇಕು.

ಗುಡಿಕಲಕೇರಿ, ನಡುವಲಕೊಪ್ಪ ಗ್ರಾಮಸ್ಥರುಟೋಲ್ ತಪ್ಪಿಸಲು ನೂರಾರು ವಾಹನಗಳು ಉಸುಗು, ಕಡಿ ಹಾಗೂ ದೊಡ್ಡ ಕಲ್ಲು ತುಂಬಿಕೊಂಡು ಈ ಸೇತುವೆ ಮೂಲಕ ಸಂಚರಿಸುತ್ತವೆ. ಸೇತುವೆ ಸಂಪೂರ್ಣ ಹಾಳಾಗಿದ್ದು ಶಾಸಕರ ಗಮನಕ್ಕೆ ತರಲಾಗಿದೆ. ಗ್ರಾಮಸ್ಥರೊಂದಿಗೆ ಇನ್ನೊಮ್ಮೆ ಶಾಸಕರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಲಾಗುವುದು.

ಗುರನಗೌಡ ಪಾಟೀಲ ಗ್ರಾಪಂ ಸದಸ್ಯ ಗುಡಿಕಲಕೇರಿ

Share this article